ಪ್ರೀತಿಯ ಗೆಳೆಯ, ಹೊಸ ಬಾಳ ಬಾಗಿಲಿನಲ್ಲಿ ನಿಂತಿರುವ ನಿನಗೆ ನನ್ನ ನೆನಪು ಮತ್ತೆ ಕಹಿಯಾಗಬಹುದು. ನಿನ್ನ ಪ್ರೀತಿಯ ಬಗೆ ವಿವರಿಸಲಾಗದಿದ್ದರೂ, ಎಷ್ಟೋ ಬಾರಿ, ನಾನಂದರೆ ನಿನಗಿಷ್ಟಾವಾ, ಯಾಕೆ ಇಷ್ಟ, ನಾ ಸುಂದರವಾಗಿದ್ದೇನಾ? ಪ್ಲೀಸ್ ಹೇಳು ಕಣೆ ಅಂತ ಎಷ್ಟೋ ಪ್ರಶ್ನೆಗಳನ್ನು ಕೇಳಿ ನನ್ನ ತಲೆ ತಿನ್ನುತ್ತಿದ್ದೆ. ಏನೋ ಒಂದು ನೆಪದಲ್ಲಿ ಬಿಡಿಸಿಕೊಳ್ಳುತ್ತಿದ್ದ ನನಗೆ ಈಗ ಅದರ ಸವಿನೆನಪು ಮಾತ್ರ ಕಾಡುತ್ತಿದೆ. ನನ್ನಲ್ಲಿರುವ ನಿನ್ನ ಪ್ರೀತಿಯನ್ನೆಲ್ಲಾ ಹೇಳಿ ಕಣ್ಣೀರಿಡಬೇಕೆನಿಸುತ್ತಿದೆ.
ಆ ಪ್ರೇಮವು ಹನಿಹನಿಯಾಗಿ ಮೂಡಿದ್ದರೂ, ಆ ಪ್ರೀತಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ. ಪ್ರೀತಿ ಅರ್ಥ ಪ್ರೀತಿಸುವವರಿಗೆ ಮಾತ್ರ ತಿಳಿಯುತ್ತದಂತೆ. ಆದರೂ ಜೀವನದಲ್ಲಿ ನಿನ್ನ ಪ್ರೀತಿ ಪಡೆದ ಸಾರ್ಥಕತೆಯ ಭಾವನೆ ಎಷ್ಟೋ ಬಾರಿ ಮೂಡಿದೆ. ನೀ ನನ್ನ ಬಾಳ ಸಂಗಾತಿಯಾಗಿದ್ದರೆ, ಸಾಧ್ಯವಿಲ್ಲ ಎಂಬ ಪದವೇ ನನ್ನಲ್ಲಿರುತ್ತಿರಲಿಲ್ಲ. ಪ್ರೀತಿ ಕುರುಡು ಎನ್ನುವುದು ಸತ್ಯಾನೇ, ಯಾವಾಗ, ಎಲ್ಲಿ, ಏಕೆ ಎಂಬ ಕಾರಣವೇ ಇಲ್ಲ.ಹಾಗೆ ನೋಡಿದರೆ ನೀನೇ ಹೇಳು, ನಾವಿಬ್ಬರೂ ಪರಿಚಯದವರಾ, ಇಲ್ಲಾ ಸಂಬಂಧಿಗಳೇ? ಅಲ್ಲ.
ಅಂದು ಚುಮು ಚುಮುಚಳಿಯಲ್ಲಿ, ಪೂರ್ಣ ಹೊದ್ದುಕೊಂಡು, ಏನೋ ಕಾಟಾಚಾರಕ್ಕೆ ಅಂತ ಜಾಗಿಂಗ್ ಮಾಡುತ್ತಿರುವವರೇ ಹೆಚ್ಚು ಮಂದಿ. ಅದರಲ್ಲಿ ನಾನು, ನೀನೂ ಕೂಡ, ಅಲ್ವಾ? ಯಾರ ಪರಿಚಯವೂ ಯಾರಿಗೂ ಸಿಗುತ್ತಿರಲಿಲ್ಲ. ನಿನ್ನದೇನೂ ತಪ್ಪಿಲ್ಲ ಬಿಡು, ಎಲ್ಲರೂ ಜಾಗಿಂಗ್ ಪ್ಯಾಂಟು, ಶರ್ಟು. ಹುಡುಗ ಹುಡುಗಿಯ ವ್ಯತ್ಯಾಸ ನಿನಗೇನು ತಿಳಿಯಬೇಕು. ನನ್ನದೇ ತಪ್ಪು ಬಿಡು, ನನ್ನ ಕೂದಲ ಸ್ಟೈಲ್ ಬೇರೆ ಬಾಯ್‌ಕಟ್. 'ಹಾಯ್, ಗಣೇಶ, ತುಂಬಾ ಚಳಿ ಅಲ್ವೇನೋ, ಹಾಯಾಗಿ ಮಲಗ್ಲಿಕ್ಕಾದ್ರೂ ಈ ಅಪ್ಪ ಬಿಡ್ತಾರಾ?' ಅಂತ ನನ್ನ ಹೆಗಲ ಮೇಲೆ ಕೈಹಾಕಿ ಒಮ್ಮೆಲೇ ಬಡಬಡಿಸಿದ್ದೆ. ಆಶ್ಚರ್ಯ, ಆತಂಕದಿಂದ ತಕ್ಷಣ ಕೈತೆಗೆದು, ನಿನ್ನ ಮುಖ ನೋಡಿದಾಗ, ಎಚ್ಚೆತ್ತುಕೊಂಡಂತೆ ಬೆದರಿದ, 'ಸಾರಿ, ಸಾರಿ, ನನ್ನ ಫ್ರೆಂಡ್ ಗಣೇಶ ಎಂದ್ಕೊಂಡೆ, ಸಾರಿ' ಎಂದು ಅಲ್ಲಿಂದ ಕಾಲ್ತೆಗೆದ ನಿನ್ನನ್ನು ನೋಡಿ ನಗಬೇಕೋ, ಬೈಯಬೇಕೋ ತಿಳಿಯಲಿಲ್ಲ. ಆದರೆ ಮನೆಯಲ್ಲಿ ಅಮ್ಮನ ಹತ್ರ ಹೇಳಿ ನಿನ್ನ ಪಾಡು ನೆನೆದು ನಕ್ಕಿದ್ದೆ.
ಅದೇ ಮೊದಲ ಬಾರಿ, ಅದೆಷ್ಟೊ ಬಾರಿ ನಂತರವೂ ನಿನ್ನನ್ನು ಗಮನಿಸಿದ್ದೆ, ಅಪ್ಪನ ಜೊತೆ, ಬಾಲದಂತೆ ಹಿಂಬಾಲಿಸುತ್ತಿದ್ದ ನಿನ್ನ ಮುಖದಲ್ಲಿ ನಿದ್ದೆಯೇ ಜಾಲಾಡುತ್ತಿತ್ತು. ಮೊದಮೊದಲು ನನ್ನನ್ನು ಬೆದರಿಕೆಯಿಂದ ನೋಡಿದರೂ, ನೋಡದ ಹಾಗೆ ನಟಿಸುತ್ತಿದ್ದ ಕಣ್ಣುಗಳು, ಕ್ಷಣಕ್ಷಣವೇ ಮಾತನಾಡಲಾರಂಭಿಸಿದವು. ಕಣ್ಣಿನ ಭಾಷೆ ಹೃದಯಕ್ಕೂ ತಿಳಿಯಲು ಹೆಚ್ಚು ದಿನ ಬೇಕಿರಲಿಲ್ಲ. ಮೊದಲ ಮಾತುಕತೆಯಲ್ಲಿ ಪ್ರೀತಿ ಇರಲಿಲ್ಲ. ಪರಿಚಯ, ಈ ಸ್ನೇಹ, ಮಾತುಕತೆ, ನಗು ಎಲ್ಲವೂ ಪ್ರೀತಿಯ ರೂಪವಾಯಿತು. ಅದಕ್ಕೆ ಅಲ್ವಾ ಪ್ರೀತಿ ಕುರುಡು ಅಂತ ಮೊದಲೇ ನಾನು ಹೇಳಿದ್ದು.
ಇದೆಲ್ಲ ನಿನಗೂ ನೆನಪಿರಬಹುದಲ್ಲವೇ ಗೆಳೆಯ... ನಿನ್ನಲ್ಲಿ ನಾನು ಎಲ್ಲವನ್ನೂ ಕಂಡಿದ್ದೆ. ದಿನವಿಡೀ ನಿನ್ನ ನೋಡುತ್ತಾ ಮಾತನಾಡುತ್ತಿದ್ದರೂ, ಇನ್ನೂ ನಿನ್ನೊಂದಿಗಿರಬೇಕೆಂಬ ಹಂಬಲ, ಎಷ್ಟು ಮಾತಾಡ್ತೀಯಾ ಅಂತ ಬೈಯುತ್ತಿದ್ದ ನೀನು, ಮಾತಾಡದೆ ಸ್ವಲ್ಪ ಹೊತ್ತು ಕುಳಿತರೆ, ಏನು ಸೈಲೆಂಟ್ ಆಗಿದ್ದೀಯಾ, ಏನ್ ಪ್ರಾಬ್ಲಮ್ ಅಂತ ತಕ್ಷಣವೇ ಕೇಳುತ್ತಿದ್ದೆ. ಎಷ್ಟೋ ಬಾರಿ ಸಂತೋಷದ ಕಂಬನಿ ಮಿಡಿದಿತ್ತು, ಮನಸ್ಸು ಸಾರ್ಥಕತೆಯ ಭಾವವನ್ನು ತಳೆದಿತ್ತು. ಇಷ್ಟು ಅರ್ಥ ಮಾಡಿಕೊಳ್ಳುವ ಸಂಗಾತಿ ಜೊತೆಗಿದ್ದರೆ ಜೀವನವೇ ಸಾರ್ಥಕವೆನಿಸುತ್ತಿತ್ತು. ಒಂದು ರಜಾಬಂದರೂ ಕೂಡ ನೀ ನನ್ನ ಜೊತೆ ಅಲೆಯುತ್ತಿದ್ದೆ.
ಸಂಜೆಯ ವೇಳೆ ತಂಪಾದ ಗಾಳಿಯಲ್ಲಿ ತೀರದಲ್ಲಿ ಕುಳಿತು ಸುಖ, ಕಷ್ಟ ಹಂಚಿಕೊಳ್ಳುತ್ತಾ ತಿಂದ ಐಸ್‌ಕ್ರೀಮ್, ಪಾನಿಪೂರಿ, ಒಟ್ಟಾಗಿ ಕಂಡ ಕನಸು, ಗ್ಯಾರಂಟಿ ನಿನಗೆ ಸ್ಕೂಟಿ ಕೊಡಿಸುತ್ತೇನೆ ಅಂತ ಸಾವಿರ ಬಾರಿ ಸುಳ್ಳು ಹೇಳಿದ್ದೆ. ಆದರೆ ನನ್ನ ಬರ್ತ್‌ಡೇ ದಿನದಂದು ಅದನ್ನು ನಿಗದಿಪಡಿಸಿದ್ದೆ ಅಂತಲೂ ನನಗೂ ತಿಳಿದಿತ್ತು. ಆದರೆ ಅದಕ್ಕೂ ಮುಂಚೆಯೇ ನನ್ನನ್ನು ಒಂಟಿಯಾಗಿಸಿ ನಿನ್ನದೇ ಬಾಳ ಹಾದಿಯನ್ನು ಹಿಡಿದೆ. ನೀನೇ ನನ್ನ ಸರ್ವಸ್ವ ಎನ್ನುತ್ತಿದ್ದ ನೀನು ಒಂದು ದಿನ, 'ಪ್ಲೀಸ್ ಬೇಗ ಬಾ, ನಿನ್ನೊಂದಿಗೆ ಮಾತನಾಡಬೇಕು, ಹತ್ತಿರದ ಶೆಟ್ರ ಅಂಗಡಿಯಲ್ಲಿ ಕಾಯ್ತಾ ಇರ್ತೆನೆ. ಬೇಗ ಬಾ' ಎಂದಾಗಲೂ, ನಿನ್ನ ಧ್ವನಿಯಲ್ಲಿರುವ ನೋವು ಅರ್ಥ ಮಾಡಿಕೊಳ್ಳದಾದೆ. ಹೀಗೆ ಸುಮ್ಮೆ ಜೋಕ್‌ಗೆ ನಾ ಬೇಗ ಬರಲಿ ಅಂತ ಹೇಳುತ್ತಿರಬೇಕು ಎಂದುಕೊಂಡೆ.
ಆದರೂ ಅಮ್ಮನಲ್ಲಿ ಸುಳ್ಳು ಹೇಳಿ ಹೊರಟ ಮನಸ್ಸು ಸಂತೋಷದಲ್ಲಿ ತೇಲಾಡುತ್ತಿತ್ತು. ಆದರೆ, ನಿನ್ನ ಮುಖ ನೋಡಿದಾಗಲೇ ಏನೋ ಪ್ರಾಬ್ಲಮ್ ಇದೆ ಎಂದುಕೊಂಡೆ. ಯಾವತ್ತೂ ನಿನ್ನನ್ನು ಈ ರೀತಿ ನೋಡಿಯೇ ಇರಲಿಲ್ಲ. ಎಲ್ಲವೂ ಸಲೀಸಾಗಿ, ಸದಾ ಎಂಜಾಯ್ ಮಾಡುತ್ತಿದ್ದ ನಿನ್ನ ಮುಖ ಅಂದು ಗಂಭೀರವಾಗಿತ್ತು. ಈ ಗಂಭೀರತೆ ನಿನಗೆ ಹೋಲುವುದಿಲ್ಲ ಎಂದು ಹೇಳಬೇಕೆನಿಸಿತು. ಆದರೆ ಮಾತೇ ಹೊರಡಲಿಲ್ಲ. ತುಂಬಾ ದೂರದವರೆಗೂ ಎಂದೂ ಆವರಿಸದ ಮೌನವಿತ್ತು. ಎತ್ತ ಕಡೆ ಹೋಗುತ್ತಿದ್ದಾನೆ ಎಂದು ನಿನಗೇ ತಿಳಿದಿರಲಿಲ್ಲ ಅಲ್ವಾ? ನಾನೇ ಮಾತಿಗಿಳಿದೆ, ಏನಾಯಿತು? ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದೀಯಾ ಎಂದಾಗ ಎಚ್ಚೆತ್ತುಕೊಂಡವನ ಕಣ್ಣಿನಲ್ಲಿ ಕಂಬನಿಯೇ ತುಂಬಿತ್ತು.
ಅಲ್ಲೇ ಹತ್ತಿರದಲ್ಲಿ ಕುಳಿತುಕೊಂಡು ಸಮಾಧಾನಿಸುವಾಗ ನೀನು ಏನೂ ಹೇಳಿರಲಿಲ್ಲ. ಚಿಕ್ಕ ಮಗುವಿನಂತೆ ಬಿಕ್ಕಿ ಬಿಕ್ಕಿ ಅತ್ತಿದ್ದೆ. ನಿನ್ನನ್ನು ಸಮಾಧಾನಿಸಲು ಪ್ರಯತ್ನಿಸಿ ನಾನೂ ಅತ್ತಿದ್ದೆ. ಆ ಅಳುವಿನಲ್ಲಿ "ಪ್ಲೀಸ್ ಪ್ರಿಯಾ, ನನ್ನನ್ನು ದಯವಿಟ್ಟು ಮರೆತುಬಿಡು" ಎಂದಾಗ ಉಸಿರೇ ಕಟ್ಟಿದಂತಾಗಿತ್ತು. ಆದರೆ ನಿನ್ನ ಪರಿಸ್ಥಿತಿಯನ್ನು ವಿವರಿಸಿದ ನಂತರ ನಿನ್ನನ್ನೂ ಬಲವಂತ ಮಾಡುವ ಶಕ್ತಿಯೂ ನನಗಿರಲಿಲ್ಲ. ನನ್ನನ್ನು ಗಮನಿಸಿದ ನೀನು 'ಕ್ಷಮಿಸಿಬಿಡು' ಎಂದು ಕೈಹಿಡಿದು ಅತ್ತಾಗ ಕನಸುಗಳೆಲ್ಲವೂ ನನ್ನನ್ನು ಟೀಕಿಸುತ್ತಾ ನೆಲಕ್ಕುರುಳುತ್ತಿದ್ದವು. ಮುಂದೇನು ಎಂಬುದು ಊಹೆಗೂ ನಿಲುಕಿರಲಿಲ್ಲ. ಅಷ್ಟೇ. ಮುಗಿದಿತ್ತು ನಮ್ಮ ಪ್ರೇಮಾಯಣ ಅಂದು. ಅಂದೇ ತಿಳಿದಿತ್ತು ನೀ ನನ್ನವನಲ್ಲ ಎಂದು.
ಆದರೂ ಈ ಮನಸ್ಸು ಕೇಳಬೇಕಲ್ಲ, ನಿನ್ನನ್ನು ನೋಡಬೇಕು, ಮಾತನಾಡಬೇಕೆಂಬ ಹಂಬಲ. ನೀನಿಲ್ಲದೆ ಜೀವನವೇ ಬರೀ ನೋವಾಗಿರಲಿಲ್ಲ, ನೋವಾಗಿದ್ದರೆ ಸಹಿಸಿಕೊಳ್ಳುತ್ತಿದ್ದೆ. ಆದರೆ ಅದು ಅದಕ್ಕೂ ಮಿಗಿಲು. ಎಷ್ಟೋ ರಾತ್ರಿಗಳು ನಿದ್ದೆ ಇಲ್ಲದೆ ಕಳೆದೆ. ಎಷ್ಟೋ ರಾತ್ರಿ ಕಂಬನಿಯನ್ನೂ ಸುರಿಸಿದೆ, ಯಾರಲ್ಲೂ ತೋಡಿಕೊಳ್ಳಲಾಗದ ದುಃಖ. ಕನಿಷ್ಠ ಫೋನ್ ಅದ್ರೂ ಮಾಡ್ತೇನೆ ಅಂತ ನಂಬರ್ ಕೂಡ ಒತ್ತಿದೆ. ಆದರೆ ಕಾಲ್ ಬಟನ್ ಒತ್ತುವ ಶಕ್ತಿ ನನಗಿರಲಿಲ್ಲ, ಕಾಲ ಮಿಂಚಿ ಹೋಗಿದೆ ಎನಿಸಿತ್ತು. ಮತ್ತೆ ಎರಡೇ ವಾರದಲ್ಲಿ ನಿನ್ನ ಮದುವೆಯೂ ಮುಗಿದುಹೋಗಿತ್ತು. ನಿನ್ನಲ್ಲಿ ನನಗೆ ಕೋಪ ಇರಲಿಲ್ಲ, ಏಕೆ ಗೊತ್ತಾ ನಮ್ಮಿಬ್ಬರ ಪ್ರೀತಿ ನಿಷ್ಕಲ್ಮಷವಾಗಿತ್ತು. ನಿನ್ನ ಪರಿಸ್ಥಿತಿ ನಿನ್ನನ್ನು ಹೀಗೆ ಬದಲಿಸಿತ್ತು. ಎಲ್ಲದಕ್ಕೂ ಋಣಾನುಬಂಧವಿರಬೇಕಂತೆ. ಇರಲಿ ಬಿಡು. ನೀ ಖುಷಿಯಾಗಿದ್ದರೆ ನಾನು ಖುಷಿ. ಸದಾ ಸಂತೋಷದಿಂದ ನಿನ್ನ ಭವಿಷ್ಯದ ಕನಸುಗಳೆಲ್ಲ ನನಸಾಗಿಸಲಿ ಎಂದು ಹಾರೈಸುವ...