ವೆಲೆಂಟೈನ್ಸ್ ಡೇ ಬಂದಿತೆಂದರೆ ಪ್ರೇಮಕ್ಕೇ ಮೀಸಲು ಎಂದು ಎಲ್ಲರೂ ನಂಬಿ ಬಿಟ್ಟಿರುವ ಗುಲಾಬಿ ಹೂವುಗಳಿಗೆ ಎಲ್ಲಿಲ್ಲದ ಬೇಡಿಕೆ. ಪ್ರೇಮದೇವತೆಯನ್ನು ಒಲಿಸಿಕೊಳ್ಳಲು ಗುಲಾಬಿ ಹೂವು ಪರಮ ಅಸ್ತ್ರ. ಅಂಥ ಗುಲಾಬಿ ಹೂವುಗಳ ವಿಶ್ವಾದ್ಯಂತ ಬೇಡಿಕೆಯನ್ನು ಪೂರೈಸುತ್ತಿದೆ ಹೊಸೂರು ಸಮೀಪವಿರುವ ಗುಲಾಬಿ ತೋಟ.
ಇಲ್ಲಿ ಈ ಬಾರಿ ವೆಲೆಂಟೈನ್ಸ್ ದಿನದಂದು 30 ಲಕ್ಷ ಗುಲಾಬಿ ಹೂವುಗಳನ್ನು ರಫ್ತು ಮಾಡುವ ಗುರಿ ಇದೆ. ಏಷ್ಯಾದ ಅತಿದೊಡ್ಡ ಗುಲಾಬಿ ತೋಟವಿರುವುದು ಕೃಷ್ಣಗಿರಿ ಜಿಲ್ಲೆಯ ಅಮುದಗೊಂಡನಪಲ್ಲಿ ಎಂಬ ಪುಟ್ಟ ಹಳ್ಳಿಯಲ್ಲಿ. ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿರುವ ಟಾನ್‌ಫ್ಲೋರಾ ಇನ್ಫ್ರ್ರಾಸ್ಟ್ರಕ್ಚರ್ ಪಾರ್ಕನ್ನು ಪೋಷಿಸುತ್ತಿರುವುದು ತಮಿಳುನಾಡು ಕೈಗಾರಿಕಾ ಅಭಿವೃದ್ಧಿ ಕಾರ್ಪೊರೇಶನ್ (ಟಿಡ್ಕೋ) ಮತ್ತು ಬೆಂಗಳೂರು ಮೂಲದ ಎಂಎನ್ಎ ಅಸೋಸಿಯೇಟ್ಸ್ ಸಂಸ್ಥೆ.
25 ಮಂದಿ ಗುಲಾಬಿ ಬೆಳೆಗಾರರು ಸೇರಿಕೊಂಡು ನಡೆಸುತ್ತಿರುವ 22 ಕೋಟಿ ರೂ.ಗಳ ಈ ಸಹಕಾರ ಸಂಘವು 54 ಗ್ರೀನ್‌ಹೌಸ್‌ಗಳಲ್ಲಿ ಈ ಬಾರಿ 20 ಲಕ್ಷ ಗುಲಾಬಿ ರಫ್ತು ಹೆಚ್ಚಿಸಿಕೊಳ್ಳುವ ಗುರಿ ಹೊಂದಿದೆ. ಇಲ್ಲಿಂದ ಯೂರೋಪ್, ಆಸ್ಟ್ರೇಲಿಯಾ, ಏಷ್ಯಾದ ಮಧ್ಯಪೂರ್ವ ಮತ್ತಿತರ ರಾಷ್ಟ್ರಗಳಿಗೆ ಇಲ್ಲಿಂದ ಗುಲಾಬಿ ಪೂರೈಕೆಯಾಗುತ್ತಿದೆ.
ಇಲ್ಲಿ ವೈವಿಧ್ಯಮಯ ಗುಲಾಬಿ ಹೂವುಗಳು ವಿವಿಧ ಬಣ್ಣ, ವಿಭಿನ್ನ ಸುವಾಸನೆಗಳೊಂದಿಗೆ ಕಣ್ಣು-ಮನ ಸೆಳೆಯುತ್ತವೆ. ಕಡು ಕೆಂಪು ಬಣ್ಣದ ತಾಜ್ ಮಹಲ್ ಎಂಬ ಪೇಟೆಂಟ್ ಉಳ್ಳ ತಳಿಯ ಗುಲಾಬಿಗಳಿಗೆ ದೇಶೀಯವಾಗಿ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಅತ್ಯಂತ ಹೆಚ್ಚು ಬೇಡಿಕೆ. ಅದು ಅದರ ಪ್ರಕಾಶಮಾನ ಸೌಂದರ್ಯಕ್ಕಾಗಿ. 2009ರೊಳಗೆ ಸುಮಾರು 75 ಲಕ್ಷ ತಾಜ್‌ಮಹಲ್ ಗುಲಾಬಿ ಹೂವುಗಳನ್ನು ರಫ್ತು ಮಾಡುವ ಉದ್ದೇಶವನ್ನು ಟಾನ್‌ಫ್ಲೋರಾ ಹೊಂದಿದೆ ಎಂದಿದ್ದಾರೆ ಟಾನ್‌ಫ್ಲೋರಾ ಆಡಳಿತ ನಿರ್ದೇಶಕ ನಜೀಬ್ ಅಹ್ಮದ್.
ತಾಜ್‌ಮಹಲ್ ಹೂವು ಎರಡು ವಾರ ಏನೂ ಆಗುವುದಿಲ್ಲ. ಈಗಾಗಲೇ 30 ವಿಭಿನ್ನ ಮಾದರಿಯ ಗುಲಾಬಿ ಹೂವುಗಳನ್ನು ಮಾರುಕಟ್ಟೆಗೆ ಇಳಿಸಲಾಗಿದ್ದು, ಇನ್ನೂ 120 ತಳಿಗಳ ಬಗ್ಗೆ ಇಲ್ಲಿನ ಪಾಲಿ ಹೌಸ್‌ಗಳಲ್ಲಿ ಸಂಶೋಧನೆ ಮಾಡಲಾಗುತ್ತಿದೆ.