ಮನೆಯ ಪರಿಸರದಲ್ಲಿ ಗಿಡ ಮರಗಳನ್ನು ನೆಡುವಾಗ ಕೆಲವು ವಾಸ್ತು ಸಂಬಂಧಿತ ಕಾರ್ಯಗಳ ಬಗ್ಗೆ ಎಚ್ಚರ ವಹಿಸಬೇಕಾಗಿದೆ.ಕೆಲವು ಮರಗಳು ಋಣಾತ್ಮಕ ಪ್ರಭಾವವನ್ನು ಬೀರುವಂತವುಗಳಾಗಿದ್ದು ಅವುಗಳನ್ನು ಮನೆ ಪರಿಸರದಿಂದ ಆದಷ್ಟು ದೂರವಿರಿಸಿದರೆ ಉತ್ತಮ. ದುಷ್ಟ ಶಕ್ತಿಗಳನ್ನು ಆಕರ್ಷಿಸುವ ಮರಗಳು, ಬೇಗನೆ ಮುರಿದು ಬೀಳುವಂತಹ ಮರಗಳು, ಕಾಂಡದಲ್ಲಿ ಹಾಲಿರುವ ಮರಗಳು ಇತ್ಯಾದಿಗಳನ್ನು ಮನೆಯಿಂದ ಆದಷ್ಟು ದೂರವಿರಿಸಿದರೆ ಉತ್ತಮ.
ಕಾಸರಕ, ಬೇವಿನ ಮರ, ಹಾಳೆಮರ, ಪಪ್ಪಾಯಿ ಮೊದಲಾದವುಗಳನ್ನು ಸಾಮಾನ್ಯವಾಗಿ ಮನೆಯ ಹತ್ತಿರದಲ್ಲಿ ನೆಡಬಾರದು. ಹಿತ್ತಿಲಲ್ಲಿ ಇವುಗಳನ್ನು ಬೆಳೆಸುವುದರಿಂದ ಅಷ್ಟು ದೋಷಗಳೇನೂ ತಲೆದೋರುವುದಿಲ್ಲ.
ಮೇಲೆ ತಿಳಿಸಿದಂತಹ ಮರಗಳು ಋಣಾತ್ಮಕ ಗುಣಗಳನ್ನು ಆಕರ್ಷಿಸುವ ಶಕ್ತಿಯುಳ್ಳವುಗಳಾಗಿವೆ.ಇವುಗಳು ಮನೆಯ ಸಮೀಪವಿದ್ದರೆ ಪೈಶಾಚಿಕ ಶಕ್ಕಿಗಳ ಸಾನಿಧ್ಯದಿಂದಾಗಿ ದೃಷ್ಟಿ ದೋಷವು ಉಂಟಾಗಲು ಸಾಧ್ಯತೆ ಇದೆ. ಭಾಗ್ಯದೋಷ, ಆಪತ್ತುಗಳನ್ನು ಇವುಗಳು ಆಹ್ವಾನಿಸುತ್ತವೆ ಎಂದು ವಾಸ್ತು ಶಾಸ್ತ್ರವು ಹೇಳುತ್ತದೆ.
ಅಲಂಕಾರಕ್ಕಾಗಿ ಬಳಸುವ ಹೂಗಳಿರುವ ಕಳ್ಳಿಗಿಡದಂತಿರುವ ಸಸ್ಯಗಳನ್ನು ವರ್ಜಿಸುವುದು ಒಳ್ಳೆಯದು. ತಾಳೆಮರದಿಂದಲೂ ದೋಷವುಂಟಾಗಲು ಸಾಧ್ಯವಿರುವುದರಿಂದಾಗಿ ಇದನ್ನು ಹೋಲುವಂತಿರುವ ಅಲಂಕಾರಿಕ ಸಸ್ಯಗಳನ್ನು ಸಹ ಮನೆಯಲ್ಲಿರಿಸುವುದು ಒಳ್ಳೆಯದಲ್ಲ. ಆದರೆ ಕೊನ್ನೆ ಹೂ, ದೇವದಾರು ಮೊದಲಾದ ವೃಕ್ಷಗಳನ್ನು ನೆಡುವುದರಿಂದ ಇಂತಹ ದೋಷಗಳನ್ನು ಹೋಗಲಾಡಿಸ ಬಹುದು.