ಈಶಾನ್ಯದಿಕ್ಕಿನಲ್ಲಿ ಅಗಲ ಕಿಟಕಿ, ಬಾಗಿಲುಗಳಿಂದ ಸಮೃದ್ಧಿ

ಬುಧವಾರ, 30 ಸೆಪ್ಟಂಬರ್ 2015 (19:08 IST)
ನಮ್ಮ ದಿನ ನಿತ್ಯದ ಚಟುವಟಿಕೆಗಳ ಮೇಲೆ ನಾವು ವಾಸಿಸುವ ಮನೆಯು ಪರಿಣಾಮ ಬೀರುತ್ತದೆಂದರೆ ನಂಬಲು ಸಾಧ್ಯವಿಲ್ಲವೇ? ನಾವು ಕಟ್ಟಿಸಿದ ಮನೆಯಲ್ಲಿ ವಾಸ್ತುದೋಷವಿದ್ದರೆ ಒಂದು ಕೋಣೆಯಲ್ಲಿ ಬದಲಾವಣೆ ಮಾಡುವ ಮ‌ೂಲಕ ಮನೆ ಸಮೃದ್ಧಿ ಹೊಂದುತ್ತದೆಂದು ಭಾವಿಸಿದರೆ ನಿಮ್ಮ ಊಹೆ ತಪ್ಪು. ವಾಸ್ತುಶಾಸ್ತ್ರದ ರೀತ್ಯ ಮನೆಗೆ ಎಲ್ಲ ರೀತಿಯ ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ಆಗಲೇ ವಾಸ್ತುಶಾಸ್ತ್ರದ ಫಲವನ್ನು ನಾವು ಪೂರ್ಣ ಪ್ರಮಾಣದಲ್ಲಿ ಅನುಭವಿಸುತ್ತೇವೆ.
 
ಭೂಮಿಯ ಯಾವುದೇ ಸ್ಥಳದಲ್ಲಿ ವಿವಿಧ ಶಕ್ತಿ ಕ್ಷೇತ್ರಗಳು ಪರಸ್ಪರ ಸಂಧಿಸುತ್ತವೆ ಮತ್ತು ಛೇದಿಸುತ್ತವೆ. ಸಣ್ಣ ನಿವೇಶನಕ್ಕೆ ಕೂಡ ಇದು ಅನ್ವಯವಾಗುತ್ತದೆ. ಕಾಸ್ಮಿಕ್ ಶಕ್ತಿಗಳಾದ ಆಯಸ್ಕಾಂತೀಯ ಶಕ್ತಿ ಭೂಶಕ್ತಿಗಳು ಭೂಮಿಯ ಮೇಲೆ ತನ್ನ ಪ್ರಭಾವ ಬೀರುತ್ತಿರುತ್ತದೆ. ಚೈತನ್ಯ ಮತ್ತು ಚೈತನ್ಯಹೀನತೆಯು ವಾಸ್ತುಶಾಸ್ತ್ರದಲ್ಲಿ ವಿವರಿಸಿರುವಂತೆ ಭೂಮಿಯ ಸೌರಶಕ್ತಿಯ ಮಾರ್ಗಗಳು ಮತ್ತು ಆಯಸ್ಕಾಂತೀಯ ಶಕ್ತಿಯ ಮಾರ್ಗಗಳನ್ನು ಅವಲಂಬಿಸಿದೆ. 
 
ಬೆಳಗಿನ ಸೂರ್ಯಕಿರಣಗಳಲ್ಲಿ ವಿಪುಲ ಸಕಾರಾತ್ಮಕ ಶಕ್ತಿ ಸೂಸುತ್ತವೆ ಮತ್ತು ಅವು ದೇಹಕ್ಕೆ ಪ್ರಯೋಜನಕಾರಿ. ಆದರೆ ಮಧ್ಯಾಹ್ನದ ಸೂರ್ಯಕಿರಣ ನಕಾರಾತ್ಮಕ ಶಕ್ತಿಯನ್ನು ಸೂಸುತ್ತದೆ ಮತ್ತು ಅವು ದೇಹಕ್ಕೆ ಪ್ರಯೋಜನಕಾರಿಯಲ್ಲ ಮತ್ತು ಸುಲಭವಾಗಿ ಆಯಾಸವಾಗುತ್ತದೆ. ಈಶಾನ್ಯ ದಿಕ್ಕಿನಿಂದ ವಾಸ್ತುಪುರುಷ ತನ್ನ ಉಸಿರನ್ನು ಎಳೆದುಕೊಳ್ಳುತ್ತಾನೆ. ಈಶಾನ್ಯ ದಿಕ್ಕಿನಿಂದ ನೀವು ಪಡೆಯುವ ಶಕ್ತಿಯನ್ನು ನೈರುತ್ಯ ದಿಕ್ಕಿನಲ್ಲಿ ಸಂಗ್ರಹಿಸಬೇಕು. 
 
ಭೂಮಿಯ ಆಯಸ್ಕಾಂತ ಶಕ್ತಿಯಲ್ಲಿ ಈಶಾನ್ಯ ದಿಕ್ಕು ಸಕಾರಾತ್ಮಕ ಧ್ರುವದಂತೆ ಮತ್ತು ನೈರುತ್ಯ ನಕಾರಾತ್ಮಕ ದ್ರುವದಂತೆ ಕಾರ್ಯನಿರ್ವಹಿಸುತ್ತದೆ. ಆದ್ದರಿಂದ ನಾವು ಮನೆ ಕಟ್ಟುವಾಗ ಈಶಾನ್ಯ ಕಡೆಗಳಲ್ಲಿ ಅಗಲವಾದ ಕಿಟಕಿಗಳೊಂದಿಗೆ ಮತ್ತು ನೈರುತ್ಯ ದಿಕ್ಕಿನಲ್ಲಿ ಸಣ್ಣ ಕಿಟಕಿಗಳೊಂದಿಗೆ ಮನೆಯನ್ನು ನಿರ್ಮಿಸಬೇಕು. ಇದರಿಂದ ಸಕಾರಾತ್ಮಕ ಶಕ್ತಿ ಗರಿಷ್ಠವಾಗಿ ಹರಿದುಬಂದು ಸಾಧ್ಯವಾದಷ್ಟು ಸಂಗ್ರಹವಾಗುತ್ತದೆ ಮತ್ತು ಮನೆಯ ಅಭಿವೃದ್ಧಿಗೆ ನೆರವಾಗುತ್ತದೆ. 
 
ಭೂಮಿಯ ಆಯಸ್ಕಾಂತೀಯ ಶಕ್ತಿಗಳ ಪ್ರಮಾಣ ಮತ್ತು ಪ್ರಭಾವವು ಭೂಮಿಯ ಜೀವಿಗಳ ಜೀವನವನ್ನು ನಿರ್ಧರಿಸುತ್ತದೆ.ಪಂಚಭೂತಗಳಾದ ವಾಯು, ಅಗ್ನಿ, ಜಲ, ಭೂಮಿ ಮತ್ತು ಆಕಾಶ ನಮ್ಮ ಜೀವನವನ್ನು ನಿಯಂತ್ರಿಸುವ ಶಕ್ತಿಗಳೆನ್ನಲಾಗಿದೆ. ಆಯಸ್ಕಾಂತೀಯ ಶಕ್ತಿಯ ಬದಲಾವಣೆಯಿಂದ ತಾನೇತಾನಾಗಿ ಪಂಚಭೂತಗಳ ಕಾರ್ಯನಿರ್ವಹಣೆ ಬದಲಾಗಿ ನಮ್ಮ ಮಾನಸಿಕ ನಡವಳಿಕೆ, ಭಾವನೆಗಳು, ಜೀವನವಿಧಾನ ಅದಕ್ಕೆ ಅನುಗುಣವಾಗಿ ಬದಲಾಗುತ್ತದೆಂದು ನಂಬಲಾಗಿದೆ.
 
ಹುಣ್ಣಿಮೆ ಅಥವಾ ಅಮಾವಾಸ್ಯೆಯಂದು ಮಾನಸಿಕ ಅಸ್ವಸ್ಥ ವ್ಯಕ್ತಿಯ ಮಾನಸಿಕ ಶಕ್ತಿ ಅಲ್ಲೋಲಕಲ್ಲೋಲವಾಗಿ ಈ ಅವಧಿಯಲ್ಲಿ ಕೆಟ್ಟದಾಗಿ ವರ್ತಿಸುವುದನ್ನು ಕಂಡಿದ್ದೇವೆ.ಈಶಾನ್ಯ ದಿಕ್ಕಿನಲ್ಲಿ ಕಿಟಕಿ, ಬಾಗಿಲುಗಳ ಮ‌ೂಲಕ ನಾವು ಉಚ್ಚಶಕ್ತಿಯನ್ನು ತೆರೆದು ನೈರುತ್ಯದ ಸಣ್ಣ ಕಿಟಕಿಗಳ ನಿರ್ಮಾಣದಿಂದ ನೀಚಶಕ್ತಿಯನ್ನು ಮುಚ್ಚುವ ಮ‌ೂಲಕ ನಮ್ಮ ನಿವಾಸದಲ್ಲಿ ಉಚ್ಚಶಕ್ತಿಯನ್ನು ಸುದೀರ್ಘ ಅವಧಿವರೆಗೆ ಇರಿಸಬಹುದು. ಈ ಬಾಗಿಲು, ಕಿಟಕಿಗಳು ನಮ್ಮ ಮನೆಯಲ್ಲಿ ಸಕಾರಾತ್ಮಕ ಶಕ್ತಿಗಳ ಉಪಸ್ಥಿತಿಯನ್ನು ಸದಾ ತೆರೆದಿಡುತ್ತದೆ. ನಮ್ಮ ಕೌಟುಂಬಿಕ ಜೀವನಕ್ಕೆ ಇದು ಸಹಕಾರಿ. ಇದರಿಂದಾಗಿ ನಮ್ಮ ನೌಕರಿ, ವ್ಯವಹಾರದಲ್ಲಿ ಯಶಸ್ವಿಯಾಗಿ ಕುಟುಂಬ ಜೀವನ ಸುಖ, ಸಂತೋಷದಿಂದ ಕೂಡಿರುತ್ತದೆ.
 

ವೆಬ್ದುನಿಯಾವನ್ನು ಓದಿ