ಮನೆಯು ಯಾವ ದಿಕ್ಕಿಗೆ ಮುಖಮಾಡಿದೆಯೋ ಅದೇ ದಿಕ್ಕಿಗೆ ಮುಖ್ಯದ್ವಾರ ನಿರ್ಮಿಸುವುದು ಒಳ್ಳೆಯದು.ಬಾಗಿಲಿನ ಮುಂಭಾಗದಲ್ಲಿ ಜಗಲಿ ಇದ್ದರೆ ಅತ್ಯುತ್ತಮ.ದಕ್ಷಿಣಾಭಿಮುಖವಾಗಿರುವ ಮನೆಗೆ ಮಾತ್ರ ಮುಖ್ಯದ್ವಾರವು ದಕ್ಷಿಣ ಭಾಗಕ್ಕಿರಬಾರದು.ಪೂರ್ವ ಅಥವಾ ಪಶ್ಚಿಮ ಭಾಗಕ್ಕೆ ಅಭಿಮುಖವಾಗಿ ಮುಖ್ಯದ್ವಾರ ನಿರ್ಮಿಸಬಹುದು.
ಸಾಗುವಾನಿ,ಬೀಟಿ,ಮಹಾಗನಿ,ಹಲಸು ಮೊದಲಾದ ಉತ್ತಮವಾದ ಮರದಿಂದ ನಿರ್ಮಿಸಿದ ಬಾಗಿಲುಗಳನ್ನು ಉಪಯೋಗಿಸುವುದರಿಂದ ದೀರ್ಘ ಬಾಳ್ವಿಕೆ ಬರುವುದು.ಬಾಗಿಲುಗಳನ್ನು ನಿರ್ಮಿಸುವಾಗ ಒಂದೇ ಮರದ ಹಲಗೆಯಾದರೆ ಉತ್ತಮ.ವಿವಿಧ ಬಗೆಯ ಮರಗಳಿಂದ ಕೂಡಿದ ಬಾಗಿಲುಗಳನ್ನು ನಿರ್ಮಿಸಲೇ ಬಾರದು ಯಾಕೆಂದರೆ ವಿವಿಧ ಕಾಲಾವಸ್ಥೆಗೆ ಅನುಸಾರವಾಗಿ ಕೆಲವೊಂದು ಮರಗಳು ಸ್ಥಿತ್ಯಂತರಗೊಳಪಡುವುದರಿಂದಾಗಿ ಬಿರುಕುಗಳುಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಮುಖ್ಯಬಾಗಿಲನ್ನು ನಿರ್ಮಿಸುವಾಗ ಅಡಿಹಲಗೆಯನ್ನು ಕೊಡಲೇಬೇಕು.ವಾಸ್ತುಶಾಸ್ತ್ರದಲ್ಲಿ ಬಾಗಿಲು,ಕಿಟಿಕಿಗಳನ್ನು ನಿರ್ಮಿಸುವಾಗ ಅಂಗುಲದ ಅಳತೆ ಗಣನೆಗೆ ತೆಗೆದುಕೊಳ್ಳಲಾಗುತ್ತದೆ.ಈ ಅಳತೆಯನ್ನು ಸರಿದೂಗಿಸಬೇಕಾದರೆ ಅಡಿಹಲಗೆ ಆವಶ್ಯಕವಾಗಿದೆ.ಹರಿದಾಡುವಂತಹ ಉರಗವರ್ಗ ಜಂತುಗಳು ಒಳಗೆ ಬರದಿರುವಂತೆ ತಡೆಯಲು ಇದು ಒಳ್ಳೆಯದು.ಒಂಟಿ ಹಲಗೆ ಅಥವಾ ಎರಡು ಹಲಗೆಯಿಂದ ಮಾಡಿದ ಬಾಗಿಲುಗಳೇ ಆದರೂ ಒಳಭಾಗಕ್ಕೆ ತೆರೆಯುವಂತಿದ್ದರೆ ಅದು ಉತ್ತಮವೆಂದು ಪರಿಗಣಿಸಲಾಗುತ್ತದೆ.
ಒಂದಕ್ಕಿಂತ ಹೆಚ್ಚು ಬಾಗಿಲುಗಳಿರುವಲ್ಲಿ ಮುಖ್ಯಬಾಗಿಲು ಯಾವಾಗಲೂ ಎಲ್ಲದಕ್ಕಿಂತ ದೊಡ್ಡದಾಗಿರುವಂತೆ ಶ್ರದ್ಧೆವಹಿಸಬೇಕು.ಹಳೆಯ ಕಟ್ಟಡಗಳಿಂದ ತೆಗೆದಿರಿಸಿದಂತಹ ಬಾಗಿಲುಗಳನ್ನು ಹೊಸ ಕಟ್ಟಡಗಳಿಗೆ ಬಳಸುವುದು ಇಂದು ಸರ್ವೇಸಾಮಾನ್ಯವಾದರೂ ವಾಸ್ತುಶಾಸ್ತ್ರ ಇದನ್ನು ನಿಷೇಧಿಸುತ್ತದೆ ಮಾತ್ರವಲ್ಲ ಹೊಸ ಕಟ್ಟಡಗಳಿಗೆ ಹೊಸ ವಸ್ತುಗಳನ್ನು ಬಳಸುವುದು ಶುಭದಾಯಕ ಎಂದು ಪರಿಗಣಿಸಲ್ಪಡುತ್ತದೆ.