ಬೆಂಗಳೂರು : ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿದ್ದು, ರಾಜ್ಯದಲ್ಲಿ ಮಳೆ ಮತ್ತೆ ಆರಂಭವಾಗಲಿದೆ. ಬೆಂಗಳೂರು ಸೇರಿ 4 ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ದಕ್ಷಿಣ ಅಂಡಮಾನ್ ಸಮುದ್ರದಲ್ಲಿ 5.8 ಕಿಲೋ ಮೀಟರ್ ಎತ್ತರದಷ್ಟು ಮೇಲ್ಮೈ ಸುಳಿಗಾಳಿ ಎದ್ದಿದೆ. ಇದರ ಪ್ರಭಾವದಿಂದಾಗಿ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತಗೊಂಡಿದ್ದು,
ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಮತ್ತೆ ಮಳೆಯಾಗುವ ಸಾಧ್ಯತೆ ಇದೆ ಎಂದು ರಾಜ್ಯ ಹವಾಮಾನ ಇಲಾಖೆ ಮಳೆ ಎಚ್ಚರಿಕೆ ನೀಡಿದೆ.
ಇಂದಿನಿಂದ ಡಿಸೆಂಬರ್ 8 ರವರೆಗೆ ದಕ್ಷಿಣ ಒಳನಾಡಿನ ಜಿಲ್ಲೆಯ ಕೆಲವೆಡೆಗಳಲ್ಲಿ ಭಾರೀ ಮಳೆ ಸಾಧ್ಯತೆ ಗೋಚರಿಸಿದ್ದು, ಡಿಸೆಂಬರ್ 8, 9 ಮತ್ತು 10 ರಂದು ಗುಡುಗು ಸಹಿತ ವ್ಯಾಪಕ ಮಳೆ ಬರುವ ಸಾಧ್ಯತೆ ಬಗ್ಗೆ ಮುನ್ನೆಚ್ಚರಿಕೆ ನೀಡಲಾಗಿದೆ.