ಬೆಂಗಳೂರು : ಇನ್ಮುಂದೆ ರಾಜ್ಯದಲ್ಲಿ ನಡೆಯುವ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ಎಲ್ಲ ಕಾರ್ಯಕ್ರಮಗಳಲ್ಲೂ ಕನ್ನಡ ಕಡ್ಡಾಯ ಬಳಕೆಗೆ ಸೂಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಕೇಂದ್ರ ಸರ್ಕಾರ ಪ್ರಾಯೋಜಕತ್ವದ ಕಾರ್ಯಕ್ರಮಗಳಲ್ಲಿ ಕನ್ನಡ ಮಾಯವಾಗುತ್ತಿದೆ ಎನ್ನುವ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ಕನ್ನಡ ಬಳಕೆ ಕಡ್ಡಾಯಗೊಳಿಸುವಂತೆ ಸರ್ಕಾರದಿಂದ ಇಂದು ಸುತ್ತೋಲೆ ಪ್ರಕಟಿಸಿದೆ.
ಕನ್ನಡವನ್ನು ಕರ್ನಾಟಕ ರಾಜ್ಯದ ಆಡಳಿತ ಭಾಷೆಯಾಗಿ ಇರತಕ್ಕದ್ದೆಂದು ಕರ್ನಾಟಕ ರಾಜ್ಯ ಭಾಷಾ ಅಧಿನಿಯಮ- 1953ರಲ್ಲಿ ಸ್ಪಷ್ಟಪಡಿಸಲಾಗಿದೆ. ಕರ್ನಾಟಕದಲ್ಲಿ ಕನ್ನಡವು ಆಡಳಿತ ಭಾಷೆಯ ಜೊತೆಗೆ ಸಾರ್ವಭೌಮ ಭಾಷೆಯಾಗಿದೆ.
ಕನ್ನಡವನ್ನು ರಾಜ್ಯದಲ್ಲಿ ಆಡಳಿತ ಭಾಷೆಯಾಗಿ ಅನುಷ್ಠಾನಗೊಳಿಸುವ ಸಂಬಂಧ ಕನ್ನಡ ಭಾಷೆ ಮತ್ತು ಕನ್ನಡಿಗರ ಹಿತಾಸಕ್ತಿಯನ್ನು ಕಾನೂನಿನನ್ವಯ ಸಂರಕ್ಷಿಸುವ ಸಲುವಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಿರುತ್ತದೆ.
ರಾಜ್ಯದಲ್ಲಿ ಜರುಗುವ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳ ಆಯೋಜನೆಯಲ್ಲಿ ಕನ್ನಡವನ್ನು ಕಡ್ಡಾಯವಾಗಿ ಬಳಸತಕ್ಕದ್ದೆಂದು ಈ ಮೂಲಕ ಸೂಚಿಸಿದೆ ಎಂದು ತಿಳಿಸಿದೆ.