Select Your Language

Notifications

webdunia
webdunia
webdunia
webdunia

ಮಹಾತ್ಮ ಗಾಂಧಿ ಎಂಬ ವ್ಯಕ್ತಿಯೋರ್ವನೊಳಗಿನ ಹತ್ತಾರು ಮುಖಗಳು!

ಮಹಾತ್ಮ ಗಾಂಧಿ ಎಂಬ ವ್ಯಕ್ತಿಯೋರ್ವನೊಳಗಿನ ಹತ್ತಾರು ಮುಖಗಳು!
ಬೆಂಗಳೂರು , ಶನಿವಾರ, 2 ಅಕ್ಟೋಬರ್ 2021 (08:41 IST)
ರಾಷ್ಟ್ರಪಿತ ಮಹಾತ್ಮ ಗಾಂಧಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಇದೇ ಮಣ್ಣಲ್ಲಿ ನಿಂತು ಗಾಂಧಿಯ ಕುರಿತು ಯೋಚಿಸಿದಂತೆಲ್ಲಾ ವ್ಯಕ್ತಿಯೋರ್ವನೊಳಗಿನ ಹತ್ತಾರು ಮುಖಗಳು ಕಾಣಿಸಿಕೊಳ್ಳುತ್ತವೆ.

ಬದುಕಿನುದ್ದಕ್ಕೂ ಅವರೋರ್ವ ಹೋರಾಟಗಾರ ರಾಗಿದ್ದರು, ಅರ್ಥಶಾಸ್ತಜ್ಞರಾಗಿದ್ದರು, ಓರ್ವ ಸಂತನಾಗಿದ್ದರು, ಸತ್ಯ ಅಹಿಂಸೆಯ ಪರಿಪಾಲಕರಾಗಿದ್ದರು ಕೊನೆಗೆ ಅವರು ಕೊಲ್ಲಲೂ ಅರ್ಹ ವ್ಯಕ್ತಿಯಾಗಿ ಹೋಗಿದ್ದರು. ಭಾಗಶಃ ಭಾರತದಲ್ಲಿ ಹೀಗೆ ಎಲ್ಲವೂ ಆಗಿದ್ದ ವ್ಯಕ್ತಿ ಮತ್ತೊಬ್ಬರಿಲ್ಲ. ಆದರೆ ಗಾಂಧಿಯನ್ನು ಕೊಂದು ನಾವು ಪಡೆದದ್ದಾದರೂ ಏನೂ..? ಎಂಬ ಕುರಿತು ಪ್ರಶ್ನಿಸುತ್ತಾ ಸಾಗಿದಂತೆಲ್ಲಾ ಗಾಢವಾದ ಶೂನ್ಯವೊಂದು ಆವರಿಸುವುದು ದಿಟ.
ಜಗತ್ತಿನಲ್ಲಿ ಕೊಂದು ಉಳಿಸಿಕೊಳ್ಳುವ ಧರ್ಮವಿಲ್ಲ. ಎಲ್ಲರನ್ನೂ ಸಮನಾಗಿ ಕಾಣುವುದೇ ಹಿಂದುತ್ವ ಎಂದು ಸಾರಿದ್ದ, ತನ್ನ ಬದುಕಿನುದ್ದಕ್ಕೂ ಸತ್ಯ ಅಹಿಂಸೆಯೇ ಮೂಲಧ್ಯೇಯ ಎಂದು ನಂಬಿ ಬದುಕಿದ್ದ, ವಿಶ್ವಕ್ಕೆ ಶಾಂತಿಯನ್ನು ಪ್ರೀತಿಯನ್ನು ಹಂಚಿ ಉಂಡಿದ್ದ ಮಹಾತ್ಮ ಗಾಂಧೀಗೆ ಭಾರತೀಯರು ಕೊನೆಗೆ ನೀಡಿದ್ದು ಕೇವಲ ನೋವನ್ನಷ್ಟೆ.
1947 ಆಗಸ್ಟ್ 15 ರಂದು ಭಾರತಕ್ಕೆ ಸ್ವಾತಂತ್ರ್ಯ ಲಭಿಸಿತ್ತು. ಮೂರು ಶತಮಾನಗಳ ಕಾಲ ನಮ್ಮನ್ನು ದಾಸ್ಯಕ್ಕೊಳಪಡಿಸಿದ್ದ ಬ್ರಿಟೀಷ್ ಪಾರುಪತ್ಯ ಅಂದಿಗೆ ಅಂತ್ಯವಾಗಿತ್ತು. ಭಾರತೀಯರು ತಮ್ಮನ್ನು ತಾವೇ ಆಳ್ವಿಕೆ ಮಾಡಿಕೊಳ್ಳಬೇಕೆಂಬ ಬಹುದಿನದ ಕನಸು ನನಸಾಗಿತ್ತು. ಇಡೀ ರಾಷ್ಟ್ರದಾದ್ಯಂತ ಹರ್ಷಾಚರಣೆಗಳು ಮುಗಿಲು ಮುಟ್ಟಿತ್ತು. ಆದರೆ, ಮಹಾತ್ಮಾ ಗಾಂಧಿ ಈ ಹರ್ಷಾಚರಣೆಯ ಭಾಗವಾಗಲಿಲ್ಲ.
ಬದಲಿಗೆ ಅವರು ಯಾವ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದರೋ? ಅದು ದಕ್ಕಿದ ಮೇಲೂ ಅದೇ ದಿನ ಬಂಗಾಳದ ಕೋಮುಗಲಭೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದರು, ಕೋಮುಗಲಭೆಯನ್ನು ನಿಲ್ಲಿಸುವಂತೆ ಆಗ್ರಹಿಸಿ ಸತ್ಯಗ್ರಹ ನಡೆಸಿದ್ದರು. ಇದು ವ್ಯಕ್ತಿಯೊಬ್ಬನೊಳಗಿನ ಪ್ರಬುದ್ಧತೆಯ ಧ್ಯೋತಕ.
ಹಾಗೆ ನೋಡಿದರೆ ಗಾಂಧಿ ಪ್ರಾಣ ತೆತ್ತಿದ್ದು ನಾಥೂರಾಮ ಗೋಡ್ಸೆ ಹಾರಿಸಿದ ಗುಂಡಿನಿಂದಲ್ಲ, ಬದಲಾಗಿ ದೇಶವಿಡೀ ತಾವು ಸಾರಿದ್ದ ಪ್ರೀತಿ ಮತ್ತು ಶಾಂತಿ ತನ್ನ ಕಣ್ಣ ಮುಂದೆಯೇ ಮಣ್ಣಾಗಿದ್ದನ್ನು ಕಂಡಿದ್ದ ಗಾಂಧಿ ಅದಾಗಲೇ ಜೀವಚ್ಛವವಾಗಿದ್ದರು. ಗೋಡ್ಸೆ ಗುಂಡು ಹಾರಿಸಿದ್ದು ಬರಿಯ ದೇಹಕ್ಕಷ್ಟೇ. ಹೀಗೆ ಅಂಹಿಸೆಯನ್ನು ಸಾರಿದ್ದ ಗಾಂಧಿಗೆ ಅವರದೇ ಭಾರತದಲ್ಲಿ ಹಿಂಸೆಯ ಅಂತ್ಯವಾದದ್ದು ದುರಂತವೇ ಸರಿ..! ಆದರೆ ಅದಕ್ಕಿಂತ ದೊಡ್ಡ ದುರಂತ ಏನು ಗೊತ್ತಾ..?
ಬ್ರಿಟೀಷ್ ಭಾರತದಲ್ಲಿ ಗಾಂಧಿ ಯಾವ ವಿಚಾರಗಳನ್ನೆಲ್ಲಾ ಎದುರಿಸಿ ಬಂದೂಕಿಗೆ ಸಮನಾಗಿ ಸತ್ಯವನ್ನು ಮುಂದಿರಿಸಿ ಹೋರಾಟ ನಡೆಸಿದ್ದರೋ ಅವೆಲ್ಲವೂ ಇಂದು ಪರೋಕ್ಷವಾಗಿ ಮತ್ತೆ ದೇಶದೊಳಗೆ ಕಾಲಿಟ್ಟಿವೆ. ಆ ಮೂಲಕ ಬಾಪು ನಂತರದ ಭಾರತದಲ್ಲಿ ಮತ್ತೆ ಭಾರತ ತನ್ನ ಸ್ವರಾಜ್ಯವನ್ನು ಕಳೆದುಕೊಂಡು ನವ ವಶಾಹತುಶಾಹಿಗೆ ಒಳಪಟ್ಟಿದೆ. ಹೀಗೆ ಭಾರತೀಯರಾದ ನಾವು ಗಾಂಧಿಯನ್ನು ಕೊಂದು ಉಳಿಸಿಕೊಂಡದ್ದು ಮತ್ತದೇ ದಾಸ್ಯ, ಭಾರತೀಯರಿಗೆ ಇದಕ್ಕಿಂತ ದೊಡ್ಡ ದುರಂತ ಮತ್ತೊಂದಿಲ್ಲ.
ಭಾರತ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮಿದೆ. ಅಣುಬಾಂಬ್ ಹೊಂದಿರುವ ವಿಶ್ವದ ಕೆಲವೇ ರಾಷ್ಟ್ರಗಳಲ್ಲಿ ಪೈಕಿ ಭಾರತವೂ ಒಂದು. ಇದಲ್ಲದೆ ಆರ್ಥಿಕವಾಗಿ ಶೈಕ್ಷಣಿಕವಾಗಿಯೂ ಭಾರತ ಅಭಿವೃದ್ಧಿ ಸಾಧಿಸಿದೆ. ದೊಡ್ಡ ದೊಡ್ಡ ಕೈಗಾರಿಕೆಗಳನ್ನು ನಿರ್ಮಿಸಿರುವ ಪ್ರಭುತ್ವ ಲಕ್ಷಾಂತರ ಜನರಿಗೆ ಉದ್ಯೋಗ ನೀಡುತ್ತಿದೆ. ನಗರಗಳು ದಿನೇ ದಿನೇ ತನ್ನ ಗಾತ್ರವನ್ನು ಹೆಚ್ಚಿಸಿಕೊಳ್ಳುತ್ತಲೇ ಇವೆ. ಕಳೆದ 70 ವರ್ಷದಲ್ಲಿ ಇಷ್ಟು ಮಟ್ಟದ ಅಭಿವೃದ್ಧಿ ಸಾಧನೆಯೇ ಸರಿ..!
ಆದರೆ ಇದು ಗಾಂಧಿಯ ಕನಸಾಗಿತ್ತೆ..? ಹಾಗಾದರೆ ಗಾಂಧಿಯ ಕನಸೇನು..? ಕಳೆದ 70 ವರ್ಷಗಳಲ್ಲಿ ಭಾರತೀಯರಾದ ನಾವಾಗಲಿ ಈ ಪ್ರಭುತ್ವವಾಗಲಿ ಎಂದಾದರೂ ಈ ಕುರಿತು ಯೋಚಿಸಿತ್ತೆ? ಎಂದು ಈ ಶತಮಾನದಲ್ಲಿ ನಿಂತು ನಮ್ಮನ್ನು ನಾವು ಪ್ರಶ್ನೆ ಮಾಡಿಕೊಂಡರೆ ದಕ್ಕುವ ಉತ್ತರ ಮಾತ್ರ ಶೂನ್ಯ.
ಗಾಂಧಿ ಅತ್ಯಂತ ಸುಂದರವಾದ ಅಭಿವೃದ್ಧಿಯ ಕಲ್ಪನೆಯನ್ನು ಭಾರತಕ್ಕೆ ನೀಡಿದ್ದರು. ಗ್ರಾಮ ಕೇಂದ್ರಿತ ಅಭಿವೃದ್ಧಿ, ಗ್ರಾಮ ಕೇಂದ್ರ ಆರ್ಥಿಕತೆ ಅವರ ಕನಸಾಗಿತ್ತು. ಅಲ್ಲದೆ, ಇದು ಅಭಿವೃದ್ಧಿಯ ಕುರಿತ ಎಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರವಾಗಿತ್ತು. 1) ಸ್ವರಾಜ್ಯ 2) ಅಹಿಂಸೆ 3) ಸ್ವದೇಶಿ ಯನ್ನು ಬೆಂಬಲಿಸಿದ್ದರು. ಅಲ್ಲದೆ, 4) ಪಾಶ್ಚಾತ್ಯ ಸಂಸ್ಕೃತಿಯನ್ನು ಅವರು ವಿರೋಧಿಸಿದ್ದರು. ಪಾಶ್ಚಿಮಾತ್ಯ ಸಂಸ್ಕೃತಿಯ ಪಾಲನೆ ಎಂಬುದು ನಮ್ಮ ಅಸ್ಥಿತ್ವದ ಸ್ವಯಂ ನಾಶ ಎಂದು ಅವರು ಬಲವಾಗಿ ನಂಬಿದ್ದರು. ಆದರೆ ಅವರ ಅಂತ್ಯದ ನಂತರ ನಾವು ಮಾಡಿದ್ದಾದರೂ ಏನು..?
ಅವರ ಮೊದಲ ತತ್ವ ಸ್ವರಾಜ್ಯ ಅಂದರೆ ನಮ್ಮನ್ನು ನಾವೇ ಆಳ್ವಿಕೆ ಮಾಡಿಕೊಳ್ಳಬೇಕು ಎಂಬ ತತ್ವಕ್ಕೆ ಭಾರತೀಯರು ಎಳ್ಳು ನೀರು ಬಿಟ್ಟು ದಶಕಗಳೇ ಆಗಿವೆ. ಭಾರತ ಸ್ವಾತಂತ್ರ್ಯಾ ನಂತರ ಅಭಿವೃದ್ಧಿಯ ದೆಸೆಯಿಂದಾಗಿ 1992ರಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅನುವು ಮಾಡಿಕೊಟ್ಟೆವು. ಅಂದು ಬಂದೂಕು ಹಿಡಿದು ದೇಶಕ್ಕೆ ನುಗ್ಗಿದ ಬಿಳಿಯರು ಇಂದು ಅದೇ ಕೈಲಿ ಹಣದ ತೈಲಿ ಹಿಡಿದು ನುಗ್ಗಿದ್ದಾರೆ. ಪರಿಣಾಮ ಇಂದು ಅಕ್ಷರಶಃ ಇಡೀ ದೇಶ ಕಾರ್ಪೋರೇಟ್ ಕೈಲಿದೆ. ನೆಪಕ್ಕಷ್ಟೆ ನಮ್ಮ ನಾಯಕರು ಆಳ್ವಿಕೆ ಮಾಡುತ್ತಿದ್ದಾರೆ.
ಕೇವಲ 35 ಸಾವಿರ ಕೋಟಿ ರೈತರ ಸಾಲ ಮನ್ನಾ ಆಗದ ಇದೇ ದೇಶದಲ್ಲಿ ಯಾವುದೇ ಪ್ರಶ್ನೆ ಹಾಗೂ ಪ್ರತಿಭಟನೆ ಇಲ್ಲದೆ 1.8 ಲಕ್ಷ ಕೋಟಿ ಕಾರ್ಪೋರೇಟ್ ಸಾಲ ಮನ್ನಾ ಆಗುತ್ತದೆ. 50 ಸಾವಿರ ಸಾಲ ಮರುಪಾವತಿಸಲಾದೆ ರೈತ ಆತ್ಮಹತ್ಯೆ ಮಾಡಿಕೊಳ್ಳುವ ಇದೇ ದೇಶದಲ್ಲಿ ಕೆಲವು ಕಾರ್ಪೋರೇಟ್ ಸಂಸ್ಥೆಯ ಮಾಲೀಕರು ಸಾವಿರಾರು ಕೋಟಿ ಸಾಲ ಮಾಡಿ ಬ್ಯಾಂಕ್ಗೆ ಬೆನ್ನು ತೋರಿಸಿ ವಿದೇಶದಲ್ಲಿ ವಿಲಾಸಿ ಬದುಕು ಸಾಗಿಸುತ್ತಿದ್ದಾರೆ ಎಂದರೆ ನೀವೆ ಯೋಚಿಸಿ ಗಾಂಧೀಯ ಸ್ವರಾಜ್ಯ ಎಲ್ಲಿಗೆ ಬಂದು ನಿಂತಿದೆ ಎಂದು.
ಇನ್ನೂ ಗಾಂಧಿಯ ಎರಡನೇ ತತ್ವವಾದ ಅಹಿಂಸೆಯ ಕುರಿತು ಭಾರತದಲ್ಲಿ ಮಾತನಾಡ ದಿರುವುದೇ ಲೇಸು. ಇಲ್ಲಿ ಬಡತನದಿಂದ ಹೊಟ್ಟೆ ಹಸಿದು ಸತ್ತವರಿಗಿಂತ ದನದ ಮಾಂಸ ತಿಂದು ಹಿಂದುತ್ವವಾದಿಗಳು ಎಂಬ ಹಣೆಪಟ್ಟಿ ಹೊಂದಿರುವ ಕೆಲವು ವ್ಯಕ್ತಿಗಳ ಕ್ರೌರ್ಯಕ್ಕೊಳಗಾಗಿ ಪ್ರಾಣ ಬಿಟ್ಟವರ ಸಂಖ್ಯೆಯೇ ಅಧಿಕ.
ಗಾಂಧೀ ಸ್ವತಃ ಗೋಹತ್ಯೆಯನ್ನು ವಿರೋಧಿಸಿದ್ದರೂ ಸಹ ಗೋಹತ್ಯೆ ಕಾನೂನಾ ಗಬೇಕೆಂದು ಅವರು ಬಯಸಿರಲಿಲ್ಲ. ಹಿಂದೂಗಳಲ್ಲದವರ ಮೇಲೆ ಹಿಂದೂಗಳ ಧಾರ್ಮಿಕ ಭಾವನೆಯನ್ನು ಹೇರುವುದು ಸರಿಯಲ್ಲ ಎಂಬುದು ಅವರ ನಿಲುವಾಗಿತ್ತು. ಕಾರಣ "ಭಾರತ ದೇಶ ಎಂಬುದು ಕೇವಲ ಹಿಂದೂಗಳ ರಾಷ್ಟ್ರವಲ್ಲ, ಬದಲಿಗೆ ಭಾರತ ಎಂಬುದು ಇಲ್ಲಿ ವಾಸಿಸುವ ಎಲ್ಲರ ರಾಷ್ಟ್ರವೂ ಹೌದು!" ಎಂದು ಅವರು ಬಲವಾಗಿ ನಂಬಿದ್ದರು.
ಭಾರತೀಯರು ಸ್ವದೇಶಿ ವಸ್ತುಗಳನ್ನೇ ಬಳಸಬೇಕು ಎಂದು ಕರೆ ನೀಡಿದ್ದ ಗಾಂಧಿ ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಬಹುವಾಗಿ ಖಂಡಿಸಿದ್ದರು. ಪಾಶ್ಚಿಮಾತ್ಯ ಸಂಸ್ಕೃತಿ ಎಂಬುದು ನಮ್ಮ ತನವನ್ನು ಕೊಲ್ಲುತ್ತದೆ. ಈ ಸಂಸ್ಕೃತಿಯನ್ನು ಪಾಲಿಸುವುದು ಎಂದರೇ ನಮ್ಮನ್ನು ನಾವೇ ನಾಶ ಮಾಡಿಕೊಂಡತೆ ಎಂಬುದು ಗಾಂಧೀಯ ನಿಲುವಾಗಿತ್ತು. ಆದರೆ ಗಾಂಧೀ ನಂತರದ ಭಾರತದಲ್ಲಿ ನಾವು ಮಾಡಿದ್ದಾದರೂ ಏನು..?
ವಿದೇಶಿ ನೇರ ಹೂಡಿಕೆಯ ಮೂಲಕ ಸ್ವತಂತ್ರ್ಯವಾಗಿ ದೇಶದ ಒಳಬಂದ ಬಹುರಾಷ್ಟ್ರೀಯ ಕಂಪೆನಿಗಳು ತಮ್ಮ ಜತೆಗೆ ತಮ್ಮ ಸಂಸ್ಕೃತಿಯನ್ನೂ ಹೊತ್ತು ತಂದವು. ಈ ಕಂಪೆನಿಗಳು ಮೊದಲು ಭಾರತೀಯರ ಆಹಾರ ವೈವಿಧ್ಯತೆಯನ್ನು ನಾಶ ಮಾಡಿದವು. ಮುದ್ದೆ ಉಣ್ಣುತ್ತಿದ್ದ ಕೈಗಳಿಗೆ ಫಿಜ್ಜಾ ಪೆಪ್ಸಿ ಬಂದವು. ಕಾಲಾನಂತರದಲ್ಲಿ ಭಾರತೀಯರ ಉಡುಗೆಗಳ ಶೈಲಿ ಬದಲಾದವು. ಭಾರತೀಯ ವಿವಿಧ ಭಾಷಾ ಸಂಸ್ಕೃತಿ ಬದಲಾಗಿ ಏಕಭಾಷೆ ಇಂಗ್ಲೀಷ್ ತನ್ನ ಪಾರಮ್ಯ ಸಾಧಿಸಿತು. ಇಂದು ಈ ಸ್ಥಾನವನ್ನು ಹಿಡಿಯಲು ಹಿಂದಿ ಪರಿತಪಿಸುತ್ತಿದೆ ಎಂಬುದು ಬೇರೆ ವಿಚಾರ. ಶಿಕ್ಷಣ ಶೈಲಿ ಬದಲಾಯಿತು, ಕೊನೆಗೆ ಭಾರತೀಯರ ಬದುಕುವ ಶೈಲಿಯನ್ನೇ ಈ ಕಂಪೆನಿಗಳು ಸಂಪೂರ್ಣ ಬದಲಾಯಿಸಿದವು.
ಇಂದು ನಾವು ಆಧುನಿಕತೆ, ನವೀನತೆ ಎಂಬ ಹೆಸರಿನಲ್ಲಿ ಯಾವುದನ್ನು ನಂಬಿ ಬದುಕುತ್ತಿದ್ದೇವೋ ಇವೆಲ್ಲಾ ಬಹುರಾಷ್ಟ್ರೀಯ ಕಂಪೆನಿಗಳ ಯೋಚಿತ ಪ್ರಚಾರದ ಫಲ ಎಂಬುದನ್ನು ಅಲ್ಲಗೆಳೆಯುವಂತಿಲ್ಲ. ಅಂದರೆ ಒಂದಿಡೀ ಸಂಸ್ಕೃತಿಯ ವೈವಿಧ್ಯತೆಯ ನಾಶಕ್ಕೆ ಈ ಕಂಪೆನಿಗಳ ಕೊಡುಗೆಯೂ ಅಪಾರ.


Share this Story:

Follow Webdunia kannada

ಮುಂದಿನ ಸುದ್ದಿ

ಶಾಲಾ ಮಕ್ಕಳಿಗೆ ಮತ್ತೊಂದು ಗುಡ್ ನ್ಯೂಸ್