Select Your Language

Notifications

webdunia
webdunia
webdunia
webdunia

ವರ್ಗಾವಣೆ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ನಿರಾಸೆ- ಶಿಕ್ಷಣ ಇಲಾಖೆಯಿಂದ ಹೊರಟಿತು ಸುತ್ತೋಲೆ

ವರ್ಗಾವಣೆ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ನಿರಾಸೆ- ಶಿಕ್ಷಣ ಇಲಾಖೆಯಿಂದ ಹೊರಟಿತು ಸುತ್ತೋಲೆ
ಬೆಂಗಳೂರು , ಗುರುವಾರ, 16 ಸೆಪ್ಟಂಬರ್ 2021 (10:40 IST)
ಬೆಂಗಳೂರು : ಶಿಕ್ಷಕರ ವರ್ಗಾವಣೆಗೆ ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ(ಕೆಎಟಿ) ತಡೆಯಾಜ್ಞೆ ನೀಡಿರುವ ಹಿನ್ನೆಲೆಯಲ್ಲಿ ವರ್ಗಾವಣೆ ಪ್ರಕ್ರಿಯೆ ತಾತ್ಕಾಲಿಕವಾಗಿ ಮುಂದೂಡಲಾಗಿದ್ದು, ಮುಂದಿನ ದಿನಾಂಕವನ್ನು ತಿಳಿಸಲಾಗುವುದು ಎಂದು ಶಿಕ್ಷಣ ಇಲಾಖೆ ಅಧಿಕೃತವಾಗಿ ಸುತ್ತೋಲೆ ಹೊರಡಿಸಿದೆ.

ಸೆ.8ರಂದು ಕೆಎಟಿ 2020-21ನೇ ಸಾಲಿನ ಶಿಕ್ಷಕರ ವರ್ಗಾವಣೆಗೆ ತಡೆಯಾಜ್ಞೆ ನೀಡಿತ್ತು. ಈ ಹಿನ್ನೆಲೆಯಲ್ಲಿ ವರ್ಗಾವಣೆ ಪ್ರಕ್ರಿಯೆ ಸ್ಥಗಿತವಾಯಿತು. ಈ ಸಂಬಂಧ ಸೆ.14ರಂದು ಸಾರ್ವಜನಿಕ ಶಿಕ್ಷಣ ಇಲಾಖೆಯು 2020-21ನೇ ಸಾಲಿನ ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯೋಪಧ್ಯಾಯರು ಒಳಗೊಂಡಂತೆ ಪ್ರಾಥಮಿಕ ಶಾಲಾ ಶಿಕ್ಷಕರು ಮತ್ತು ಪ್ರೌಢಶಾಲಾ ಶಿಕ್ಷಕರು ತತ್ಸಮಾನ ವೃಂದದ ಅಧಿಕಾರಿಗಳ ಸಾಮಾನ್ಯ ವರ್ಗಾವಣೆಗಳನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದ್ದು, ಮುಂದಿನ ದಿನಾಂಕವನ್ನು ತಿಳಿಸಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.
ವರ್ಗಾವಣೆ ಬಯಸಿ 71 ಸಾವಿರ ಶಿಕ್ಷಕರು ಅರ್ಜಿ ಸಲ್ಲಿಸಿದ್ದರು. ಕಳೆದ ವರ್ಷ ಹೆಚ್ಚುವರಿ ಮತ್ತು ಕಡ್ಡಾಯವಾಗಿ ವರ್ಗಾವಣೆಗೊಂಡ ಶಿಕ್ಷಕರಿಗೆ ಸೆ.15ರಿಂದ ಕೌನ್ಸೆಲಿಂಗ್ ಆರಂಭವಾಗಬೇಕಾಗಿತ್ತು. ಆದರೆ, ಕೆಎಟಿನಲ್ಲಿ ತಡೆಯಾಜ್ಞೆ ಬಿದ್ದ ಹಿನ್ನೆಲೆಯಲ್ಲಿ ಸಂಪೂರ್ಣ ವರ್ಗಾವಣೆ ಪ್ರಕ್ರಿಯೆ ಸ್ಥಗಿತವಾಗಿದೆ. ವರ್ಗಾವಣೆ ನಡೆಸಲು ಒಂದಲ್ಲ, ಒಂದು ರೀತಿಯ ವಿಘ್ನಗಳು ಎದುರಾಗುತ್ತಲೇ ಇದೆ.
ತಡೆಯಾಜ್ಞೆ ಏಕೆ? : ಹೆಚ್ಚುವರಿ ಮತ್ತು ಕಡ್ಡಾಯ ವರ್ಗಾವಣೆಗೆ ಅವಕಾಶ ಕಲ್ಪಿಸಿರುವಂತೆಯೇ 2016-17ನೇ ಸಾಲಿನಲ್ಲಿ ಕಡ್ಡಾಯ, ಹೆಚ್ಚುವರಿ ವರ್ಗಾವಣೆಗೆ ಶಿಕ್ಷೆಗೆ ಗುರಿಯಾಗಿರುವ ನಮಗೂ ಮತ್ತೊಮ್ಮೆ ವರ್ಗಾವಣೆ ಪಡೆಯಲು ಅವಕಾಶ ನೀಡಬೇಕೆಂದು ಕೆಲವು ಶಿಕ್ಷಕರು ಕೆಎಟಿಗೆ ಹೋಗಿದ್ದರು. ಈ ಮನವಿ ಪರಿಗಣಿಸಿದ ಕೆಎಟಿ ಅಧ್ಯಕ್ಷ ನ್ಯಾ.ಆರ್.ಬಿ.ಬೂದಿಹಾಳ್ ಹಾಗೂ ಎನ್.ಶಿವೈಲಂ ಅವರಿದ್ದ ಪೀಠ ವರ್ಗಾವಣೆ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಿತು.
ಮೇಲ್ಮನವಿ ಸಲ್ಲಿಕೆ : ಕೆಎಟಿ ನೀಡಿರುವ ತಡೆಯಾಜ್ಞೆ ತೆರವು ಮಾಡುವಂತೆ ಶಿಕ್ಷಣ ಇಲಾಖೆ ಕೆಎಟಿಗೆ ಈಗಾಗಲೆ, ಮೇಲ್ಮನವಿ ಸಲ್ಲಿಸಿದೆ. ಇದು ಇತ್ಯರ್ಥವಾಗುವವರೆಗೂ ವರ್ಗಾವಣೆ ಪ್ರಕ್ರಿಯೆ ನಡೆಸಲು ಸಾಧ್ಯವಿಲ್ಲದೆ, ಇರುವುದರಿಂದ ಶಿಕ್ಷಣ ಇಲಾಖೆ ಸ್ಥಗಿತಗೊಳಿಸಿದೆ.
ರಾಜ್ಯ ಸರ್ಕಾರ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ(ಶಿಕ್ಷಕರ ವರ್ಗಾವಣೆ) ಅಧಿನಿಯಮ 2020ವನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದು ಸರ್ಕಾರದ ಒಪ್ಪಿಗೆ ಪಡೆದು ಈ ವರ್ಷದಿಂದ ಅನುಷ್ಠಾನ ಮಾಡಲು ಮುಂದಾಗಿದೆ. ಇದರಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿದೆ. ಆದರೆ, ಇದರ ಅನುಷ್ಠಾನಕ್ಕೆ ಕಾಲ ಕೂಡಿ ಬರುತ್ತಿಲ್ಲ.


Share this Story:

Follow Webdunia kannada

ಮುಂದಿನ ಸುದ್ದಿ

ಕೇಂದ್ರವು ನ್ಯಾಯಮಂಡಳಿಗಳಿಗೆ ತನ್ನ ಆಯ್ಕೆಯ ವ್ಯಕ್ತಿಗಳನ್ನು ನೇಮಿಸುತ್ತಿದೆ:ಸುಪ್ರೀಂ ಅಸಮಾಧಾನ