ಬೆಂಗಳೂರು : ಭಾರೀ ಮಳೆಗೆ ಸಿಲಿಕಾನ್ ಸಿಟಿ ನಲುಗಿಹೋಗಿದೆ. ಇದೇನು ಕೆರೆಯೋ ಎನ್ನುವಂತೆ ರಸ್ತೆಗಳು ಭಾಸವಾಗುತ್ತಿವೆ.
ರಾಜ್ಕುಮಾರ್ ರಸ್ತೆಯಲ್ಲಿ ಮಂಡಿಯುದ್ದ ನೀರು ನಿಂತಿದ್ದು, ವಾಹನ ಸವಾರರು ರಸ್ತೆ ದಾಟಲು ಹರಸಾಹಸ ಪಡುತ್ತಿದ್ದಾರೆ. ದ್ವಿಚಕ್ರ ವಾಹನಗಳು ಕೆಟ್ಟು ನಿಂತಿವೆ. ಸಾರ್ವಜನಿಕರು ಬಿಬಿಎಂಪಿಯ ಕೆಲಸಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಲಿಕಾನ್ ಸಿಟಿಯಲ್ಲಿ ಮತ್ತೆ ಮಳೆ ಆರಂಭವಾಗಿದ್ದು, ಗಂಟೆಯಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಮಲ್ಲೇಶ್ವರಂ, ರಾಜಾಜಿನಗರ, ಮಹಾಲಕ್ಷ್ಮಿ ಲೇಔಟ್ ಸುತ್ತಮುತ್ತ ಭಾರೀ ಮಳೆ ಸುರಿದಿದೆ. ಮಧ್ಯಾಹ್ನ ಕೂಡ ಧಾರಾಕಾರ ಮಳೆಯಾಗಿತ್ತು.
ಬೆಂಗಳೂರಿನಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ಬೆಳಗ್ಗೆಯಿಂದ ಮೋಡಕವಿದ ವಾತಾವರಣವಿತ್ತು. ಆಗಾಗ ಕೇಲವೆಡೆ ತುಂತುರು ಮಳೆಯಾಗಿದ್ದು, ಇದೀಗ ಮಳೆಯ ಅಬ್ಬರ ಜೋರಾಗಿದೆ. ಮೆಜೆಸ್ಟಿಕ್, ಮಾರ್ಕೆಟ್, ಮಲ್ಲೇಶ್ವರಂ, ಚಾಮರಾಜಪೇಟೆ, ಶೇಷಾದ್ರಿಪುರಂ, ಸದಾಶಿವನಗರ, ಕೆಜಿ ರೋಡ್, ಸೇರಿದಂತೆ ಹಲವೆಡೆ ಭಾರೀ ಮಳೆ ಸುರಿದಿದೆ. ಶಾಂತಿನಗರ, ಡಬಲ್ ರೋಡ್ನಲ್ಲಿ ಪ್ರವಾಹಸ್ಥಿತಿ ಉಂಟಾಗಿದೆ.
ಬೆಂಗಳೂರಿನ ಎಲ್ಲೆಡೆ ಗುಡುಗು-ಸಿಡಿಲಿನೊಂದಿಗೆ ಮಳೆ ಅಬ್ಬರಿಸುತ್ತಿದ್ದು, ತಗ್ಗು ಪ್ರದೇಶಗಳು, ಅಂಡರ್ ಪಾಸ್ಗಳು ಜಲಾವೃತಗೊಂಡಿವೆ. ಕೆರೆಯಂತಾಗಿರುವ ರಸ್ತೆಗಳಲ್ಲಿ ದ್ವಿಚಕ್ರ ವಾಹನಗಳು ಹಾಗೂ ಆಟೋ ರಿಕ್ಷಾಗಳು ಕೆಟ್ಟು ನಿಂತಿವೆ. ನಗರದಲ್ಲಿ ಎರಡು ಕಾರುಗಳು ನೀರಿನಲ್ಲಿ ತೇಲಾಡಿದ್ದು, ಕೆಟ್ಟು ನಿಂತ ವಾಹನಗಳಿಂದಾಗಿ ಸವಾರರು ಪರದಾಡುವಂತಾಗಿದೆ.