Publish Date: Wed, 01 Dec 2021 (08:09 IST)
Updated Date: Wed, 01 Dec 2021 (08:44 IST)
ಕೊರೊನಾ ಸೋಂಕಿತರ ಪ್ರಮಾಣ ಹೆಚ್ಚುತ್ತಿದೆ. ಕೊರೊನಾದ ರೂಪಾಂತರಗಳೂ ದಾಂಗುಡಿ ಇಡುತ್ತಿವೆ.
ಈ ಮಧ್ಯೆ ಇನ್ನೊಂದು ಆತಂಕಕಾರಿ ಸಂಗತಿ ಎದುರಾಗಿದ್ದು ಮಧ್ಯಪ್ರದೇಶದ ಅಗರ್ ಮಲ್ವಾ ಜಿಲ್ಲೆಯಲ್ಲಿ 48 ಕಾಗೆಗಳ ಮೃತದೇಹ ಸಿಕ್ಕಿದ್ದು, ಅವುಗಳಲ್ಲೀಗ ಹಕ್ಕಿಜ್ವರ ಸೋಂಕು(H5N8) ದೃಢಪಟ್ಟಿದೆ.
ಅಂದಹಾಗೆ ಈ 48 ಕಾಗೆಗಳು ಭೋಪಾಲ್ನಿಂದ 180 ಕಿಮೀ ದೂರದಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಮೃತಪಟ್ಟವಾಗಿವೆ. ಇಷ್ಟೊಂದು ಕಾಗೆಗಳು ಸತ್ತ ಹಿನ್ನೆಲೆಯಲ್ಲಿ ಅವುಗಳ ಸ್ಯಾಂಪಲ್ ತಪಾಸಣೆಗಾಗಿ ಲ್ಯಾಬೋರೇಟರಿಗೆ ಕಳಿಸಲಾಗಿತ್ತು.
ತಪಾಸಣೆ ನಡೆಸಿದಾಗ ಅವುಗಳಲ್ಲಿ H5N8ಇರುವುದು ಗೊತ್ತಾಗಿದೆ ಎಂದು ಅಗರ್ ಮಾಲ್ವಾ ಜಿಲ್ಲಾಧಿಕಾರಿ ಅಧ್ವೇಶ್ ಶರ್ಮಾ ಹೇಳಿದ್ದಾರೆ. 48 ಕಾಗೆಗಳೊಂದಿಗೆ ಒಂದು ಕೋಳಿಯೂ ಮೃತಪಟ್ಟಿದ್ದಾಗಿ ತಿಳಿಸಿದ್ದಾರೆ. ಸದ್ಯ ಪೌಲ್ಟ್ರಿಯಲ್ಲಿರುವ ಇತರ ಕೋಳಿಗಳ ಮಾದರಿಯನ್ನೂ ಕಳಿಸಲಾಗಿದೆ. ಆದರೆ ಅವುಗಳ ವರದಿ ಇನ್ನೂ ಬಂದಿಲ್ಲ. ಅಲ್ಲಿಯವರೆಗೂ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯ ಮಟನ್ ಮಾರಾಟ ಮಾರುಕಟ್ಟೆಯನ್ನು ಮುಚ್ಚಲು ತೀರ್ಮಾನಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.