ಬೆಂಗಳೂರು : ಕನ್ನಡ ಸಾಹಿತ್ಯ ಅಕಾಡೆಮಿಯು 2013ನೇ ಸಾಲಿನ ಲಲಿತ ಪ್ರಬಂಧ ಪ್ರಶಸ್ತಿಗೆ ಹುಬ್ಬಳ್ಳಿಯ ಎಂ.ಡಿ. ಗೋಗೇರಿ ಬರೆದ ಮಹಾಮಾತೆ ಮಲ್ಲಮ್ಮ ಮತ್ತು ಇತರೆ ಪ್ರಬಂಧಗಳು ಪುಸ್ತಕವನ್ನು ಆಯ್ಕೆ ಮಾಡಿರುವುದನ್ನು ಹೈಕೋರ್ಟ್ ರದ್ದುಪಡಿಸಿದೆ.
ಕೊಡಗಿನ ಸಾಹಿತಿ ಭಾರದ್ವಾಜ ಅವರು ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಸ್.ಜಿ.ಪಂಡಿತ್ ಅವರ ಏಕ ಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.
ಅಲ್ಲದೆ, ಕನ್ನಡ ಸಾಹಿತ್ಯ ಅಕಾಡೆಮಿ 2013ನೇ ಸಾಲಿನ ಲಲಿತ ಪ್ರಬಂಧ ಪ್ರಕಾರದ ಪ್ರಶಸ್ತಿಗೆ ಹೊಸದಾಗಿ ಪುಸಕ್ತ ಆಯ್ಕೆ ಮಾಡಬೇಕು. ಅದಕ್ಕಾಗಿ ಅಕಾಡೆಮಿಯ ಬೈಲಾ 9 3 (ಉ) 12ನೇ ಷರತ್ತು ಅನ್ವಯ ಉಪ ಸಮಿತಿಯನ್ನು ಪುನರ್ ರಚಿಸಬೇಕು.
ಆ ಉಪ ಸಮಿತಿಯು ಭಾರದ್ವಾಜ ಮತ್ತು ಗೋಗೇರಿ ಅವರ ಪುಸ್ತಕಗಳನ್ನು ಮೌಲ್ಯಮಾಪನ ಮಾಡಿ ಪ್ರಶಸ್ತಿಗೆ ಶಿಫಾರಸು ಮಾಡಬಹುದು. ಈ ಪ್ರಕ್ರಿಯೆಯನ್ನು ಎರಡು ತಿಂಗಳಲ್ಲಿ ಪೂರ್ಣಗೊಳಿಸಬೇಕು ಎಂದು ಆದೇಶದಲ್ಲಿ ಹೈಕೋರ್ಟ್ ತಿಳಿಸಿದೆ.