ಬೆಂಗಳೂರು : ಕೋವಿಡ್ ಹಿನ್ನೆಲೆಯಲ್ಲಿ ಹೊಸ ವರ್ಷಾಚರಣೆಗೆ ಬೆಂಗಳೂರಿನಲ್ಲಿ ಹಲವು ನಿರ್ಬಂಧಗಳನ್ನ ಹಾಕಲಾಗಿದೆ. ಜನರು ಎಲ್ಲೂ ಗುಂಪುಗೂಡದಂತೆ ಕ್ರಮ ವಹಿಸಲಾಗಿದೆ.
ಅದರಲ್ಲೂ ಬೆಂಗಳೂರಿನಲ್ಲಿ ಸಾಂಪ್ರದಾಯಿಕವಾಗಿ ಅದ್ಧೂರಿಯಾಗಿ ವರ್ಷಾಚರಣೆ ಆಚರಿಸುವ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಹಾಗು ಸುತ್ತಮುತ್ತ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಸೂಕ್ಷ್ಮ ಪ್ರದೇಶಗಳೆಂದು ಗುರುತಿಸಲಾಗಿರುವ ಕಡೆ 380 ಸಿಸಿ ಕ್ಯಾಮೆರಾಗಳನ್ನ ಪೊಲೀಸರು ಅಳವಡಿಸಿದ್ದಾರೆ. ಚರ್ಚ್ ಸ್ಟ್ರೀಟ್, ಬ್ರಿಗೇಡ್ ರೋಡ್, ಎಂಜಿ ರಸ್ತೆಗಳಲ್ಲೇ 300 ಸಿಸಿಟಿವಿಗಳನ್ನ ಹಾಕಲಾಗಿದೆ.
ಬೆಂಗಳೂರಿನ ಯಾವುದೇ ಪಬ್ ಮತ್ತು ರೆಸ್ಟೋರೆಂಟ್ಗಳಲ್ಲಿ ಡಿಜೆ ಹಾಕುವುದಾಗಲೀ ಹೊಸ ವರ್ಷಾಚರಣೆಯಾಗಲೀ ಮಾಡದಂತೆ ಎಚ್ಚರ ವಹಿಸಲಾಗಿದೆ. ಪೊಲೀಸರು ಈಗಾಗಲೇ ಪಬ್ ಮಾಲೀಕರ ಜೊತೆ ಮಾತುಕತೆ ಮಾಡಿ ನಿರ್ದೇಶನ ನೀಡಿದ್ದಾರೆ.
ಪಬ್ ರೆಸ್ಟೋರೆಂಟ್ಗಳು ಇರುವ ಪ್ರದೇಶಗಳಲ್ಲಿ ರಸ್ತೆಗಳಿಗೆ ಪೊಲೀಸರು ಬ್ಯಾರಿಕೇಡ್ ಹಾಕುತ್ತಿದ್ದಾರೆ. ಇಲ್ಲಿ ಟಿಕೆಟ್ ಇದ್ದವರಿಗೆ ಮಾತ್ರ ಪ್ರವೇಶ ಕೊಡಲಾಗಿದೆ. ಹಾಗೆಯೇ ಎರಡು ಡೋಸ್ ಲಸಿಕೆ ಪಡೆದಿರಬೇಕು ಎಂಬ ಷರತ್ತೂ ಇದೆ.