Publish Date: Mon, 12 Dec 2022 (12:04 IST)
Updated Date: Mon, 12 Dec 2022 (11:21 IST)
ಬೆಂಗಳೂರು : ನಾಳೆಯಿಂದ ಚಿಕ್ಕನಾಯಕನಹಳ್ಳಿ ವಿಧಾನಸಭೆ ಕ್ಷೇತ್ರದಿಂದ ಪುನಾರಂಭವಾಗಬೇಕಿದ್ದ ಪಂಚರತ್ನ ರಥಯಾತ್ರೆಯನ್ನು 4 ದಿನಗಳ ಮಟ್ಟಿಗೆ ಮುಂದೂಡಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಅವರು, ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ತುಮಕೂರು ಜಿಲ್ಲೆ ಸೇರಿದಂತೆ ರಾಜ್ಯದ ಒಳನಾಡು ಭಾಗದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಈ ಕಾರಣಕ್ಕೆ ಪಂಚರತ್ನ ರಥಯಾತ್ರೆಯನ್ನು ಅನಿವಾರ್ಯವಾಗಿ ಮುಂದೂಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಡಿಸೆಂಬರ್ 15ರಂದು ಮಾಗಡಿಯಲ್ಲಿ ರಥಯಾತ್ರೆ ನಡೆಯಲಿದ್ದು, ಡಿಸೆಂಬರ್ 27ರಂದು ಮತ್ತೆ ತುಮಕೂರು ಜಿಲ್ಲೆಗೆ ರಥಯಾತ್ರೆ ಪ್ರವೇಶ ಮಾಡಲಿದೆ ಎಂದು ಅವರು ತಿಳಿಸಿದ್ದಾರೆ. ಡಿಸೆಂಬರ್ 27ರಂದು ತುರುವೇಕೆರೆ, 28ರಂದು ಚಿಕ್ಕನಾಯಕನಹಳ್ಳಿ, 29ರಂದು ತುಮಕೂರು ಗ್ರಾಮಾಂತರ, 30ರಂದು ಕುಣಿಗಲ್ ಕ್ಷೇತ್ರದಲ್ಲಿ ರಥಯಾತ್ರೆ ನಡೆಯಲಿದೆ.