Select Your Language

Notifications

webdunia
webdunia
webdunia
webdunia

ಮೃತಪಟ್ಟ ವ್ಯಕ್ತಿಗೆ ನಿಫಾ ವೈರಸ್ ದೃಢ

ಮೃತಪಟ್ಟ ವ್ಯಕ್ತಿಗೆ ನಿಫಾ ವೈರಸ್ ದೃಢ
ತಿರುವನಂತಪುರಂ , ಬುಧವಾರ, 13 ಸೆಪ್ಟಂಬರ್ 2023 (09:22 IST)
ತಿರುವನಂತಪುರಂ :  ಕೋಝಿಕ್ಕೋಡ್ನಲ್ಲಿ ಮೃತಪಟ್ಟ ಇಬ್ಬರಲ್ಲಿ ಓರ್ವ ವ್ಯಕ್ತಿಗೆ ನಿಫಾ ವೈರಸ್ ತಗುಲಿರುವುದು ದೃಢಪಟ್ಟಿದೆ. ಈ ಸಂಬಂಧ ಆರೋಗ್ಯ ಇಲಾಖೆಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ನಿಫಾ ಸೋಂಕಿನಿಂದಲೇ ವ್ಯಕ್ತಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಜ್ವರ ಹಾಗೂ ಉಸಿರಾಟದ ತೊಂದರೆಯಿಂದ ವ್ಯಕ್ತಿ ಸೋಮವಾರ ಸಾವನ್ನಪ್ಪಿದ್ದರು. ನಿಫಾ ವೈರಸ್ ಸೋಂಕು ತಗುಲಿರುವ ಶಂಕೆಯ ಹಿನ್ನೆಲೆಯಲ್ಲಿ ಮೃತನ ಸ್ಯಾಂಪಲ್ ಅನ್ನು ಟೆಸ್ಟ್ಗೆ ಪುಣೆಗೆ ಕಳುಹಿಸಲಾಗಿತ್ತು. ಸದ್ಯ ಅದರ ರಿಪೋರ್ಟ್ ಬಂದಿದ್ದು, ನಿಫಾ ವೈರಸ್ನಿಂದಲೇ ಮೃತಪಟ್ಟಿರುವುದು ಬಯಲಾಗಿದೆ.

ಪುಣೆಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಯ ಸ್ಯಾಂಪಲ್ ಫಲಿತಾಂಶ ಬಂದ ತಕ್ಷಣ ದೆಹಲಿಯಿಂದ ಉನ್ನತ ಅಧಿಕಾರಿಗಳ ಕೇಂದ್ರ ತಂಡ ಕೋಯಿಕ್ಕೋಡ್ಗೆ ಆಗಮಿಸಲಿದೆ.

ಕೋಝಿಕ್ಕೋಡ್ನಲ್ಲಿ ಇಬ್ಬರು ಮೃತಪಟ್ಟಿದ್ದು, ಇಬ್ಬರಿಗೂ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿತ್ತು. ಮೃತಪಟ್ಟವರಲ್ಲಿ ಒಬ್ಬರ ಕುಟುಂಬದ ನಾಲ್ವರಿಗೆ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದರಲ್ಲಿ 9 ವರ್ಷದ ಮಗುವಿನ ಸ್ಥಿತಿ ಚಿಂತಾಜನಕವಾಗಿದೆ. 10 ತಿಂಗಳ ಮಗುವಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದುವರೆಗೆ 75 ಜನರ ಸಂಪರ್ಕ ಪಟ್ಟಿ ಸಿದ್ಧಪಡಿಸಲಾಗಿದೆ.

ನಿಫಾ ವೈರಸ್ ಎಂದರೇನು?
1998ರಲ್ಲಿ ಮಲೇಷ್ಯಾದ ಕಾಂಪುಂಗ್ ಸುಂಗಾತ್ ನಿಫಾ ವಲಯದಲ್ಲಿ ಕಾಣಿಸಿಕೊಂಡ ಮಾರಕ ಜ್ವರಕ್ಕೆ ಕಾರಣವಾದ ವೈರಸನ್ನು ನಿಫಾ ವೈರಸ್ ಎಂದು ಕರೆಯುತ್ತಾರೆ. ನಿಫಾ ವೈರಸ್ ಬಾವಲಿಗಳ ಮೂಲಕ ಹರಡುತ್ತದೆ. ಈ ಕ್ಷಣದವರೆಗೆ ಈ ರೋಗಕ್ಕೆ ಔಷಧಿ ಕಂಡುಹಿಡಿದಿಲ್ಲ. ಹೀಗಾಗಿ ನಿಫಾ ವೈರಸ್ ಮಾರಣಾಂತಿಕ ಎಂದೇ ಕುಖ್ಯಾತಿ ಪಡೆದಿದೆ. ಈ ವೈರಸ್ ಪತ್ತೆಯಾದರೆ ಶೇ.74ರಷ್ಟು ಸಾವು ಖಚಿತ ಎನ್ನಲಾಗಿದೆ.

ವೈರಸ್ ಹೇಗೆ ಹರಡುತ್ತದೆ?
ಸೋಂಕಿರುವ ಬಾವಲಿ ಕಚ್ಚಿದ ಹಣ್ಣನ್ನು ತಿನ್ನವುದರಿಂದ ವೈರಸ್ ಹರಡುವ ಸಾಧ್ಯತೆಗಳಿವೆ. ಅಲ್ಲದೆ ಇದೊಂದು ಸಾಂಕ್ರಾಮಿಕ ಕಾಯಿಲೆಯಾದ್ರಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಹೀಗಾಗಿ ಬಾವಲಿಗಳು ಕಚ್ಚಿದ ಸಾಧ್ಯತೆಯಿರುವ ಹಣ್ಣುಗಳನ್ನು ತಿನ್ನಲೇಬೇಡಿ.

Share this Story:

Follow Webdunia kannada

ಮುಂದಿನ ಸುದ್ದಿ

ಮೈತ್ರಿಯ ಬೆನ್ನಲ್ಲೇ ಯಡಿಯೂರಪ್ಪ ದೆಹಲಿ ಕಡೆಗೆ