Publish Date: Wed, 08 Dec 2021 (10:43 IST)
Updated Date: Wed, 08 Dec 2021 (10:45 IST)
ಬೆಂಗಳೂರು : ರಾಜ್ಯದಲ್ಲಿ ಕೋವಿಡ್ ರೂಪಾಂತರಿ ಓಮಿಕ್ರಾನ್ ತಳಿ ವೈರಸ್ ಪ್ರಕರಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಕೆಲವೊಂದು ಕ್ರಮಗಳನ್ನು ಕೈಗೊಂಡಿದೆ.
ಈ ನಡುವೆ ಕೋವಿಡ್ 19 ಮೂರನೇ ಅಲೆಯ ಭೀತಿಯೂ ಇರುವ ಹಿನ್ನೆಲೆಯಲ್ಲಿ ತಜ್ಞರ ಜೊತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬುಧವಾರ ಗೃಹ ಕಚೇರಿ ಕೃಷ್ಣಾದಲ್ಲಿ ಉನ್ನತ ಮಟ್ಟದ ಸಭೆಯನ್ನು ನಡೆಸಲಿದ್ದಾರೆ.
ಸಭೆಯ ಬಳಿಕ ಹೊಸ ಮಾರ್ಗಸೂಚಿ ಬಿಡುಗಡೆಗೊಳ್ಳುವ ಸಾಧ್ಯತೆಯೂ
ಬುಧವಾರ ನಡೆಯಲಿರುವ ಸಭೆಯಲ್ಲಿ ಆರೋಗ್ಯ ಸಚಿವ ಡಾ. ಕೆ ಸುಧಾಕರ್, ಕಂದಾಯ ಸಚಿವ ಆರ್. ಅಶೋಕ್, ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ ನಾರಾಯಣ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಸೇರಿದಂತೆ ಬಿಬಿಎಂಪಿಯ ಹಿರಿಯ ಅಧಿಕಾರಿಗಳು ಈ ಸಭೆಯಲ್ಲಿ ಭಾಗಿಯಾಗಲಿದ್ದಾರೆ.
ರಾಜ್ಯದಲ್ಲಿ ಓಮಿಕ್ರಾನ್ ಸೋಂಕಿನ ಎರಡು ಪ್ರಕರಣಗಳು ಅಧಿಕೃತವಾಗಿ ಪತ್ತೆಯಾಗಿವೆ. ಈಗಾಗಲೇ ಓಮಿಕ್ರಾನ್ ಸೋಂಕು ಕಾಣಿಸಿಕೊಂಡ ವೈದ್ಯರಲ್ಲಿ ಮತ್ತೆ ಕೊರೊನಾ ವೈರಸ್ ಪಾಸಿಟಿವ್ ಬಂದಿದೆ. ಮತ್ತೊಂದು ಕಡೆಯಲ್ಲಿ ಶಾಲಾ- ಕಾಲೇಜುಗಳಲ್ಲೂ ಕೋವಿಡ್ ಸೋಂಕಿನ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಸಹಜವಾಗಿ ಇದು ಆತಂಕಕ್ಕೆ ಕಾರಣವಾಗಿದೆ.