ಬೆಂಗಳೂರು : ಆನೇಕಲ್ ವಿಧಾನಸಭಾ ಕ್ಷೇತ್ರದ ಎರಡು ಪುರಸಭೆ ಮತ್ತು ಒಂದು ನಗರಸಭೆ ಚುನಾವಣೆಯ ಫಲಿತಾಂಶ ಗುರುವಾರ (ಡಿ 30) ಪ್ರಕಟವಾಗಲಿದೆ.
ಚಂದಾಪುರ ಮತ್ತು ಜಿಗಣಿ ಪುರಸಭೆ ಹಾಗೂ ಹೆಬ್ಬಗೋಡಿ ನಗರಸಭೆಯ ಮತಎಣಿಕೆ ನಡೆಯಲಿದ್ದು, ಮಧ್ಯಾಹ್ನದ ಹೊತ್ತಿಗೆ ಸ್ಪಷ್ಟ ಚಿತ್ರಣ ಸಿಗಲಿದೆ. 23 ಸದಸ್ಯ ಬಲದ ಜಿಗಣಿ ಪುರಸಭೆಯಲ್ಲಿ ಕಳೆದ ಬಾರಿ ಬಿಜೆಪಿ 15, ಕಾಂಗ್ರೆಸ್ 5, ಜೆಡಿಎಸ್ 2, ಪಕ್ಷೇತರರು 1 ಸ್ಥಾನ ಗೆದ್ದಿದ್ದರು.
ಬಿಜೆಪಿಯೇ ಆಡಳಿತ ನಡೆಸಿತ್ತು. ಈ ಬಾರಿ 61 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ಎಲ್ಲ 23 ಸ್ಥಾನಗಳಿಗೆ ಸ್ಪರ್ಧಿಸಿದ್ದರೆ, ಜೆಡಿಎಸ್ 13 ಸ್ಥಾನಗಳಿಗೆ ಸ್ಪರ್ಧಿಸಿದೆ. ಎಎಪಿ 1 ಮತ್ತು ಪಕ್ಷೇತರ ಅಭ್ಯರ್ಥಿಗಳು ಒಂದು ಕ್ಷೇತ್ರದಲ್ಲಿ ಸ್ಪರ್ಧಿಸಿದ್ದಾರೆ. ಜಿಗಣಿ ಪುರಸಭೆ ವ್ಯಾಪ್ತಿಯಲ್ಲಿ 16,496 ಮತದಾರರು. ಈ ಪೈಕಿ ಪುರುಷರು 9282 ಮತ್ತು ಮಹಿಳೆಯರು 7210.
ಆನೇಕಲ್ ತಾಲ್ಲೂಕಿನ ಹೆಬ್ಬಗೋಡಿ ನಗರಸಭೆಯ ಐದು ಸ್ಥಾನಗಳಿಗೆ ಈಗಾಗಲೇ ಅವಿರೋಧ ಆಯ್ಕೆ ಆಗಿದೆ. ಈ ಪೈಕಿ ಮೂವರು ಕಾಂಗ್ರೆಸ್, ಇಬ್ಬರು ಬಿಜೆಪಿಗೆ ಸೇರಿದವರು. ಕಳೆದ ಬಾರಿ ಬಿಜೆಪಿ 18, ಕಾಂಗ್ರೆಸ್ 12, ಜೆಡಿಎಸ್ ಒಂದು ಸ್ಥಾನದಲ್ಲಿ ಜಯಗಳಿಸಿತ್ತು.
ಬಿಜೆಪಿಯೇ ಆಡಳಿತದ ಚುಕ್ಕಾಣಿ ಹಿಡಿದಿತ್ತು. ಈ ಬಾರಿ 26 ಸದಸ್ಯ ಸ್ಥಾನಕ್ಕೆ 58 ಅಭ್ಯರ್ಥಿಗಳು ಚುನಾವಣೆ ಕಣದಲ್ಲಿದ್ದರು. ಕಾಂಗ್ರೆಸ್ 25, ಬಿಜೆಪಿ 21, ಜೆಡಿಎಸ್ 6, ಸಿಪಿಐ 1, ಪಕ್ಷೇತರರು ಐದು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರು. ಹೆಬ್ಬಗೋಡಿ ನಗರಸಭೆ ವ್ಯಾಪ್ತಿಯಲ್ಲಿ ಒಟ್ಟು 59,206 ಮತದಾರರು ಇದ್ದಾರೆ. ಈ ಪೈಕಿ ಪುರುಷರು 35,475, ಮಹಿಳೆಯರು 23,721.