Publish Date: Fri, 25 Mar 2022 (08:24 IST)
Updated Date: Fri, 25 Mar 2022 (08:26 IST)
ಬೆಂಗಳೂರು : ಮೇಕೆದಾಟು ಯೋಜನೆ ವಿರುದ್ಧ ತಮಿಳುನಾಡು ವಿಧಾನಸಭೆಯಲ್ಲಿ ಕೈಗೊಳ್ಳಲಾಗಿರುವ ವಿವಾದಾತ್ಮಕ ನಿರ್ಣಯಕ್ಕೆ,
ಪ್ರತಿಯಾಗಿ ರಾಜ್ಯ ವಿಧಾನಸಭೆಯಲ್ಲಿ ಕೈಗೊಂಡಿರುವ ಖಂಡನಾ ನಿರ್ಣಯಕ್ಕೆ ಜೆಡಿಎಸ್ ಪಕ್ಷದ ಬೆಂಬಲವಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ವಿಧಾನಸೌಧ ಬಳಿ ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ವಿಧಾನಸಭೆಯಲ್ಲಿ ನಿರ್ಣಯ ಕೈಗೊಂಡರಷ್ಟೇ ಸಾಲದು. ಮೊದಲು ಕೇಂದ್ರದ ಅರಣ್ಯ ಮತ್ತು ಪರಿಸರ ಇಲಾಖೆಯ ಒಪ್ಪಿಗೆ ಪಡೆದು ಅಣೆಕಟ್ಟು ನಿರ್ಮಾಣಕ್ಕೆ ಚಾಲನೆ ನೀಡಬೇಕು ಎಂದು ಒತ್ತಾಯಿಸಿದರು.
ಇದು ನಮ್ಮ ಒಗ್ಗಟ್ಟು ಪ್ರದರ್ಶನದ ನಿರ್ಣಯ ಅಷ್ಟೆ. ಅದು ಈಗ ಆಗಿದೆ. ಆದರೆ ತಕ್ಷಣ ಬೇಕಿರುವುದು ಕೇಂದ್ರದ ಒಪ್ಪಿಗೆ. ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಪಕ್ಷದ ಸರ್ಕಾರವಿದೆ. ಕೇಂದ್ರದ ಒಪ್ಪಿಗೆ ಪಡೆದುಕೊಳ್ಳಲು ರಾಜ್ಯ ಸರ್ಕಾರ ಬದ್ಧತೆ ತೋರಬೇಕು ಎಂದು ತಿಳಿಸಿದರು.