Select Your Language

Notifications

webdunia
webdunia
webdunia
webdunia

ಸೆ.27ರ ಭಾರತ ಬಂದ್ ಶಾಂತಿಯುತವಾಗಿರಲಿದೆ: ಎಸ್ ಕೆ ಎಂ

ಸೆ.27ರ ಭಾರತ ಬಂದ್ ಶಾಂತಿಯುತವಾಗಿರಲಿದೆ: ಎಸ್ ಕೆ ಎಂ
ನವದೆಹಲಿ , ಭಾನುವಾರ, 19 ಸೆಪ್ಟಂಬರ್ 2021 (08:39 IST)
ಹೊಸದಿಲ್ಲಿ,ಸೆ.19 : ಕೇಂದ್ರದ ಮೂರು ಕೃಷಿ ಕಾನೂನುಗಳ ವಿರುದ್ಧ ಸೆ.27ರಂದು ಕರೆ ನೀಡಲಾಗಿರುವ ಭಾರತ ಬಂದ್ಗಾಗಿ ಶನಿವಾರ ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿದ ಸಂಯುಕ್ತ ಕಿಸಾನ ಮೋರ್ಚಾ (ಎಸ್ ಕೆ ಎಂ),ಪ್ರತಿಭಟನೆಯು ಶಾಂತಿಯುತವಾಗಿರುತ್ತದೆ ಮತ್ತು ಜನರಿಗೆ ಯಾವುದೇ ಅನಾನುಕೂಲ ಉಂಟಾಗದಂತೆ ರೈತರು ನೋಡಿಕೊಳ್ಳುತ್ತಾರೆ ಎಂದು ತಿಳಿಸಿದೆ.

ರೈತರೊಂದಿಗೆ ಕೈ ಜೋಡಿಸುವಂತೆ ಸಮಾಜದ ಎಲ್ಲ ವರ್ಗಗಳನ್ನು ಕೋರಿಕೊಳ್ಳುವಂತೆ ಮತ್ತು ಸಾರ್ವಜನಿಕರಿಗೆ ಅನಾನುಕೂಲಗಳನ್ನು ಕಡಿಮೆಗೊಳಿಸಲು ಬಂದ್ ಬಗ್ಗೆ ಸಾಕಷ್ಟು ಪ್ರಚಾರ ನೀಡುವಂತೆ ಸದಸ್ಯ ಸಂಘಟನೆಗಳಿಗೆ ಸೂಚಿಸಲಾಗಿದೆ. ಬಂದ್ ಶಾಂತಿಯುತ ಹಾಗೂ ಸ್ವಯಂಪ್ರೇರಿತವಾಗಿರುತ್ತದೆ ಮತ್ತು ತುರ್ತು ಸೇವೆಗಳಿಗೆ ಬಂದ್ನಿಂದ ವಿನಾಯಿತಿ ನೀಡಲಾಗುವುದು ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.
ರೈತರಿಂದ ಭಾರತ ಬಂದ್ ಬೆಳಿಗ್ಗೆ ಆರು ಗಂಟೆಗೆ ಆರಂಭಗೊಂಡು ಸಂಜೆ ನಾಲ್ಕು ಗಂಟೆಯವರೆಗೆ ನಡೆಯಲಿದೆ. ಈ ಅವಧಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ಕಚೇರಿಗಳು, ಮಾರುಕಟ್ಟೆಗಳು, ಅಂಗಡಿ-ಮುಂಗಟ್ಟುಗಳು,ಫ್ಯಾಕ್ಟರಿಗಳು,ಶಾಲಾ-ಕಾಲೇಜುಗಳು ಮತ್ತು ಇತರ ಶಿಕ್ಷಣ ಸಂಸ್ಥೆಗಳು ಕಾರ್ಯ ನಿರ್ವಹಿಸಲು ಅವಕಾಶ ನೀಡಲಾಗುವುದಿಲ್ಲ. ಸಾರ್ವಜನಿಕ ಮತ್ತು ಖಾಸಗಿ ವಾಹನಗಳ ಸಂಚಾರಕ್ಕೂ ಅವಕಾಶವಿರುವುದಿಲ್ಲ ಎಂದು 40ಕ್ಕೂ ಅಧಿಕ ರೈತ ಸಂಘಟನೆಗಳ ಒಕ್ಕೂಟವಾಗಿರುವ ಎಸ್ಕೆಎಂ ಹೇಳಿದೆ.
ಯಾವುದೇ ಸಾರ್ವಜನಿಕ ಸಮಾರಂಭಗಳಿಗೆ ಅವಕಾಶವಿರುವುದಿಲ್ಲ, ಆಯಂಬುಲೆನ್ಸ್ ಮತ್ತು ಅಗ್ನಿಶಾಮಕ ಸೇವೆ ಸೇರಿದಂತೆ ತುರ್ತು ಸೇವೆಗಳಿಗೆ ಮಾತ್ರ ಬಂದ್ ನಿಂದ ವಿನಾಯಿತಿ ನೀಡಲಾಗುವುದು ಎಂದು ಅದು ತಿಳಿಸಿದೆ.
ಬಂದ್ ಗೆ ಸಂಬಂಧಿಸಿದಂತೆ ಮುಂದಿನ ಯೋಜನೆಗಳನ್ನು ರೂಪಿಸಲು ಸೆ.20ರಂದು ಮುಂಬೈಯಲ್ಲಿ ರಾಜ್ಯಮಟ್ಟದ ಸಿದ್ಧತಾ ಸಭೆ ನಡೆಯಲಿದೆ. ಅದೇ ದಿನ ಉತ್ತರ ಪ್ರದೇಶದ ಸೀತಾಪುರದಲ್ಲಿ ಮತ್ತು ಸೆ.22ರಂದು ಉತ್ತರಾಖಂಡದ ರೂರ್ಕಿಯಲ್ಲಿ ಕಿಸಾನ್ ಮಹಾಪಂಚಾಯತ್ ಗಳು ನಡೆಯಲಿವೆ. ಪ್ರತಿಭಟನಾನಿರತ ರೈತರು ಸೆ.22ರಿಂದ ಟಿಕ್ರಿ ಮತ್ತು ಸಿಂಘು ಗಡಿಗಳಲ್ಲಿಯ ಪ್ರತಿಭಟನಾ ತಾಣಗಳಲ್ಲಿ ಐದು ದಿನಗಳ ಕಬಡ್ಡಿ ಪಂದ್ಯಾವಳಿಯನ್ನು ಆಯೋಜಿಸಿದ್ದು, ವಿವಿಧ ರಾಜ್ಯಗಳ ತಂಡಗಳು ಭಾಗವಹಿಸುವ ನಿರೀಕ್ಷೆಯಿದೆ. ವಿಜೇತ ತಂಡಗಳಿಗೆ ನಗದು ಬಹುಮಾನಗಳನ್ನು ನೀಡಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸದಿರಲು ಸರಕಾರದ ಮೊಂಡುತನದಿಂದಾಗಿ ರೈತರು ತಮ್ಮ ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ. ದಿಲ್ಲಿಯ ಗಡಿಗಳಲ್ಲಿ ಲಕ್ಷಾಂತರ ರೈತರು ತಮ್ಮ ಸ್ವಂತ ಇಚ್ಛೆಯಿಂದ ಪ್ರತಿಭಟನೆ ನಡೆಸುತ್ತಿಲ್ಲ. ವಿವಿಧ ರಾಜ್ಯಗಳ ಪೊಲೀಸರು ಮತ್ತು ಕೇಂದ್ರ ಗೃಹ ಸಚಿವಾಲಯ ರೈತರು ಪ್ರತಿಭಟನಾ ಸ್ಥಳದಲ್ಲಿ ಇರುವುದನ್ನು ಅನಿವಾರ್ಯಗೊಳಿಸಿದ್ದಾರೆ ಎಂದು ಎಸ್ ಕೆ ಎಂ ಹೇಳಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ವಿದೇಶಿ ಮಕ್ಕಳ ದತ್ತು ಸ್ವೀಕಾರ ಇನ್ನು ಸುಲಭ?