ಕಟ್ಟಿಗೆ ಒಲೆಯ ಹೊಗೆಯ ನಡುವೆ ಅಡುಗೆ ಮಾಡುತ್ತಾ ಇಂದಿಗೂ ಕೂಡ ತಮ್ಮ ಕುಟುಂಬಗಳ ಹಸಿವು ನೀಗಿಸುತ್ತಿರುವ ದೇಶದ ಲಕ್ಷಾಂತರ ಮಹಿಳೆಯರಿಗೆ ಅನುಕೂಲವಾಗಲೆಂದು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಉಜ್ವಲಾ ಯೋಜನೆ ಅಡಿಯಲ್ಲಿ ಮಧ್ಯಪ್ರದೇಶದ 5 ಲಕ್ಷ ಮಹಿಳೆಯರಿಗೆ ಉಚಿತವಾಗಿ ಎಲ್ಪಿಜಿ ಸಂಪರ್ಕ ಸಿಗಲಿದೆ.
ಪಿಎಂ ಉಜ್ವಲಾ ಯೋಜನೆ 2.0ಗೆ(ಪಿಎಂಯುವೈ) ಚಾಲನೆ ನೀಡುವ ಮೂಲಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಜಬಲ್ಪುರದಲ್ಲಿ ಸರ್ಕಾರದ ವಿಶಿಷ್ಟ ಕೊಡುಗೆಗೆ ಸಾರ್ವಜನಿಕರಿಗೆ ತಲುಪಿಸಲು ಶುರು ಮಾಡಿದ್ದಾರೆ. ಈಗಾಗಲೇ ದೇಶದಲ್ಲಿ ಕೋಟ್ಯಂತರ ಬಡ ಕುಟುಂಬಗಳಿಗೆ ಉಜ್ವಲಾದ ಮೊದಲ ಹಂತದಲ್ಲಿ ಉಚಿತ ಎಲ್ಪಿಜಿ ಸಂಪರ್ಕ ಸಿಕ್ಕಿದೆ. ಇದರಲ್ಲಿ ಕೊಡುಗೆಯ ಫಲಾನುಭವಿಗಳಾಗದವರಿಗೆ 2.0ದಲ್ಲಿ ಅವಕಾಶ ಸಿಗಲಿದೆ.
2019ರ ಚುನಾವಣೆಯಲ್ಲಿ ಪ್ರಚಂಡ ಜಯ ಸಿಕ್ಕ ಬಳಿಕ, ಅದಕ್ಕೆ ಕಾರಣವಾದ ಮಾತೆಯರು-ಸೋದರಿಯರ ಆಶೀರ್ವಾದದ ಋುಣ ತೀರಿಸಲು ಉಜ್ವಲಾ 2.0 ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಜಾರಿಗೆ ತಂದಿದ್ದಾರೆ ಎಂದು ಸಚಿವ ಅಮಿತ್ ಶಾ ಹೇಳಿದರು.
ಶುಕ್ರವಾರದಂದು ಅಹಮದಾಬಾದ್ನ 4,300 ಮಹಿಳೆಯರಿಗೆ ಉಚಿತವಾಗಿ ಎಲ್ಪಿಜಿ ಸಂಪರ್ಕವನ್ನು ಜಿಲ್ಲಾಡಳಿತವು ಪ್ರಧಾನಿ ಮೋದಿ ಅವರ ಜನ್ಮದಿನದ ಪ್ರಯುಕ್ತ ನೀಡಿ ಸಂಭ್ರಮಿಸಿತ್ತು.