ಬೆಂಗಳೂರು : ಪರಿಷತ್ಗೆ ಕಾಂಗ್ರೆಸ್ ಟಿಕೆಟ್ ಘೋಷಣೆ ಬೆನ್ನಲ್ಲೇ ಆಂತರಿಕ ಬೇಗುದಿ ಹೊರಬಿದ್ದಿದೆ.
ತಮ್ಮ ಬೆಂಬಲಿಗರಿಗೆ ಟಿಕೆಟ್ ಕೊಡಿಸಲಾಗದೇ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ಗೆ ಹೈಕಮಾಂಡ್ ನಿರಾಸೆ ಮಾಡಿದೆ.
ತಮ್ಮ ಬೆಂಬಲಿಗರಿಗೆ ಅವಕಾಶ ಕೊಡಬೇಕೆಂದು ಪಟ್ಟು ಹಿಡಿದಿದ್ದ ಉಭಯ ನಾಯಕರಿಗೆ ಹೈಕಮಾಂಡ್ ಕ್ಯಾರೆ ಅಂದಿಲ್ಲ. ತಮ್ಮದೇ ಲೆಕ್ಕಚಾರದಡಿ ಟಿಕೆಟ್ ಘೋಷಿಸಿರುವ ವರಿಷ್ಠರು ಪಕ್ಷನಿಷ್ಠರಿಗೆ ಮನ್ನಣೆ ಹೊರತು ಗುಂಪುಗಾರಿಕೆಗೆ ಅವಕಾಶ ಇಲ್ಲ ಎಂಬ ಸಂದೇಶ ರವಾನಿಸಿದೆ.
ಇತ್ತೀಚೆಗೆ ಪರಿಷತ್ನಿಂದ ಕಾಂಗ್ರೆಸ್ನ ಮೂವರು ನಿವೃತ್ತಿಯಾಗಿದ್ದರು. ಕೊಡವ ಸಮುದಾಯದ ವೀಣಾ ಅಚ್ಚಯ್ಯ, ಲಿಂಗಾಯತ ಸಮುದಾಯದ ಅಲ್ಲಮ್ ವೀರಭದ್ರಪ್ಪ ಹಾಗೂ ದಲಿತ ಎಡಗೈ ಸಮುದಾಯದ ಆರ್.ಬಿ.ತಿಮ್ಮಪ್ಪ ಅವರಿಗೆ ಮತ್ತೊಮ್ಮೆ ಅವಕಾಶ ನೀಡಿಲ್ಲ.
ಜೊತೆಗೆ ಈ ಮೂರು ಸಮುದಾಯಗಳಿಗೂ ಪಕ್ಷ ಮನ್ನಣೆ ಕೊಟ್ಟಿಲ್ಲ. ಮೂರು ಸಮುದಾಯವನ್ನು ಹೊರತುಪಡಿಸಿ ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಿ ರಾಜ್ಯ ನಾಯಕರ ಲೆಕ್ಕಾಚಾರವನ್ನು ತಲೆಕೆಳಗು ಮಾಡಿದೆ.
ಅಲ್ಪಸಂಖ್ಯಾತ ಘಟಕದ ರಾಜ್ಯಾಧ್ಯಕ್ಷ ಅಬ್ದುಲ್ ಜಬ್ಬಾರ್ ಹಾಗೂ ಕೆಪಿಸಿಸಿ ವಕ್ತಾರ, ಹಿಂದುಳಿದ ಸಮುದಾಯದ ನಾಗರಾಜ್ ಯಾದವ್ಗೆ ಪಕ್ಷ ಟಿಕೆಟ್ ನೀಡಿದೆ.
ಈ ವಿದ್ಯಮಾನದಿಂದ ಉಭಯ ನಾಯಕರಿಗೆ ಬೇಸರ ಉಂಟಾಗಿದೆ ಎನ್ನಲಾಗಿದೆ. ರಾಜ್ಯಸಭೆಯ ಅಭ್ಯರ್ಥಿಯನ್ನು ಹೈಕಮಾಂಡ್ ಇನ್ನೂ ಪ್ರಕಟಿಸಿಲ್ಲ. ಈ ವಿಚಾರದಲ್ಲೂ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಶಿಫಾರಸುಗಳಿಗೆ ಹೈಕಮಾಂಡ್ ಕಿಮ್ಮತ್ತು ನೀಡುವ ಸಾಧ್ಯತೆ ಇಲ್ಲ. ವರಿಷ್ಠರು ತಮ್ಮದೇ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಾಧ್ಯತೆ ಹೆಚ್ಚಳವಾಗಿದೆ.