ಲಕ್ನೋ : ರಾಜ್ಯ ಮತ್ತು ಕೇಂದ್ರದಲ್ಲಿ ಡಬಲ್ ಎಂಜಿನ್ ಸರ್ಕಾರ, ಯೋಗಿ ಆದಿತ್ಯನಾಥ್ ಅವರ ಅಭಿವೃದ್ಧಿ ಮಂತ್ರದಿಂದ ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಏರಿದೆ.
ಈ ಮೂಲಕ 37 ವರ್ಷದ ಬಳಿಕ ಸತತ ಎರಡು ಬಾರಿ ಆಯ್ಕೆಯಾದ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಯೋಗಿ ಪಾತ್ರರಾಗಿದ್ದಾರೆ.
ಉತ್ತರ ಪ್ರದೇಶ ಅಂದ್ರೆ ಗುಂಡಾರಾಜ್ಯ ಎಂದೇ ಫೇಮಸ್ ಆಗಿತ್ತು. ಯೋಗಿ ಆದಿತ್ಯನಾಥ್ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲು ಕಾನೂನು ಸುವ್ಯವಸ್ಥೆಯನ್ನು ಸರಿ ಮಾಡಲು ಮುಂದಾದರು. ಹಲವು ಎನ್ಕೌಂಟರ್ಗಳು ದೇಶವ್ಯಾಪಿ ಸುದ್ದಿಯಾಗಿತ್ತು.
ಉತ್ತರ ಪ್ರದೇಶ ಮತ್ತು ದೆಹಲಿಯಲ್ಲಿ ಬಿಜೆಪಿ ಸರ್ಕಾರ ಇದ್ದ ಕಾರಣ ಭಾರೀ ಸಂಖ್ಯೆಯ ಅಭಿವೃದ್ಧಿ ಯೋಜನೆಗಳು ಜಾರಿಯಾಗಿತ್ತು. ಎಕ್ಸ್ಪ್ರೆಸ್ವೇ, ರಕ್ಷಣಾ ಕೈಗಾರಿಕೆ, ಮೊಬೈಲ್ ಫ್ಯಾಕ್ಟರಿ ಸೇರಿದಂತೆ ಇತ್ಯಾದಿ ಕೈಗಾರಿಕೆಗಳು ಸ್ಥಾಪನೆಯಾಗಿವೆ. ಅಭಿವೃದ್ಧಿ ಮಂತ್ರಗಳನ್ನು ಜಪಿಸಿ ಬಿಜೆಪಿ ಚುನಾವಣೆಗೆ ಹೋಗಿತ್ತು.
ಚುನಾವಣೆಗೂ ಮೊದಲು ಮೋದಿ ಮತ್ತು ಯೋಗಿ ಮಧ್ಯೆ ಭಿನ್ನಾಭಿಪ್ರಾಯವಿದೆ ಎಂಬ ವದಂತಿ ಸುದ್ದಿಗಳು ಬಂದಿತ್ತು. ಆದರೆ ಮೋದಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ ಉಪಯೋಗಿ(ಉತ್ತರ ಪ್ರದೇಶ+ಯೋಗಿ ಆದಿತ್ಯನಾಥ್) ಎಂದು ಕರೆದು ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ತೋರಿಸಿದ್ದರು.