ವಿಜಯಪುರ : ಸೋಮವಾರ ಅಸ್ತಂಗತರಾದ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಶ್ರೀಗಳ ಪಾರ್ಥೀವ ಶರೀರವನ್ನು ಆಶ್ರಮದಿಂದ ಸೈನಿಕ ಶಾಲೆಗೆ ತರಲಾಯಿತು.
ಶ್ರೀಗಳ ಅಂತಿಮ ದರ್ಶನಕ್ಕೆ ಮಂಗಳವಾರ ಬೆಳ್ಳಂಬೆಳಗ್ಗೆಯಿಂದಲೇ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರ ದಂಡು ಆಗಮಿಸುತ್ತಿದೆ. ಆಶ್ರಮದಿಂದ ಸೈನಿಕ ಶಾಲೆ ಮೈದಾನಕ್ಕೆ ಶ್ರೀಗಳ ಪಾರ್ಥೀವ ಶರೀರವನ್ನು ತೆರೆದ ವಾಹನದಲ್ಲಿ ತರಲಾಯಿತು.
ಈ ವೇಳೆ ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಭಕ್ತರು, ಶ್ರೀಗಳಿಗೆ ದೂರದಿಂದಲೇ ಕೈಮುಗಿದು ಕಂಬನಿ ಮಿಡಿದರು. ಸೈನಿಕ ಶಾಲೆ ಮುಂಭಾಗದಲ್ಲಿ ವಚನ ಪಠಣ, ಮಂತ್ರ ಪಠಣ ಮಾಡಲಾಯಿತು.
ಶ್ರೀಗಳ ಅಂತಿಮ ದರ್ಶನಕ್ಕೆ ಸೈನಿಕ ಶಾಲೆಯತ್ತ ನಸುಕಿನ ಜಾವದಲ್ಲೇ ಸಹಸ್ರಾರು ಭಕ್ತರು ಆಗಮಿಸಿದ್ದಾರೆ. ಭಕ್ತರಿಗಾಗಿ ವಿಜಯಪುರ ಬಸ್ ನಿಲ್ದಾಣದಿಂದ ಸೈನಿಕ ಶಾಲೆಗೆ 25 ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.
ಸುಮಾರು 6 ಲಕ್ಷ ಭಕ್ತರಿಗೆ ಪ್ರಸಾದ, ನೀರು, ನೆರಳಿನ ವ್ಯವಸ್ಥೆ ಮಾಡಲಾಗಿದೆ. ಸರ್ಕಾರಿ ಗೌರವದಲ್ಲಿ ಸಿಎಂ ಬೊಮ್ಮಾಯಿ ಮತ್ತು ಸಂಪುಟ ಸಚಿವರು, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮಾಜಿ ಸಿಎಂ ಕುಮಾರಸ್ವಾಮಿ ಭಾಗಿಯಾಗಲಿದ್ದಾರೆ.