ಹಿಂದೂಗಳಲ್ಲಿ ಹಲವು ಹಬ್ಬಗಳಿವೆ, ಆದರೆ ಯುಗಾದಿ ಹಬ್ಬ ಬಹಳ ಮುಖ್ಯವಾದ ಹಬ್ಬ.
ಏಕೆಂದರೆ ಇದು ಹಿಂದೂಗಳಿಗೆ ಹೊಸವರ್ಷದ ಮೊದಲ ದಿನವಾಗಿರುತ್ತೆ. ಹಿಂದೂಗಳು ಹೊಸಸಂಕಲ್ಪಗಳನ್ನು ಹಾಕಿಕೊಂಡು ಮುಂದೆ ನಡೆಯುವ ದಿನ ಇದು.
ಯುಗಾದಿ ಎಂಬ ಪದ ಸಂಸ್ಕೃತದ ಯುಗ ಮತ್ತು ಆದಿ ಎಂಬ ಎರಡು ಪದಗಳಿಂದ ಕೂಡಿದೆ. ಈ ಯುಗಾದಿಯು ಕೃತಯುಗದ ಚೈತ್ರ ಶುದ್ಧ ಪಾಡ್ಯ ತಿಥಿ ದಿನದಂದು ಪ್ರಾರಂಭವಾಯಿತು ಎಂಬ ಪ್ರತೀತಿ ಇದೆ.
ತಾಯುರ್ವಜ್ರ ದೇಹಾಯ, ಸರ್ವ ಸಂಪತ್ಕರಾಯ ಚ
ಸರ್ವಾರಿಷ್ಟ ವಿನಾಶಾಯ, ನಿಂಬಕಂ ದಳ ಭಕ್ಷಣಂ
ಇದರರ್ಥ, ನೂರು ವರ್ಷಗಳ ಆಯುಷ್ಯ, ಸದೃಢ ಆರೋಗ್ಯ, ಸಕಲ ಸಂಪತ್ತುಗಳ ಪ್ರಾಪ್ತಿಗಾಗಿಯೂ, ಸಕಲಾರಿಷ್ಟ ನಿವಾರಣೆಗಾಗಿಯೂ ಬೇವು ಬೆಲ್ಲ ಸೇವನೆ ಮಾಡುತ್ತೇನೆ.
ಈ ಶ್ಲೋಕ ಹೇಳಿ ಬೇವು-ಬೆಲ್ಲ ಸೇವಿಸಬೇಕು. ಬೇವಿನ ಎಲೆಗಳನ್ನು ಸೇವಿಸುವುದರಿಂದ ಸರ್ವ ಅನಿಷ್ಟಗಳು ನಾಶವಾಗುತ್ತೆ ಎಂದು ನಂಬಲಾಗುತ್ತೆ. ಬೆಲ್ಲ ಸಂತೋಷದ ಸಂಕೇತವಾಗಿರುತ್ತೆ. ಇವೆರೆಡು ಮನುಷ್ಯ ಜೀವನದ ಕಷ್ಟ-ಸುಖದ ಪ್ರತೀಕವಾಗಿದೆ.
ಪುರಾಣದ ಪ್ರಕಾರ ಯುಗದಿ ದಿನದಂದು ಬ್ರಹ್ಮ ದೇವನು ಸೃಷ್ಟಿಯ ಕಾರ್ಯ ಆರಂಭಿಸಿದನೆಂಬ ಪ್ರತೀತಿಯಿದೆ. ಅಂದಿನಿಂದಲೇ ವರ್ಷ, ಖುತುಗಳು, ಮಾಸಗಳು, ಗ್ರಹಗಳು, ನಕ್ಷತ್ರಗಳು ಸೃಷ್ಟಿಸಿದನೆಂಬ ನಂಬಿಕೆಯಿದೆ.
ಹಿಂದಿನ ವರ್ಷದ ಸಾಧನೆಗಳನ್ನು ಪರಿಶೀಲಿಸಿ, ಈ ವರ್ಷ ನಾವು ಯಾವ ರೀತಿ ಕಾರ್ಯಪ್ರವೃತ್ತರಾಗಬೇಕು ಎಂದು ಯೋಜನೆ ಹಾಕಿಕೊಳ್ಳುವ ದಿನ ಇಂದು.
ಯುಗಾದಿ ಹಿನ್ನೆಲೆ
ಅಸುರೀ ಶಕ್ತಿಯ ವಿರುದ್ಧ ಸಾತ್ವಿಕ ಶಕ್ತಿಯ ವಿಜಯವೇ ಯುಗಾದಿಯ ವೈಶಿಷ್ಟ. ಈ ದಿನ ಶ್ರೀ ರಾಮ ರಾವಣನನ್ನು ಕೊಂದು ಅಯೋಧ್ಯೆಗೆ ಬಂದು ರಾಮರಾಜ್ಯವಾಳಲು ಪ್ರಾರಂಭಿಸಿದ.
ಅಯೋಧ್ಯೆ ಪ್ರಜೆಗಳು ಸಂತೋಷಪಟ್ಟು, ಮನೆಯ ಮುಂದೆ ವಿಜಯ ಪತಾಕೆ ಹಾರಿಸುವ ದಿನ. ಇಂದಿಗೂ ಸಹ ಈ ಹಬ್ಬದ ದಿನ ಮನೆಯ ಮುಂದೆ ಬಾವುಟ ಹಾರಿಸಿ ನಲಿಯುವ ಪದ್ದತಿ ಇದೆ.