Select Your Language

Notifications

webdunia
webdunia
webdunia
webdunia

75 ಕೋಟಿ ಲಸಿಕೆ ದಾಖಲೆ: ಭಾರತದ ವೇಗಕ್ಕೆ ಬೆರಗಾದ ಡಬ್ಲ್ಯೂಎಚ್ಒ

75 ಕೋಟಿ ಲಸಿಕೆ ದಾಖಲೆ: ಭಾರತದ ವೇಗಕ್ಕೆ ಬೆರಗಾದ ಡಬ್ಲ್ಯೂಎಚ್ಒ
ನವದೆಹಲಿ , ಮಂಗಳವಾರ, 14 ಸೆಪ್ಟಂಬರ್ 2021 (08:05 IST)
ನವದೆಹಲಿ, ಸೆ. 14 : ಲಸಿಕೆ ವಿಚಾರದಲ್ಲಿ ಭಾರತವನ್ನ ಮೀರಿಸುವ ದೇಶ ಯಾವುದೂ ಇಲ್ಲ ಎಂದು ಹಿಂದೆ ಹಲವು ಹೇಳಿದ್ದರು. ಅದು ಅತಿಶಯೋಕ್ತ ಮಾತಲ್ಲ ಎಂಬುದು ಸಾಬೀತಾಗಿದೆ. ಭಾರತ ಗಣನೀಯ ವೇಗದಲ್ಲಿ ಲಸಿಕಾ ಯೋಜನೆ ನಡೆಸಿದೆ. ಕಳೆದ 10 ಕೋಟಿ ಲಸಿಕೆಗಳನ್ನ ಭಾರತ ಕೇವಲ 13 ದಿನಗಳಲ್ಲಿ ನೀಡಿ ಸೈ ಎನಿಸಿದೆ.
Photo Courtesy: Google

ಭಾರತದಲ್ಲಿ ಜನರಿಗೆ ಈವರೆಗೆ ನೀಡಲಾಗಿರುವ ಲಸಿಕೆ ಡೋಸ್ಗಳ ಸಂಖ್ಯೆ 75 ಕೋಟಿ ಗಡಿ ಮುಟ್ಟಿದೆ ಎಂದು ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಹೇಳಿದ್ಧಾರೆ. ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಭಾರತದಲ್ಲಿ ಲಸಿಕಾ ಯೋಜನೆಗೆ ಹೊಸ ಆಯಾಮ ಸಿಕ್ಕಿದೆ ಎಂದು ಅಭಿಪ್ರಾಯಪಟ್ಟ ಅವರು, “ಭಾರತಕ್ಕೆ ಅಭಿನಂದನೆ.. ದೇಶದ 75ನೇ ಸ್ವಾತಂತ್ರ್ಯೋತ್ಸವದ ವೇಳೆ 75 ಕೋಟಿ ಲಸಿಕೆಗಳನ್ನ ಹಾಕಲಾಗಿದೆ” ಎಂದು ಟ್ವೀಟ್ ಮಾಡಿದ್ದಾರೆ.
ನಿನ್ನೆಯಿಂದ 24 ಗಂಟೆಯಲ್ಲಿ, ಅಂದರೆ ಒಂದೇ ದಿನದಲ್ಲಿ 53 ಲಕ್ಷಕ್ಕೂ ಹೆಚ್ಚು ಲಸಿಕೆಗಳನ್ನ ಹಾಕಲಾಗಿದೆ. ಭಾರತದಲ್ಲಿ ಈ ಹಿಂದೆ 2-3 ಬಾರಿ ಒಂದೇ ದಿನದಲ್ಲಿ ಒಂದು ಕೋಟಿಗೂ ಹೆಚ್ಚು ಲಸಿಕೆಗಳನ್ನ ಹಾಕಿದ ದಾಖಲೆ ಇದೆ. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ವೇಗದಲ್ಲಿ ಲಸಿಕೆಗಳನ್ನ ಹಾಕುವ ಗುರಿ ಇಟ್ಟುಕೊಳ್ಳಲಾಗಿದೆ.
ಭಾರತದ ಲಸಿಕಾ ಕಾರ್ಯದ ವೇಗಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಮೆಚ್ಚುಗೆ ವ್ಯಕ್ತಪಡಿಸಿದೆ. ಭಾರತದಲ್ಲಿ ಮೊದಲ 10 ಕೋಟಿ ಲಸಿಕೆ ಡೋಸ್ಗಳನ್ನ ಹಾಕಲು 85 ದಿನಗಳು ಬೇಕಾದವು. ಆದರೆ, ಕಳೆದ 10 ಕೋಟಿ ಡೋಸ್ಗಳನ್ನ ಕೇವಲ 13 ದಿನಗಳಲ್ಲಿ ನೀಡಲಾಗಿದೆ. ಲಸಿಕಾ ಯೋಜನೆಗೆ ಇಷ್ಟು ಚುರುಕು ಮುಟ್ಟಿಸಿದ ಭಾರತಕ್ಕೆ ಅಭಿನಂದನೆ ಎಂದು ಡಬ್ಲ್ಯೂಎಚ್ಒ ಆಗ್ನೇಯ ಏಷ್ಯನ್ ಪ್ರಾದೇಶಿಕ ನಿರ್ದೇಶಕಿ ಡಾ. ಪೂನಂ ಕ್ಷೇತ್ರಪಾಲ್ ಸಿಂಗ್ ಪ್ರಶಂಸೆ ವ್ಯಕ್ತಪಡಿಸಿದ್ಧಾರೆ.
ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ನೀಡಿರುವ ಮಾಹಿತಿ ಪ್ರಕಾರ, ಮೊದಲ 10 ಕೋಟಿ ವ್ಯಾಕ್ಸಿನ್ ಡೋಸ್ಗಳನ್ನ ನೀಡಲು 85 ದಿನಗಳು ಬೇಕಾದವು. ಮುಂದಿನ 10 ಕೋಟಿ ಲಸಿಕೆಗಳನ್ನ ಹಾಕಲು 45 ದಿನ ತಗುಲಿದವು. ಆ ನಂತರದ 10 ಕೋಟಿ ಲಸಿಕೆಗಳಿಗೆ 29 ದಿನ ಬೇಕಾದವು. ಈಗ 60 ಕೋಟಿ ಲಸಿಕೆ ಬಳಿಕ ಹಾಕಲಾದ 10 ಕೋಟಿ ಲಸಿಕೆಗಳನ್ನ ಕೇವಲ 13 ದಿನಗಳಲ್ಲಿ ಹಾಕಲಾಗಿದೆ. ಲಸಿಕೆ ಹಾಕುವ ವೇಗ ಕ್ರಮೇಣ ಹೆಚ್ಚಳವಾಗಿದೆ.
ಕುತೂಹಲವೆಂದರೆ ಆರು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಲ್ಲಾ ವಯಸ್ಕರಿಗೂ ಕನಿಷ್ಠ ಒಂದು ಡೋಸ್ ಲಸಿಕೆಯನ್ನಾದರೂ ನೀಡಲಾಗಿದೆ. ಸಿಕ್ಕಿಮ್, ಹಿಮಾಚಲ ಪ್ರದೇಶ, ಗೋವಾ, ದಾದ್ರಾ ನಾಗರ್ ಹವೇಲಿ, ಲಡಾಖ್ ಮತ್ತು ಲಕ್ಷದ್ವೀಪದಲ್ಲಿ ಈ ಸಾಧನೆ ಮಾಡಲಾಗಿದೆ.
ಭಾರತದಲ್ಲಿ ಮೊದಲು ಲಸಿಕೆ ನೀಡಲು ಆರಂಭಿಸಿದ್ದು ಜನವರಿ 16ರಂದು. ಮೊದಲಿಗೆ ವಯಸ್ಸಾದವರಿಗೆ ಮತ್ತು ಆರೋಗ್ಯ ಕಾರ್ಯಕರ್ತರಿಗೆ ಮಾತ್ರ ಲಸಿಕೆ ನೀಡಲಾಯಿತು. ಏಪ್ರಿಲ್ 1ರಿಂದ 45 ವರ್ಷ ದಾಟಿದವರಿಗೆ ವಿಸ್ತರಿಸಲಾಯಿತು. ಮೇ 1ರಿಂದ 18 ವರ್ಷ ಮೇಲ್ಪಟ್ಟ ಯುವಕರಿಗೂ ಲಸಿಕೆ ನೀಡಲಾಗುತ್ತಿದೆ.
ಭಾರತದಲ್ಲಿ 18 ವರ್ಷ ಮೇಲ್ಪಟ್ಟ ವಯೋಮಾನದಲ್ಲಿ 94 ಕೋಟಿ ಜನರಿದ್ದಾರೆ. ಇವರೆಲ್ಲರಿಗೂ ಲಸಿಕೆ ಹಾಕಲು 188 ಕೋಟಿ ಡೋಸ್ಗಳು ಬೇಕಾಗುತ್ತದೆ. ಈಗ 75 ಕೋಟಿ ಲಸಿಕೆ ಡೋಸ್ ನೀಡಲಾಗಿದೆ. ಇನ್ನೂ ನೂರು ಕೋಟಿಗೂ ಅಧಿಕ ಡೋಸ್ಗಳನ್ನ ಹಾಕಬೇಕಿದೆ. ದಿನಕ್ಕೆ ಒಂದು ಕೋಟಿ ಡೋಸ್ನಂತೆ ವೇಗದಲ್ಲಿ ಸಾಗಿದರೆ ಎಲ್ಲರಿಗೂ ಲಸಿಕೆ ಹಾಕಲು ನೂರಕ್ಕೂ ಹೆಚ್ಚು ದಿನಗಳು ಬೇಕಾಗುತ್ತದೆ.
ಸದ್ಯ ಭಾರತದಲ್ಲಿ ಸೀರಂ ಇನ್ಸ್ಟಿಟ್ಯೂಟ್ನ ಕೋವಿಶೀಲ್ಡ್, ಭಾರತ್ ಬಯೋಟೆಕ್ನ ಕೋವ್ಯಾಕ್ಸಿನ್ ಎರಡು ಲಸಿಕೆಗಳು ಪ್ರಮುಖವಾಗಿ ಬಳಕೆಯಲ್ಲಿವೆ. ಇವೆರಡೂ ಕೂಡ ಎರಡು ಡೋಸ್ಗಳ ಲಸಿಕೆಯಾಗಿವೆ. ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಯೂ ಎರಡು ಡೋಸ್ನದ್ದಾಗಿದೆ. ಝೈಕೋವಿಡಿ ಸೇರಿದಂತೆ ಇನ್ನೂ ಮೂರು ಲಸಿಕೆಗಳು ಸದ್ಯದಲ್ಲೇ ಮಾರುಕಟ್ಟೆಗೆ ಬರಲಿವೆ.


Share this Story:

Follow Webdunia kannada

ಮುಂದಿನ ಸುದ್ದಿ

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ