ಔರಂಗಾಬಾದ್ ಸೆ 29 : ಗುಲಾಬ್ ಚಂಡಮಾರುತದ ಪ್ರಭಾವದಿಂದ ಮಹಾರಾಷ್ಟ್ರದಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಮಳೆಯಿಂದಾಗಿ ಎರಡು ದಿನಗಳ ಅವಧಿಯಲ್ಲಿ ಸುಮಾರು ಹದಿನೇಳು ಮಂದಿ ಸಾವನ್ನಪ್ಪಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
'ಕಳೆದ ಎರಡು ದಿನಗಳಿಂದ ರಾಜ್ಯದಲ್ಲಿ ಭಾರೀ ಮಳೆಯಾಗುತ್ತಿದೆ. ಮಧ್ಯ ಮಹಾರಾಷ್ಟ್ರ, ಮರಾಠವಾಡ ಪ್ರದೇಶ, ವಿದರ್ಭಾ, ಕೊಂಕಣ ಇತರೆ ಪ್ರದೇಶಗಳಲ್ಲಿ ಮಳೆ ಸಂಬಂಧಿ ಅವಘಡಗಳಲ್ಲಿ ಸುಮಾರು ಹದಿನೇಳು ಮಂದಿ ಸಾವನ್ನಪ್ಪಿದ್ದಾರೆ. ಹಲವು ಜಾನುವಾರುಗಳು ಕೂಡ ಸಾವನ್ನಪ್ಪಿವೆ. ಮನೆಗಳು ಕುಸಿದ ವರದಿಯಾಗಿದೆ' ಎಂದು ಉಪವಲಯ ಆಯುಕ್ತ ಪರಾಗ್ ಸೋಮನ್ ಮಾಹಿತಿ ನೀಡಿದ್ದಾರೆ.
ಅಧಿಕ ಮಳೆಯಿಂದಾಗಿ ರಾಜ್ಯದಲ್ಲಿ ಖಾರಿಫ್ ಬೆಳೆಗಳು ಸಂಪೂರ್ಣ ನಾಶವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದ ಬೀಡ್ ಜಿಲ್ಲೆಯಲ್ಲಿ ಮಳೆಯಿಂದಾಗಿ ಅತ್ಯಧಿಕ ಹಾನಿಯಾಗಿದೆ. ಅಲ್ಲಿ ಮೂರು ಮಂದಿ ಸಾವ್ನಪ್ಪಿದ್ದಾರೆ. ಮಧ್ಯ ಮಹಾರಾಷ್ಟ್ರದಲ್ಲಿ ಹತ್ತು ಮಂದಿ, ವಿದರ್ಭಾದಲ್ಲಿ ಆರು, ನಾಸಿಕ್ನಲ್ಲಿ ಒಬ್ಬರು ಸಾವನ್ನಪ್ಪಿರುವ ವರದಿಯಾಗಿದೆ. 203 ಜಾನುವಾರುಗಳು ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. ವಿದರ್ಭಾದಲ್ಲಿ ಮಳೆಯಿಂದಾಗಿ ಸೇತುವೆಯಿಂದ ಬಸ್ ಉರುಳಿ ನಾಲ್ಕು ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದಾರೆ.
ಮಂಜಿರಾ ನದಿ ನೀರಿನ ಮಟ್ಟ ಏರಿಕೆಯಾಗಿ ವಕಾಡಿ ಗ್ರಾಮದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಎನ್ಡಿಆರ್ಎಫ್ ಸಿಬ್ಬಂದಿ ಜನರನ್ನು ಸುರಕ್ಷಿತ ಜಾಗಗಳಿಗೆ ಸ್ಥಳಾಂತರಿಸಿದ್ದಾರೆ. ಗುಲಾಬ್ ಚಂಡಮಾರುತ ಪರಿಣಾಮವಾಗಿ ಮಹಾರಾಷ್ಟ್ರದಲ್ಲಿ ಭಾರೀ ಮಳೆ ಮುನ್ನೆಚ್ಚರಿಕೆ ನೀಡಲಾಗಿದೆ. ಮಂಗಳವಾರ ಹಾಗೂ ಬುಧವಾರ ಭಾರೀ ಮಳೆಯಾಗುವ ಸೂಚನೆಯನ್ನು ನೀಡಲಾಗಿದೆ.
ಶನಿವಾರ ಬಂಗಾಳ ಕೊಲ್ಲಿಯಲ್ಲಿ ರೂಪುಗೊಂಡಿದ್ದ ಗುಲಾಬ್ ಚಂಡಮಾರುತ ಒಡಿಶಾ, ಆಂಧ್ರ, ಪಶ್ಚಿಮ ಬಂಗಾಳದಲ್ಲಿ ಭಾರೀ ಮಳೆಯನ್ನು ತಂದಿದೆ. ಸೋಮವಾರ ಹಾಗೂ ಮಂಗಳವಾರ ಮಹಾರಾಷ್ಟ್ರದಲ್ಲಿಯೂ ಅಧಿಕ ಮಳೆಯಾಗಿದೆ.
ಮಹಾರಾಷ್ಟ್ರದಲ್ಲಿ ಚಂಡಮಾರುತ ಪ್ರಭಾವದಿಂದ ಮಂಗಳವಾರ ಆರಂಭಗೊಂಡು ಭಾರೀ ಮಳೆಯಾಗುವ ಸೂಚನೆ ನೀಡಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಎರಡು ಎನ್ಡಿಆರ್ಎಫ್ ತಂಡವನ್ನು ರಾಜ್ಯದಲ್ಲಿ ನಿಯೋಜಿಸಲಾಗಿದೆ. ಲಾತೂರ್, ಒಸ್ಮಾನಾಬಾದ್ ಗ್ರಾಮಗಳ ಜನರನ್ನು ಸುರಕ್ಷಿತ ಜಾಗಗಳಿಗೆ ಸ್ಥಳಾಂತರಿಸಲಾಗಿದೆ.
ಇದೇ ಜುಲೈ-ಆಗಸ್ಟ್ ತಿಂಗಳಿನಲ್ಲಿ ಮಹಾರಾಷ್ಟ್ರದಲ್ಲಿ ಮುಂಗಾರು ಮಳೆ ಅಬ್ಬರಿಸಿತ್ತು. ಈ ಬಾರಿ ಮುಂಗಾರು ಅವಧಿಯಲ್ಲಿ ಮಹಾರಾಷ್ಟ್ರದಲ್ಲಿ ಮಳೆಯಿಂದಾಗಿ 69 ಮಂದಿ ಸಾವನ್ನಪ್ಪಿದ ವರದಿಯಾಗಿದೆ. ಈ ಮುಂಗಾರು ಅವಧಿಯಲ್ಲಿ ರಾಜ್ಯದ ಎಂಟು ಜಿಲ್ಲೆಗಳಲ್ಲಿ 996 ಮಿ.ಮೀ. ಮಳೆಯಾಗಿದೆ. ಸಾಮಾನ್ಯವಾಗಿ 679 ಮಿ.ಮೀ ಮಳೆಯಾಗುತ್ತಿದ್ದು, ಈ ಬಾರಿ ವಾಡಿಕೆಗಿಂತ ಅಧಿಕ ಪ್ರಮಾಣದ ಮಳೆಯಾಗಿದೆ. ನಾಂದೆಡ್, ಜಲ್ನಾ, ಪ್ರಭಾನಿ ಪ್ರದೇಶದಲ್ಲಿ ವಾಡಿಕೆಗಿಂತ ಅತಿ ಹೆಚ್ಚಿನ ಮಳೆ ದಾಖಲಾಗಿದೆ.