Select Your Language

Notifications

webdunia
webdunia
webdunia
webdunia

ಲಾಕ್ ಡೌನ್ ನಿಂದಾಗಿ ನಿಮ್ಮ ಮೆಚ್ಚಿನ ಧಾರವಾಹಿ ಕಲಾವಿದರ ಪರಿಸ್ಥಿತಿ ಈಗ ಹೇಗಾಗಿದೆ ಗೊತ್ತಾ?!

ಲಾಕ್ ಡೌನ್ ನಿಂದಾಗಿ ನಿಮ್ಮ ಮೆಚ್ಚಿನ ಧಾರವಾಹಿ ಕಲಾವಿದರ ಪರಿಸ್ಥಿತಿ ಈಗ ಹೇಗಾಗಿದೆ ಗೊತ್ತಾ?!

ಕೃಷ್ಣವೇಣಿ ಕೆ

ಬೆಂಗಳೂರು , ಗುರುವಾರ, 7 ಮೇ 2020 (08:59 IST)
ಬೆಂಗಳೂರು: ನೀವು ನೋಡುವ ಧಾರವಾಹಿಗಳಲ್ಲಿ ನಿಮ್ಮ ಮೆಚ್ಚಿನ ಪಾತ್ರಧಾರಿಗಳು ಒಂದೋ ಬ್ಯುಸಿನೆಸ್ ಐಕಾನ್ ಆಗಿರುತ್ತಾರೆ. ಇಲ್ಲವೇ ಶ್ರೀಮಂತ ಮನೆತನದ ಹುಡುಗರಾಗಿರುತ್ತಾರೆ. ನಾಯಕಿಗೆ ಮಾತ್ರವೇ ಕಷ್ಟವಿರುತ್ತದೆ. ಆದರೆ ಆಕೆಯನ್ನು ಶ್ರೀಮಂತ ಮನೆತನದ ನಾಯಕ ರಕ್ಷಿಸುತ್ತಾನೆ.


ಇದು ಸೀರಿಯಲ್ ಲೋಕ. ಆದರೆ ಈ ಸೀರಿಯಲ್ ಕಲಾವಿದರ ನಿಜ ಜೀವನ ಹೀಗಿರುವುದಿಲ್ಲ. ಕಿರುತೆರೆ, ಹಿರಿತೆರೆಗಾಗಿ ಕೆಲಸ ಮಾಡುವ ಎಷ್ಟೋ ಕಾರ್ಮಿಕರು ಊಟಕ್ಕೂ ಪರದಾಡುತ್ತಿರುವ ಸುದ್ದಿ ಓದಿರುತ್ತೀರಿ. ಆದರೆ ಕಲಾವಿದರ ಪಾಡು ಇದಕ್ಕಿಂತ ಭಿನ್ನವಾಗಿಲ್ಲ.

ನಿಮಗೆ ಗೊತ್ತಾ? ನಮ್ಮ ಧಾರವಾಹಿ ಕಲಾವಿದರೆಲ್ಲರೂ ದಿನದ ಭತ್ಯೆ ಪಡೆಯುವವರೇ. ಪ್ರತಿನಿತ್ಯದ ಶೂಟಿಂಗ್ ಗೆ ಇಷ್ಟು ಎಂದು ಇವರಿಗೆ ಸಂಭಾವನೆ ನಿಗದಿಯಾಗಿರುತ್ತದೆ. ಇವರಲ್ಲಿ ಎಷ್ಟೋ ಜನ ಕೇವಲ ಧಾರವಾಹಿ ಆದಾಯವನ್ನೇ ನಂಬಿ ಜೀವನ ನಡೆಸುವವರು.

ಈಗ ಶೂಟಿಂಗ್ ಇಲ್ಲದೇ ಹೆಚ್ಚು ಕಡಿಮೆ ಎರಡು ತಿಂಗಳಾಗುತ್ತಾ ಬಂದಿದೆ. ಅಂದರೆ ಎರಡು ತಿಂಗಳಿನಿಂದ ಯಾವುದೇ ಆದಾಯವೂ ಇವರಿಗಿಲ್ಲ. ಅದರಲ್ಲೂ ಪ್ರಮುಖ ಪಾತ್ರಧಾರಿಗಳಲ್ಲದೇ ಇರುವ ಇತರ ಕಲಾವಿದರಿಗೆ ಸಿಗುವ ಸಂಭಾವನೆಯೂ ಕಡಿಮೆ. ಇವರೆಲ್ಲಾ ಒಂದು ರೀತಿಯಲ್ಲಿ ದಿನಗೂಲಿಯವರೇ.

ಇವರಿಗೆಲ್ಲಾ ಸಂಪಾದನೆಯಿಲ್ಲದೇ ಸುಮಾರು ಎರಡು ತಿಂಗಳೇ ಕಳೆದಿವೆ. ಇದೇ ಸಂಭಾವನೆಯನ್ನೇ ನೆಚ್ಚಿಕೊಂಡು ಜೀವನ ಮಾಡುವವರ ಪಾಡೇನು ಎಂದು ಆಲೋಚನೆ ಮಾಡಿ.  ಕಲಾವಿದರೊಬ್ಬರು ನೀಡಿರುವ ಮಾಹಿತಿಯಂತೆ ಈ ರೀತಿ ಎರಡು ತಿಂಗಳಿನಿಂದ ಸಂಪಾದನೆಯಿಲ್ಲದೇ ಸಮಸ್ಯೆಯನ್ನು ಯಾರಿಗೂ ಹೇಳಿಕೊಳ್ಳಲಾಗದೇ ಎಷ್ಟೋ ಜನ ಒದ್ದಾಡುತ್ತಿದ್ದಾರೆ. ಎಲ್ಲರೂ ಕಾರ್ಮಿಕರ ಬಗ್ಗೆ ಹೇಳುತ್ತಾರೆ. ಆದರೆ ನಮ್ಮ ಸಮಸ್ಯೆಗಳೂ ಕಾರ್ಮಿಕರ ಸಮಸ್ಯೆಗಿಂತ ಭಿನ್ನವಲ್ಲ. ಪರಿಸ್ಥಿತಿ ಹೀಗೇ ಮುಂದುವರಿದರೆ ನಾವೂ ಸಂಕೋಚ ಬಿಟ್ಟು ಸಹಾಯಕ್ಕಾಗಿ ಕೈಯೊಡ್ಡುವ ಪರಿಸ್ಥಿತಿ ಎದುರಾಗಬಹುದು. ಕಲಾವಿದರು ಎಂದರೆ ಭಾರೀ ಸಂಪಾದನೆ ಪಡೆಯುತ್ತಾರೆ ಎಂಬ ಭಾವನೆ ಎಲ್ಲರಲ್ಲಿದೆ. ಆದರೆ ಎಲ್ಲಾ ಕಲಾವಿದರಿಗೂ ಇದು ಅನ್ವಯಿಸುವುದಿಲ್ಲ.

ಎರಡನೇ ಆದಾಯ ಮೂಲವನ್ನಿಟ್ಟುಕೊಳ್ಳದೇ ಇರುವವರಿಗೆ, ಮನೆ, ವಾಹನಕ್ಕಾಗಿ ಸಾಲ ಮಾಡಿಕೊಂಡಿರುವ ಕಲಾವಿದರಿಗೆ ಈಗ ಜೀವನವೇ ಕಷ್ಟ. ಇತರ ಕಾರ್ಮಿಕರಿಗೆ ಹೋಲಿಸಿದರೆ ಕಲಾವಿದರ ಸಂಖ್ಯೆ ಕಡಿಮೆ. ಕನ್ನಡ ಕಿರುತೆರೆಯಲ್ಲಿ ಸುಮಾರು ಒಂದು ಸಾವಿರ ಕಲಾವಿದರು ಆಕ್ಟಿವ್ ಆಗಿರಬಹುದು. ಹೀಗಾಗಿಯೇ ಇವರ ಕಷ್ಟಗಳು ಅಷ್ಟೊಂದು ಪ್ರಾಮುಖ್ಯತೆ ಪಡೆಯುತ್ತಿಲ್ಲ.  ಸದ್ಯದಲ್ಲೇ ಶೂಟಿಂಗ್ ಆರಂಭವಾಗದೇ ಇದ್ದರೆ ಕಾರ್ಮಿಕರಿಗೆ ಮಾತ್ರವಲ್ಲ, ನಮ್ಮಂತಹ ಕಲಾವಿದರ ಜೀವನವೂ ಬೀದಿಗೆ ಬೀಳಲಿದೆ ಎಂದು ನಟರೊಬ್ಬರು ಅಭಿಪ್ರಾಯಪಡುತ್ತಾರೆ.

ಲಾಕ್ ಡೌನ್ ನಡುವೆ ಶೂಟಿಂಗ್ ನಡೆಸಿದರೆ ಜೀವಕ್ಕೆ ಅಪಾಯ. ಶೂಟಿಂಗ್ ನಡೆಯದೇ ಹೋದರೆ ಜೀವನಕ್ಕೇ ತೊಂದರೆ. ಹೀಗಾಗಿದೆ ಈಗ ನಮ್ಮ ನಿಮ್ಮೆಲ್ಲರ ಮೆಚ್ಚಿನ ಕಲಾವಿದರ ಬದುಕು.

Share this Story:

Follow Webdunia kannada

ಮುಂದಿನ ಸುದ್ದಿ

ಧಾರವಾಹಿ ಶೂಟಿಂಗ್ ಗೆ ಅನುಮತಿ ಸಿಕ್ಕರೂ ಆತಂಕ ನಿಂತಿಲ್ಲ