Select Your Language

Notifications

webdunia
webdunia
webdunia
webdunia

ಮತ್ತೆ ಬರುತ್ತಿದೆ 'ಮಾಲ್ಗುಡಿ ಡೇಸ್'; ತಪ್ಪದೆ ನೋಡಿ

ಮತ್ತೆ ಬರುತ್ತಿದೆ 'ಮಾಲ್ಗುಡಿ ಡೇಸ್'; ತಪ್ಪದೆ ನೋಡಿ
SUJENDRA
ಶಂಕರ್ ನಾಗ್ ಎಂದರೆ ಥಟ್ಟನೆ ನೆನಪಿಗೆ ಬರೋದು 'ಮಾಲ್ಗುಡಿ ಡೇಸ್'. ಆರ್.ಕೆ. ನಾರಾಯಣ್ ಅವರ ಕಥೆಗಳನ್ನು 1987ರ ಹೊತ್ತಿನಲ್ಲಿ ಕಿರುತೆರೆಗೆ ತಂದು ಜನಪ್ರಿಯರಾಗಿದ್ದರು ಶಂಕರ್ ನಾಗ್. ಆದರೆ ಅದು ಆ ಕಾಲವಾಯ್ತು. ನೀವು ಮಾಲ್ಗುಡಿ ಡೇಸ್ ಮಿಸ್ ಮಾಡ್ಕೊಂಡಿದ್ದೀರಾ? ಬೇಸರ ಯಾಕೆ? ಅದೇ ಧಾರಾವಾಹಿ ಇನ್ನು ಮರು ಪ್ರಸಾರವಾಗಲಿದೆ.

ಹೌದು, 'ಜನಶ್ರೀ ನ್ಯೂಸ್' ವಾಹಿನಿಯಲ್ಲಿ 'ಮಾಲ್ಗುಡಿ ಡೇಸ್' ಜೂನ್ 16ರಿಂದ ಮರು ಪ್ರಸಾರವಾಗಲಿದೆ. ಆದರೆ ಕನ್ನಡದಲ್ಲಲ್ಲ, ಹಿಂದಿ ಭಾಷೆಯಲ್ಲಿಯೇ ಮರು ಪ್ರಸಾರವಾಗುತ್ತಿದೆ. ಕನ್ನಡಿಗರಿಗೆ ಅನುಕೂಲವಾಗಲೆಂದು ಕನ್ನಡದಲ್ಲೇ ಸಬ್ ಟೈಟಲ್‌ಗಳನ್ನು ಕೊಡಲಾಗುತ್ತದೆ. ಹಾಗಾಗಿ ಅರ್ಥವಾಗಿಲ್ಲ ಎಂದು ಯಾರೂ ಗೊಣಗುವಂತಿಲ್ಲ.

ಸದ್ಯ 'ಗುಡ್ಡದ ಭೂತ' ಧಾರಾವಾಹಿ 'ಜನಶ್ರೀ ನ್ಯೂಸ್' ಚಾನೆಲ್‌ನಲ್ಲಿ ಪ್ರಸಾರವಾಗುತ್ತಿದೆ. ಅದು ಮುಗಿಯುತ್ತಿದ್ದಂತೆ 'ಮಾಲ್ಗುಡಿ ಡೇಸ್' ಆರಂಭ. ಜೂನ್ 16ರಿಂದ ಶನಿವಾರ ಮತ್ತು ಭಾನುವಾರ ಪ್ರಸಾರ ಎಂದು ಚಾನೆಲ್ ಸಂಪಾದಕ ಅನಂತ ಚಿನಿವಾರ್ ತಿಳಿಸಿದ್ದಾರೆ.

'ಮಾಲ್ಗುಡಿ ಡೇಸ್'ನ 39 ಕಂತುಗಳಿಗೆ ಮೂರು ವರ್ಷಗಳ ಕಾಲ ಶಂಕರ್ ನಾಗ್ ಜತೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ರಮೇಶ್ ಭಟ್, ಅಂದು ಆಗುಂಬೆಯಲ್ಲಿ ನಡೆದಿದ್ದ ಚಿತ್ರೀಕರಣ, ಶಂಕರ್ ನಾಗ್ ಅದ್ಭುತ ನಿರೂಪನೆ, ವೀಕ್ಷಕರಿಂದ ಸಿಕ್ಕಿದ್ದ ಪ್ರತಿಕ್ರಿಯೆಗಳನ್ನೆಲ್ಲ ನೆನಪಿಸಿಕೊಂಡು ಗತಕಾಲಕ್ಕೆ ಮರಳಿದರು. ಬಾಲನಟನಾಗಿ ಹೆಸರು ಮಾಡಿದ್ದ ಮಾಸ್ಟರ್ ಮಂಜುನಾಥ್ ಕೂಡ ಸಂತಸ ವ್ಯಕ್ತಪಡಿಸಿದರು.

ಮಾಲ್ಗುಡಿ ವಿಶೇಷಗಳು:
* ಕಥೆ ಆರ್.ಕೆ. ನಾರಾಯಣ್, ನಿರ್ದೇಶನ ಶಂಕರ್ ನಾಗ್
* ಸಂಗೀತ ಎಲ್. ವೈದ್ಯನಾಥನ್, ವ್ಯಂಗ್ಯಚಿತ್ರ ಆರ್.ಕೆ. ಲಕ್ಷ್ಮಣ್
* ನಿರ್ಮಾಪಕ ಟಿ.ಎಸ್. ನರಸಿಂಹನ್, ಭಾಷೆ ಹಿಂದಿ.
* ಧಾರಾವಾಹಿಯ ಪ್ರಮುಖ ಪಾತ್ರಧಾರಿ ಅನಂತ್ ನಾಗ್.
* ಇಡೀ ಧಾರಾವಾಹಿ ಸುತ್ತುತ್ತಿದ್ದುದು ಮಾಸ್ಟರ್ ಮಂಜುನಾಥ್ ಪಾತ್ರದ ಸುತ್ತ.
* ಇದರಲ್ಲಿ ಶಂಕರ್ ನಾಗ್ ಅಭಿನಯಿಸಿದ್ದು ಎರಡೇ (30 ಮತ್ತು 31) ಕಂತುಗಳಲ್ಲಿ.
* 18ನೇ ಕಂತಿನಲ್ಲಿ ವಿಷ್ಣುವರ್ಧನ್ ಕೂಡ ನಟಿಸಿದ್ದರು.
* ಬಿ. ಜಯಶ್ರೀ, ಗಿರೀಶ್ ಕಾರ್ನಾಡ್, ವೈಶಾಲಿ ಕಾಸರವಳ್ಳಿ, ರಮೇಶ್ ಭಟ್ ಕೂಡ ನಟಿಸಿದ್ದರು.
* 22 ನಿಮಿಷವಿದ್ದ ಈ ಧಾರಾವಾಹಿಯ 39 ಕಂತುಗಳು ದೂರದರ್ಶನದಲ್ಲಿ ಪ್ರಸಾರವಾಗಿದ್ದವು.
* ಸೋನಿ ಟಿವಿ 'ಮಾಲ್ಗುಡಿ ಡೇಸ್'ನ್ನು ಮರು ಪ್ರಸಾರ ಮಾಡಿತ್ತು.
* ಇದೇ ಧಾರಾವಾಹಿಯನ್ನು ಕವಿತಾ ಲಂಕೇಶ್ 2004ರಲ್ಲಿ ಮತ್ತೆ ನಿರ್ದೇಶಿಸಿದ್ದರು.

Share this Story:

Follow Webdunia kannada