ಸೂಪರ್ ಎಂಟರ ಶನಿವಾರದ ಪಂದ್ಯದಲ್ಲಿ ವೆಸ್ಟ್‌ಇಂಡೀಸ್ ವಿರುದ್ದ 20 ರನ್‌ಗಳ ಜಯ ದಾಖಲಿಸುವ ಮೂಲಕ ದಕ್ಷಿಣ ಆಫ್ರಿಕಾ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಸೋಲಿಲ್ಲದ ಸರದಾರನಾಗಿ ಮುಂದುವರಿದಿದೆ.
184ರ ಮೊತ್ತವನ್ನು ಬೆಂಬತ್ತುತ್ತಿದ್ದ ವೆಸ್ಟ್‌ಇಂಡೀಸ್ ಲೆಂಡಿಲ್ ಸೈಮನ್ಸ್‌ರ ಅಮೋಘ 77 ರನ್ನುಗಳ ಹೊರತಾಗಿಯೂ ವಾಯ್ನೆ ಪಾರ್ನೆಲ್ ಅಬ್ಬರಕ್ಕೆ ಸಿಲುಕಿ ನಲುಗಿ ಹೋಯಿತು.
ಮೊದಲು ಬ್ಯಾಟಿಂಗ್ ಮಾಡಿದ್ದ ದಕ್ಷಿಣ ಆಫ್ರಿಕಾ ಏಳು ವಿಕೆಟ್ ನಷ್ಟಕ್ಕೆ 183 ರನ್ ದಾಖಲಿಸಿತ್ತು. ಜಾಕ್ವಾಸ್ ಕ್ಯಾಲಿಸ್ (45) ಮತ್ತು ಹರ್ಷೆಲ್ ಗಿಬ್ಸ್ (55) ಹರಿಣಗಳಿಗೆ ಪ್ರಮುಖ ಮೈಲೇಜ್ ನೀಡಿದ್ದರು. ಕ್ಯಾಲಿಸ್ 31 ಎಸೆತಗಳಿಂದ ಆರು ಬೌಂಡರಿ ಹಾಗೂ ಒಂದು ಸಿಕ್ಸರ್ ಸಿಡಿಸಿದ್ದರೆ, ಗಿಬ್ಸ್ 35ರಿಂದ ಎಂಟು ಬೌಂಡರಿ ಹಾಗೂ ಒಂದು ಸಿಕ್ಸರ್ ಚಚ್ಚಿದ್ದರು.
ನಾಯಕ ಗ್ರೇಮ್ ಸ್ಮಿತ್ 18ರಿಂದ 31 ಗಳಿಸಿದ್ದರು. ಉಳಿದಂತೆ ಅಬ್ರಹಾಂ ಡೇ ವಿಲ್ಲರ್ಸ್ 17, ಆಲ್ಬೀ ಮೋರ್ಕೆಲ್ 10, ರೆ ವಾನ್ ಡೆರ್ ಮೆರ್ವೆ 1 ರನ್‌ಗೆ ವಿಕೆಟ್ ಒಪ್ಪಿಸಿದ್ದರೆ, ಜೀನ್ ಪೌಲ್ ಡ್ಯುಮಿನಿಯವರದ್ದು ಶೂನ್ಯ. ಮಾರ್ಕ್ ಬುಚರ್ (17) ಮತ್ತು ಜೋಹಾನ್ ಬೋಥಾ (4) ಅಜೇಯರಾಗುಳಿದಿದ್ದಾರೆ.
ವಿಂಡೀಸ್ ಪರ ಜೆರೋಮ್ ಟೇಲರ್ 30ಕ್ಕೆ ಮೂರು, ಫೀಡೆಲ್ ಎಡ್ವರ್ಡ್ಸ್, ಸುಲೈಮಾನ್ ಬೆನ್, ಪೊಲಾರ್ಡ್, ಸೈಮನ್ಸ್ ತಲಾ ಒಂದೊಂದು ವಿಕೆಟ್ ಕಬಳಿಸಿದ್ದರು.
ವೆಸ್ಟ್‌ಇಂಡೀಸ್‌ಗೆ ಪ್ರಮುಖ ಖಳನಾದದ್ದು ಪಾರ್ನೆಲ್. ಅವರು ಕೇವಲ 13ಕ್ಕೆ ನಾಲ್ಕು ವಿಕೆಟ್‌ಗಳನ್ನು ಕಿತ್ತಿದ್ದರು. ಆರಂಭಿಕ ಆಟಗಾರರಾದ ಕ್ರಿಸ್ ಗೇಲ್ (5) ಮತ್ತು ಆಂದ್ರೆ ಫ್ಲೆಚರ್ (0) ಬಂದಷ್ಟೇ ವೇಗದಲ್ಲಿ ಹೋಗುವಂತೆ ಮಾಡಿದವರು ಕೂಡ ಅವರೇ. ಪಾರ್ನೆಲ್ ಪಡೆದ ಮತ್ತೆರಡು ವಿಕೆಟ್‌ಗಳು ಪೊಲಾರ್ಡ್ (6) ಮತ್ತು ಜೆರೋಮ್ ಟೇಲರ್ (0)ರದ್ದು.
ಆರಂಭಿಕ ಕುಸಿತದ ಹೊರತಾಗಿಯೂ ವಿಂಡೀಸ್‌ಗೆ ಆಸರೆಯಾದದ್ದು ಲೆಂಡಿಲ್ ಸೈಮನ್ಸ್. ಅವರು ಕೇವಲ 50 ಎಸೆತಗಳಿಂದ 77 ರನ್ ಪೇರಿಸಿದ್ದರು. ತನ್ನ ಇನ್ನಿಂಗ್ಸ್‌ನಲ್ಲಿ 12 ಬೌಂಡರಿ ಹಾಗೂ ಒಂದು ಸಿಕ್ಸರ್‌ಗಳಿಗೂ ಅವರು ಕಾರಣರಾಗಿದ್ದಾರೆ.
ವಿಂಡೀಸ್ ಇನ್ನಿಂಗ್ಸ್‌ನಲ್ಲಿ ಎರಡಂಕಿ ತಲುಪಿದ್ದು ಸೈಮನ್ಸ್ ಹೊರತುಪಡಿಸಿ ಇಬ್ಬರೇ ಇಬ್ಬರು ಆಟಗಾರರು-- ಸುಲೈಮಾನ್ ಬೆನ್ ಅಜೇಯ 13 ಹಾಗೂ ದ್ವಾಯ್ನೆ ಬ್ರಾವೋ 19.
ಶಿವನಾರಾಯಣೆ ಚಂದರಪಾಲ್ (8), ರಾಮನರೇಶ್ ಸರ್ವಾನ್ (8), ದನೇಶ್ ರಾಮದಿನ್ (8), ಫೀಡೆಲ್ ಎಡ್ವರ್ಡ್ಸ್ (2*)ಕ್ಕೆ ತೃಪ್ತರಾದರು.
ರೋಚಕ ಹಂತ ತಲುಪಿದ್ದ ಪಂದ್ಯದಲ್ಲಿ ಕೊನೆಗೂ ವಿಂಡೀಸ್ ಗುರಿ ತಲುಪಲಾಗಲಿಲ್ಲ. ಒಂಬತ್ತು ವಿಕೆಟ್ ಕಳೆದುಕೊಂಡ ಕೆರೆಬಿಯನ್ ಯೋಧರು 20 ಓವರುಗಳಲ್ಲಿ 163 ರನ್ ಗಳಿಸಲಷ್ಟೇ ಶಕ್ತರಾದರು.
ಈ ಪಂದ್ಯವನ್ನು 20 ರನ್ನುಗಳಿಂದ ಗೆಲ್ಲುವುದರೊಂದಿಗೆ 'ಇ' ಗುಂಪಿನಲ್ಲಿ ದಕ್ಷಿಣ ಆಫ್ರಿಕಾ ಆಡಿರುವ ಎರಡೂ ಪಂದ್ಯಗಳಲ್ಲಿ ಜಯಿಸಿದ್ದರಿಂದ ನಾಲ್ಕು ಅಂಕಗಳನ್ನು ಪಡೆದು ಅಗ್ರ ತಂಡವಾಗಿ ಹೊರ ಹೊಮ್ಮಿದೆ.