ಟ್ವೆಂಟಿ-20 ವಿಶ್ವಕಪ್ ಸೂಪರ್ ಎಂಟರ ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನವು ಶ್ರೀಲಂಕಾದೆದುರು 19 ರನ್ನುಗಳ ಸೋಲುಂಡಿದೆ.
ಟಾಸ್ ಗೆದ್ದು ಬ್ಯಾಟಿಂಗ್‌ಗಿಳಿದಿದ್ದ ಶ್ರೀಲಂಕಾ 151ರ ಗುರಿಯನ್ನು ಪಾಕಿಸ್ತಾನಕ್ಕೆ ನೀಡಿತ್ತು. ಆದರೆ ಪಾಕಿಸ್ತಾನ ಒಂಬತ್ತು ವಿಕೆಟ್ ಕಳೆದುಕೊಂಡು 131ರನ್ ಮಾಡಲಷ್ಟೇ ಶಕ್ತವಾಯಿತು.
ಪಾಕಿಸ್ತಾನ ಈ ಪಂದ್ಯದಲ್ಲಿ ಮೊದಲ ನಗು ಬೀರಿದ್ದು ಸನತ್ ಜಯಸೂರ್ಯ ಕಳಚಿಕೊಂಡಾಗ. ಅವರು 24 ಎಸೆತಗಳಿಂದ 26 ರನ್ ಗಳಿಸಿದ್ದಾಗ ಶಾಹಿದ್ ಆಫ್ರಿದಿ ಎಸೆತವನ್ನು ನಾಯಕ ಯೂನಿಸ್ ಖಾನ್ ಕೈಗಿತ್ತಿದ್ದರು.
ನಂತರದ ಎರಡೇ ಓವರಿನಲ್ಲಿ ತಿಲಕರತ್ನೆ ದಿಲ್‌ಶಾನ್ ಹೊರಟು ಹೋದರು. ಅವರು ಅರ್ಧಶತಕದಂಚಿನಲ್ಲಿದ್ದಾಗ (46) ಮತ್ತೆ ಕಾಡಿದ್ದು ಅದೇ ಆಫ್ರಿದಿ. 39 ಎಸೆತಗಳನ್ನೆದುರಿಸಿದ್ದ ಅವರು 8 ಎಸೆತಗಳನ್ನು ಬೌಂಡರಿ ತಲುಪಿಸಿದ್ದರು.
ಉಳಿದಂತೆ ಎರಡಂಕಿ ದಾಟಿದ್ದು ಕುಮಾರ ಸಂಗಕ್ಕರ (15) ಮತ್ತು ಮಹೇಲಾ ಜಯವರ್ಧನೆ (19) ಮಾತ್ರ. ಇವರಿಬ್ಬರನ್ನೂ ಬಲಿ ಪಡೆದದ್ದು ಸಯೀದ್ ಅಜ್ಮಲ್.
ಚಾಮರ ಸಿಲ್ವಾ (8), ಜೆಹಾನ್ ಮುಬಾರಕ್ (5), ನುವಾನ್ ಕುಲಶೇಖರ (0) ಅಂಜೆಲೆ ಮ್ಯಾಥ್ಯೂಸ್ (9*), ಮತ್ತು ಲಸಿತ್ ಮಾಲಿಂಗ (2*) ಅಲ್ಪಮೊತ್ತ ದಾಖಲಿಸಿದ್ದರು.
ಒಟ್ಟಾರೆ ಶ್ರೀಲಂಕಾ 20 ಓವರುಗಳಲ್ಲಿ 7 ವಿಕೆಟ್ ಕಳೆದುಕೊಂಡು 150 ರನ್ ಗಳಿಸಿತ್ತು. ಪಾಕ್ ಪರ ಉಮರ್ ಗುಲ್, ಶಾಹಿದ್ ಆಫ್ರಿದಿ ಮತ್ತು ಸಯೀದ್ ಅಜ್ಮಲ್ ತಲಾ ಎರಡೆರಡು ವಿಕೆಟ್ ಕಬಳಿಸಿದ್ದರು.
ಸಾಧಾರಣ ಮೊತ್ತಕ್ಕೆ ದ್ವೀಪರಾಷ್ಟ್ರವನ್ನು ನಿಯಂತ್ರಿಸಿದ್ದ ಪಾಕಿಸ್ತಾನ ಅಗ್ರ ಕ್ರಮಾಂಕವನ್ನು ಬೇಗನೆ ಕಳೆದುಕೊಂಡಿತ್ತು. ಸಲ್ಮಾನ್ ಭಟ್ (0) ಮತ್ತು ಕಮ್ರಾನ್ ಅಕ್ಮಲ್ (5) ಪ್ರತಿರೋಧ ತೋರದೆ ವಾಪಸಾಗಿದ್ದರು. ಶೋಯಿಬ್ ಮಲಿಕ್ 20 ಎಸೆತಗಳಿಂದ ಐದು ಬೌಂಡರಿಗಳ ಸಹಿತ 28 ರನ್ ಮಾಡಿ ವಿಕೆಟ್ ಒಪ್ಪಿಸಿದ್ದರು.
ಮಿಸ್ಬಾ ಉಲ್ ಹಕ್ 28ರಿಂದ 21 ರನ್ ಗಳಿಸಿ ಔಟಾದರೆ ಆಫ್ರಿದಿ ಖಾತೆಯನ್ನೇ ತೆರೆಯಲಿಲ್ಲ. ಆದರೆ ನಾಯಕನಾಟವಾಡಿದ ಯೂನಿಸ್ ಖಾನ್ ಅರ್ಧಶತಕ (50) ದಾಖಲಿಸಿದ್ದರು. ತನ್ನ ಇನ್ನಿಂಗ್ಸ್‌ನಲ್ಲಿ 37 ಎಸೆತಗಳನ್ನೆದುರಿಸಿದ್ದ ಅವರು ನಾಲ್ಕು ಬೌಂಡರಿಗಳನ್ನಟ್ಟಿದ್ದರು.
ಕೊನೆಯ ಎರಡು ಓವರುಗಳಲ್ಲಿ ಸೊಹೈಲ್ ತನ್ವೀರ್ (3), ಫವಾದ್ ಆಲಮ್ (12) ಮತ್ತು ಮೊಹಮ್ಮದ್ ಅಮೀರ್ (0) ವಿಕೆಟ್ ಕಳೆದುಕೊಂಡರು. ಉಮರ್ ಗುಲ್ (9) ಅಜೇಯರಾಗುಳಿದಿದ್ದಾರೆ.
ಒಟ್ಟಾರೆ 20 ಓವರುಗಳಲ್ಲಿ 9 ವಿಕೆಟ್ ಕಳೆದುಕೊಂಡ ಪಾಕಿಸ್ತಾನ 131 ರನ್ ಗಳಿಸಲಷ್ಟೇ ಶಕ್ತವಾಯಿತು.
ಶ್ರೀಲಂಕಾ ಪರ 17ಕ್ಕೆ ಮೂರು ವಿಕೆಟ್ ಪಡೆದು ಲಸಿತ್ ಮಾಲಿಂಗಾ ಮಿಂಚಿದ್ದಾರೆ. ಉಳಿದಂತೆ ಮುತ್ತಯ್ಯ ಮುರಳೀಧರನ್ ಎರಡು, ಅಂಜೆಲೆ ಮ್ಯಾಥ್ಯೂಸ್ ಮತ್ತು ನುವಾನ್ ಕುಲಶೇಖರ ತಲಾ ಒಂದೊಂದು ವಿಕೆಟ್ ಕಿತ್ತಿದ್ದರು.
ಸೂಪರ್ ಎಂಟರ ಮೊದಲನೇ ಪಂದ್ಯವನ್ನು ಕಳೆದುಕೊಂಡಿರುವ ಪಾಕಿಸ್ತಾನ ತನ್ನ ಎರಡನೇ ಪಂದ್ಯವನ್ನು ನ್ಯೂಜಿಲೆಂಡ್ ವಿರುದ್ಧ ಶನಿವಾರ ಆಡಲಿದೆ.