ಐಸಿಸಿ ಟ್ವೆಂಟಿ-20 ವಿಶ್ವಕಪ್ ಕ್ರಿಕೆಟ್‌ನ ಶುಕ್ರವಾರದ ಸೂಪರ್ 8 ಹಂತದ 'ಇ' ಗುಂಪಿನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಭಾರತ ತಂಡವನ್ನು ವೆಸ್ಟ್‌ಇಂಡೀಸ್ ಏಳು ವಿಕೆಟ್‌ಗಳಿಂದ ಮಣಿಸಿದೆ. ಈ ಮೂಲಕ ಯುವರಾಜ್ ಸಿಂಗ್(67ರನ್, 43 ಎಸೆತ) ಅವರ ಕೆಚ್ಚದೆಯ ಪರಿಶ್ರಮ ವ್ಯರ್ಥ್ಯವಾಯಿತು. ಭಾರತ ನೀಡಿದ 154ರನ್ ಸವಾಲನ್ನು ವಿಂಡೀಸ್ 18.4 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.
ಟಾಸ್ ಗೆದ್ದ ಭಾರತೀಯ ಕಪ್ತಾನ ಮಹೇಂದ್ರ ಸಿಂಗ್ ಧೋನಿ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದರು. ಆದರೆ ವಿಂಡೀಸ್ ವೇಗಿ ಎಡ್ವರ್ಡ್ಸ್ ಆರಂಭದಲ್ಲೇ ಭಾರತಕ್ಕೆ ಆಘಾತವನ್ನಿತ್ತರು. ರೋಹಿತ್ ಶರ್ಮಾ(5), ಗಂಭೀರ್(14) ಹಾಗೂ ಸುರೇಶ್ ರೈನಾ(5)ರನ್ ಗಳಿಸಿ ಬೇಗನೇ ಪೆವಿಲಿಯನ್ ಸೇರಿಕೊಂಡರು.
ಆದರೆ ನಾಯಕ ಧೋನಿ ಜತೆ ಸೇರಿ ಯುವಿ ನಾಲ್ಕನೇ ವಿಕೆಟ್‌ಗೆ 37ರನ್ ಜತೆಯಾಟದಲ್ಲಿ ಪಾಲ್ಗೊಂಡರು. ನಿಧಾನಗತಿಯ ಬ್ಯಾಟಿಂಗ್ ಪ್ರದರ್ಶನವಿತ್ತ ಧೋನಿ 23 ಎಸೆತಗಳಲ್ಲಿ 11ರನ್ ಗಳಿಸಿ ಬ್ರಾವೊಗೆ ಬಲಿಯಾದರು. ನಂತರ ಬಂದ ಯೂಸುಫ್ ಪಠಾಣ್ ಜತೆ ಸೇರಿ ಯುವರಾಜ್ ವೇಗದಲ್ಲಿ ರನ್ ಪೇರಿಸಿತೊಡಗಿದರು. ಇವರಿಬ್ಬರು ಸೇರಿ ಐದನೇ ವಿಕೆಟ್‌ಗೆ 5.3 ಓವರ್‌ಗಳಲ್ಲಿ 54ರನ್ ಸೇರಿಸಿದರು.
ಭರ್ಜರಿ ಬ್ಯಾಟಿಂಗ್ ಬೀಸಿದ ಯುವರಾಜ್ ಸಿಂಗ್ 43 ಎಸೆತಗಳಲ್ಲಿ 67ರನ್ ಬಾರಿಸಿದರು. ಇದರಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್‌ಗಳೂ ಸೇರಿದ್ದವು. ಯುವಿಗೆ ಉತ್ತಮ ಬೆಂಬಲ ನೀಡಿದ ಯೂಸುಫ್ ಪಠಾಣ್ 23 ಎಸೆತದಲ್ಲಿ 3 ಬೌಂಡರಿ 1 ಸಿಕ್ಸರ್ ನೆರವಿನಿಂದ 31ರನ್ ಗಳಿಸಿದರು. ಅಂತಿಮ ಓವರ್‌ನಲ್ಲಿ ನಿರತಂಕ ಬ್ಯಾಟ್ ಬೀಸಿದ ಹರ್ಭಜನ್ ಸಿಂಗ್ ಕೇವನ ನಾಲ್ಕು ಎಸೆತಗಳಲ್ಲಿ ಹ್ಯಾಟ್ರಿಕ್ ಬೌಂಡರಿ ಸಹಿತ ಅಜೇಯ 13ರನ್ ಗಳಿಸಿದರು. ಆಲ್‌ರೌಂಡರ್ ಇರ್ಫಾನ್ ಪಠಾಣ್(2) ನಿರಾಸೆ ಮೂಡಿಸಿದರೆ ಜಹೀರ್ ಖಾನ್ ಖಾತೆ ತೆರೆಯದೇ ಅಜೇಯರಾಗುಳಿದರು.
ಒಟ್ಟಾರೆ ಭಾರತ 20 ಓವರ್‌ನಲ್ಲಿ ಏಳು ವಿಕೆಟ್ ನಷ್ಟಕ್ಕೆ 153ರನ್ ಗಳಿಸಿತು. ಬಿಗು ದಾಳಿ ನಡೆಸಿದ ಎಡ್ವರ್ಡ್ಸ್ ನಾಲ್ಕು ಓವರ್‌ಗಳಲ್ಲಿ 24ರನ್ ನೀಡಿ ಮೂರು ವಿಕೆಟ್ ಕಿತ್ತರೆ ಆಲ್‌ರೌಂಡರ್ ಡ್ವೇನ್ ಬ್ರಾವೊ ನಾಲ್ಕು ಓವರ್‌ನಲ್ಲಿ 38ರನ್ ನೀಡಿ ನಾಲ್ಕು ವಿಕೆಟ್ ಕಿತ್ತರು.
154 ಸವಾಲನ್ನು ಉತ್ತರಿಸಿದ ವಿಂಡೀಸ್‌ಗೆ ಎಡಗೈ ವೇಗಿ ಇರ್ಫಾನ್ ಪಠಾಣ್ ಆರಂಭಿಕ ಆಘಾತವನ್ನಿತ್ತರು. ಓಪನರ್ ಫ್ಲೆಚರ್ ಶೂನ್ಯ ಸಂಪಾದಿಸಿ ಪೆವಿಲಿಯನ್ ಸೇರಿಕೊಂಡರು. ನಾಯಕ ಗೈಲ್ 4 ಬೌಂಡರಿ ನೆರವಿನಿಂದ 22ರನ್ ಗಳಿಸಿ ಯೂಸುಫ್ ಪಠಾಣ್‌ಗೆ ಬಲಿಯಾದರು.
ಆದರೆ ನಂತರ ಬಂದ ಬ್ರಾವೊ ಹಾಗೂ ಸಿಮನ್ಸ್ ಮೂರನೇ ವಿಕೆಟ್‌ಗೆ 58ರನ್ ಒಟ್ಟುಸೇರಿಸಿ ಭಾರತೀಯ ಪಾಳೆಯದಲ್ಲಿ ನಡುಕ ಸೃಷ್ಟಿಸಿದರು. ಸಿಮನ್ಸ್ 44ರನ್ ಗಳಿಸಿದ್ದಾಗ ಓಜಾ ಎಸೆತಕ್ಕೆ ಪಠಾಣ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿಕೊಂಡರು.
ಒಂದು ತುದಿಯಿಂದ ಬಿರುಸಿದ ಆಟ ಪ್ರದರ್ಶಿಸಿದ ಡ್ವೇನ್ ಬ್ರಾವೊ 36 ಎಸೆತಗಳಲ್ಲಿ 66ರನ್ ಗಳಿಸಿ ಅಜೇಯರಾಗುಳಿದರು. ಅವರ ಈ ಇನ್ನಿಂಗ್ಸ್‌ನಲ್ಲಿ 4 ಬೌಂಡರಿ ಹಾಗೂ 3 ಭರ್ಜರಿ ಸಿಕ್ಸರ್‌ಗಳು ಸೇರಿಕೊಂಡಿದ್ದವು. ಕೊನೆಗ ಬಂದ ಶಿವನಾರಯಣ್ ಚಂದ್ರಪಾಲ್ ಸಹ 9 ಎಸೆತದಲ್ಲಿ 18ರನ್ ಗಳಿಸಿ ವಿಂಡೀಸ್ ಜಯವನ್ನು ಸುಲಭಗೊಳಿಸಿದರು. ಅಂತಿಮವಾಗಿ ವಿಂಡೀಸ್ 18.4 ಎಸೆತಗಳಲ್ಲಿ ವಿಜಯದ ಗುರಿ ತಲುಪಿತು.
ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನವಿತ್ತ ಡ್ವೇನ್ ಬ್ರಾವೊ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಭಾರತ ಮುಂದಿನ ಸೆಮಿಫೈನಲ್ ಹಂತ ಪ್ರವೇಶಿಸಬೇಕಾದರೆ ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯಗಳನ್ನು ಗೆಲ್ಲಲೇ ಬೇಕಾದ ಒತ್ತಡದ ಪರಿಸ್ಥಿತಿಗೆ ಸಿಲುಕಿದೆ.