Select Your Language

Notifications

webdunia
webdunia
webdunia
webdunia

ದಕ್ಷಿಣ ಆಫ್ರಿಕಾಕ್ಕೆ ವಿಶ್ವಕಪ್ ಎಟುಕುತ್ತಿಲ್ಲ ಯಾಕೆ?

ದಕ್ಷಿಣ ಆಫ್ರಿಕಾ
ಲಂಡನ್ , ಶುಕ್ರವಾರ, 19 ಜೂನ್ 2009 (15:07 IST)
ಟ್ವೆಂಟಿ-20 ವಿಶ್ವಕಪ್‌ನಲ್ಲಿ ಪಾಕಿಸ್ತಾನದೆದುರು ಪರಾಜಯ ಹೊಂದುವ ಮೂಲಕ ದಕ್ಷಿಣ ಆಫ್ರಿಕಾ ತಾನೊಂದು ಅದೃಷ್ಟಹೀನ ತಂಡವೆಂಬುದನ್ನು ಮತ್ತೊಮ್ಮೆ ಪುರಾವೆ ಸಮೇತ ಪ್ರಚುರಪಡಿಸಿದೆ. ಇದುವರೆಗೂ ಯಾವೊಂದು ವಿಶ್ವಕಪ್ ಫೈನಲ್ ತಲುಪಲಾಗದ ಹರಿಣಗಳ ಸೋಲನ್ನು 'ದುರಂತ'ವೆಂದೇ ಹೇಳಬಹುದಲ್ಲವೇ?

ದಕ್ಷಿಣ ಆಫ್ರಿಕಾ ಪ್ರಬಲ ತಂಡವಾಗಿದ್ದ ಹೊರತಾಗಿಯೂ ಅಂತಿಮ ಗೆಲುವು ಅದಕ್ಕೊಲಿವುದಿಲ್ಲ ಯಾಕೆ ಎಂಬುದಕ್ಕೆ ನಿರ್ದಿಷ್ಟ ಕಾರಣ ಹುಡುಕಲು ಅಸಾಧ್ಯ. ಈ ಬಾರಿಯಂತೂ ಹರಿಣಗಳು ಪ್ರತಿಭಾವಂತರನ್ನೇ ಹೊಂದಿದ್ದರೂ ಅದರ 'ದುರಂತ'ಕ್ಕೆ ಮಾತ್ರ ಪರಿಹಾರ ದೊರೆತಿಲ್ಲ.

ದಕ್ಷಿಣ ಆಫ್ರಿಕಾವು ಇದುವರೆಗೂ ಯಾವುದೇ ವಿಶ್ವಕಪ್ ಗೆದ್ದುಕೊಳ್ಳಲು ಸಾಧ್ಯವಾಗಿಲ್ಲ. ಅಷ್ಟೇ ಏಕೆ ಫೈನಲ್ ತಲುಪಲೂ ಆಗಿಲ್ಲ. 1991-92ರಲ್ಲಿ ಇಂಗ್ಲೆಂಡ್ ವಿರುದ್ಧ, 2006-07ರಲ್ಲಿ ಆಸ್ಟ್ರೇಲಿಯಾ ವಿರುದ್ಧ ದಕ್ಷಿಣ ಆಫ್ರಿಕಾ ಸೆಮಿಫೈನಲ್‌ನಲ್ಲಿ ಈ ತಂಡ ಸೋಲುವ ಮೂಲಕ ವಿಶ್ವಕಪ್‌ನಿಂದ ಹೊರ ಬಿದ್ದಿತ್ತು. 1999ರಲ್ಲಿ ಆಸ್ಟ್ರೇಲಿಯಾದೆದುರು ಸಮಬಲ ಸಾಧಿಸಿದ್ದರೂ ಟೂರ್ನಮೆಂಟ್‌ನಿಂದ ನಿರ್ಗಮಿಸಬೇಕಾಯಿತು. ಆ ಮೂಲಕ ಮೂರು ಬಾರಿ ವಿಶ್ವಕಪ್ ಸನಿಹಕ್ಕೆ ಬಂದಿದ್ದರೂ ಫೈನಲ್ ಮಾತ್ರ ಕೈಗೆ ಸಿಗದ ತುತ್ತಾಗಿತ್ತು.
PTI

ಕಾಕತಾಳೀಯವೆಂದರೆ ದಕ್ಷಿಣ ಆಫ್ರಿಕಾವು ಕಳೆದ ಬಾರಿಯ ಟ್ವೆಂಟಿ-20 ವಿಶ್ವಕಪ್ ಕ್ವಾರ್ಟರ್ ಫೈನಲ್‌ನಲ್ಲಿ ಭಾರತದೆದುರು ಪರಾಜಯಗೊಂಡಿದ್ದು. ಈ ಬಾರಿಯಾದರೂ ವಿಶ್ವಕಪ್ ಎಂಬ ದೂರದ ಬೆಟ್ಟ ಹರಿಣಗಳಿಗೆ ಎಟಕುವುದೆಂಬ ಭರವಸೆಯಿತ್ತು. ಅದೂ ಪಾಕಿಸ್ತಾನದ ವಿರುದ್ಧ ಸೆಮಿಫೈನಲ್‌ನಲ್ಲಿ ಸೋಲುವ ಮೂಲಕ ಹುಸಿಯಾಗಿದೆ.

ಇದೇ ಪರಿಸ್ಥಿತಿ ಚಾಂಪಿಯನ್ಸ್ ಟ್ರೋಫಿಯಲ್ಲೂ ನಡೆದಿರುವುದು ನಿಜಕ್ಕೂ ಮತ್ತೊಂದು ದುರಂತ. ಭಾರತದ ವಿರುದ್ಧ 2000 ಮತ್ತು 2002ರಲ್ಲಿ ಹಾಗೂ 2006ರಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ಸೆಮಿಫೈನಲ್‌ನಲ್ಲಿ ಪರಾಜಯ ಹೊಂದುವುದರೊಂದಿಗೆ ಅಲ್ಲೂ ತನ್ನ ಪಾರಮ್ಯ ಮೆರೆಯಲು ದಕ್ಷಿಣ ಆಫ್ರಿಕಾಕ್ಕೆ ಸಾಧ್ಯವಾಗಿರಲಿಲ್ಲ. ಆದರೆ ಇಲ್ಲೊಂದು ಅಪವಾದವೆಂದರೆ ಚಾಂಪಿಯನ್ಸ್ ಟ್ರೋಫಿ ಉದ್ಘಾಟನಾ ಆವೃತ್ತಿಯನ್ನು (ಆಗ ಚಾಂಪಿಯನ್ಸ್ ಟ್ರೋಫಿಯನ್ನು 'ಐಸಿಸಿ ನಾಕೌಟ್' ಎಂದು ಕರೆಯಲಾಗುತ್ತಿತ್ತು) ಹರಿಣಗಳು ಗೆದ್ದಿರುವುದು.

ಈ ಬಾರಿ ನಾವು 'ಚೋಕರ್ಸ್' ಆಗಲ್ಲ ಎಂದು ಗ್ರೇಮ್ ಸ್ಮಿತ್ ಪಡೆ ಆಗಾಗ ಹೇಳಿಕೊಂಡಿತ್ತು. ನಮ್ಮಲ್ಲಿ ಈ ಬಾರಿ ಎಲ್ಲಾ ವಿಭಾಗಗಳೂ ಪ್ರಬಲವಾಗಿಯೇ ಕಾರ್ಯನಿರ್ವಹಿಸುತ್ತಿವೆ. ಆತ್ಮವಿಶ್ವಾಸದಿಂದ ತುಂಬಿ ತುಳುಕುತ್ತಿದ್ದೇವೆ ಎಂದಿದ್ದರು. ಅದಕ್ಕೆ ಪುರಾವೆಯೆಂಬಂತೆ ಅವರು ಸೆಮಿಫೈನಲ್‌ವರೆಗೂ ಸೋಲೇ ಕಂಡಿಲ್ಲದಿರುವುದು. ಅಜೇಯ ತಂಡವಾಗಿ ಸೆಮಿ ತಲುಪಿದ್ದ ದಕ್ಷಿಣ ಆಫ್ರಿಕಾ ಈ ಸಲ ಚೊಚ್ಚಲ ಕಪ್ ಮುಡಿಗೇರಿಸಿಕೊಳ್ಳಲಿದೆಯೆಂದೇ ಕ್ರಿಕೆಟ್ ಜಗತ್ತು ಭಾವಿಸಿತ್ತು.

ಆದರೆ ಅದನ್ನು ಸುಳ್ಳು ಮಾಡಿದ್ದು ಬಹುತೇಕ ಪಾಕಿಸ್ತಾನದ ಶಾಹಿದ್ ಆಫ್ರಿದಿ. ಬ್ಯಾಟಿಂಗ್ ಹಾಗೂ ಬೌಲಿಂಗ್‌ಗಳೆರಡರಲ್ಲಿಯೂ ಮಿಂಚುವ ಮೂಲಕ ಹರಿಣಗಳಿಗವರು ಸಿಂಹಸ್ವಪ್ನರಾದರು. ದಕ್ಷಿಣ ಆಫ್ರಿಕಾ ಕಪ್ ಗೆಲ್ಲುವುದೆಂಬ ಆಶಯಗಳಿಗೆ ತಣ್ಣೀರೆರಚಿದರು. ತಾವು ದುರದೃಷ್ಟರು ಎಂಬುದನ್ನು ಮತ್ತೊಮ್ಮೆ ಒಪ್ಪಿಕೊಂಡ ಆಫ್ರಿಕನ್ನರು ಮರಳಿ ಯತ್ನವ ಮಾಡುವ ಶಪಥದೊಂದಿಗೆ ನಿರ್ಗಮಿಸಿದ್ದಾರೆ.

ದಕ್ಷಿಣ ಆಫ್ರಿಕಾ ಕ್ರಿಕೆಟ್‌ನ ಸಾಧನೆಯ 'ದುರಂತಾಂತ್ಯ' ಪಟ್ಟಿಯಿದು..

ಪ್ರಮುಖ ವಿಶ್ವಕಪ್: 1992- ಸೆಮಿಫೈನಲ್, 1996- ಕ್ವಾರ್ಟರ್ ಫೈನಲ್, 1999- ಸೆಮಿಫೈನಲ್, 2003- ಮೊದಲ ಸುತ್ತು, 2007- ಸೆಮಿಫೈನಲ್.

ಟ್ವೆಂಟಿ-20 ವಿಶ್ವಕಪ್: 2007- ಸೂಪರ್ ಎಂಟು, 2009- ಸೆಮಿಫೈನಲ್.

ಐಸಿಸಿ ಚಾಂಪಿಯನ್ಸ್ ಟ್ರೋಫಿ: 1998 - ಚಾಂಪಿಯನ್, 2000- ಸೆಮಿಫೈನಲ್, 2002- ಸೆಮಿಫೈನಲ್, 2004- ಮೊದಲ ಸುತ್ತು, 2006- ಸೆಮಿಫೈನಲ್.

Share this Story:

Follow Webdunia kannada