Select Your Language

Notifications

webdunia
webdunia
webdunia
webdunia

ಟ್ವೆಂಟಿ-20: ಧೋನಿ ಪಡೆಯನ್ನೇ ಹಿಂಬಾಲಿಸಿದ ಮಹಿಳೆಯರು

ಜೂಲನ್ ಗೋಸ್ವಾಮಿ
ಲಂಡನ್ , ಗುರುವಾರ, 18 ಜೂನ್ 2009 (20:37 IST)
ಮಹೇಂದ್ರ ಸಿಂಗ್ ಧೋನಿ ಪಡೆ ಟ್ವೆಂಟಿ-20 ವಿಶ್ವಕಪ್‌ನಲ್ಲನುಭವಿಸಿದ್ದ ಸೋಲಿನಿಂದುಂಟಾದ ನೋವನ್ನು ಜೂಲನ್ ಗೋಸ್ವಾಮಿ ಪಾಳಯ ಮರೆಸುವುದೆಂಬ ನಿರೀಕ್ಷೆಯೂ ಹುಸಿಯಾಗಿದೆ. ಭಾರತೀಯ ವನಿತೆಯರ ಪಡೆಯು ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್‌ ಎದುರು 52 ರನ್ನುಗಳ ಸೋಲುಣ್ಣುವ ಮೂಲಕ ತನ್ನ ಅಭಿಯಾನವನ್ನು ಕೊನೆಗೊಳಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ್ದ ನ್ಯೂಜಿಲೆಂಡ್ 146ರ ಗೆಲುವಿನ ಗುರಿಯನ್ನು ಭಾರತಕ್ಕೆ ನೀಡಿತ್ತು. ಬೆನ್ನು ಬಿದ್ದ ಭಾರತ ಒಂಬತ್ತು ವಿಕೆಟ್ ನಷ್ಟಕ್ಕೆ 93 ರನ್ ಗಳಿಸಿತು.

ಭಾರತವು ಎರಡನೇ ಓವರ್‌ನಲ್ಲೇ ಆರಂಭಿಕ ಆಟಗಾರ್ತಿ ಪೂನಮ್ ರಾವುತ್‌(5)ರನ್ನು ಕಳೆದುಕೊಂಡಿತ್ತು. ನಂತರ ಬೆನ್ನು ಬೆನ್ನಿಗೆ ಹೊರಟು ನಿಂತವರು ಮತ್ತೊಬ್ಬ ಆರಂಭಿಕ ಆಟಗಾರ್ತಿ ಅಂಜುಮ್ ಛೋಪ್ರಾ ಮತ್ತು ಹರ್ಮಾನ್‌ಪ್ರೀತ್ ಕೌರ್. ಅಂಜುಮ್ 15 ರನ್ ಗಳಿಸಿದ್ದರೆ, ಕೌರ್‌ ಖಾತೆಯನ್ನೇ ತೆರೆದಿರಲಿಲ್ಲ.

ಆದರೂ ಮಿಥಾಲಿ ರಾಜ್ ಕಣದಲ್ಲಿದ್ದಾರೆಂಬ ಭರವಸೆ ಭಾರತೀಯರಲ್ಲಿತ್ತು. ಆದರೆ ಸ್ವಲ್ಪವೇ ಹೊತ್ತಿನಲ್ಲಿ ರೀಮಾ ಮಲ್ಹೋತ್ರಾ ಕೂಡ ಹೊರಟು ನಿಲ್ಲುವುದರೊಂದಿಗೆ ಒಂಬತ್ತು ಓವರುಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡ ಭಾರತ 42 ರನ್‌ಗಳಷ್ಟೇ ಗಳಿಸಿತ್ತು.

ಅಷ್ಟಾಗುವಾಗ ಮಿಥಾಲಿ ರಾಜ್ ಕೂಡ ತನ್ನ ಹೋರಾಟವನ್ನು ಅಂತಿಮಗೊಳಿಸಿ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದರು. ಅವರು 22 ಎಸೆತಗಳಿಂದ 20 ರನ್ ಮಾಡಿದ್ದರು.

ಸುಲಕ್ಷಣಾ ನಾಯ್ಕ್ (2) ಬಂದಷ್ಟೇ ವೇಗದಲ್ಲಿ ಹೊರಟು ಹೋದರು. ಅಮಿತಾ ಶರ್ಮಾ ತಡೆಗೋಡೆಯಾಗುವ ಮೂಲಕ ಸೋಲಿನ ಅಂತರವನ್ನಾದರೂ ಕಡಿಮೆಗೊಳಿಸುವ ಭರವಸೆ ನೀಡಿದರಾದರೂ ಬಹಳ ಹೊತ್ತು ನಡೆಯಲಿಲ್ಲ. ಅವರು 27 ಎಸೆತಗಳಿಂದ 24 ರನ್ ಗಳಿಸಿದ್ದಾಗ ಸತ್ತರ್ತ್‌ವೈಟ್‌ಗೆ ಬಲಿಯಾದರು.

ನಂತರ ರುಮೇಲಿ ಧಾರ್ 4 ರನ್ ಗಳಿಸಿ ಔಟಾಗಿದ್ದರು. ಪ್ರಿಯಾಂಕಾ ರಾಯ್ ಮತ್ತು ಜೂಲನ್ ಗೋಸ್ವಾಮಿ ಕ್ರಮವಾಗಿ ಅಜೇಯ 9 ಮತ್ತು ಅಜೇಯ 2 ರನ್ ಗಳಿಸಿ ಅಂತಿಮ ಪರದೆಯೆಳೆದರು. ಒಟ್ಟಾರೆ ಭಾರತ 20 ಓವರುಗಳಲ್ಲಿ ಒಂಬತ್ತು ವಿಕೆಟ್ ಕಳೆದುಕೊಂಡು 93 ರನ್ ಗಳಿಸುವ ಮೂಲಕ 52 ಅಂತರದ ಸೋಲುಂಡು ಫೈನಲ್ ಆಸೆಯನ್ನು ಮಣ್ಣುಪಾಲು ಮಾಡಿಕೊಂಡಿತು.

ನ್ಯೂಜಿಲೆಂಡ್ ಪರ ಸಿಯಾನ್ ರಕ್ ಮತ್ತು ಅಮಿ ಸತ್ತರ್ತ್‌ವೈಟ್ ಎರಡೆರಡು ಹಾಗೂ ಸೂಜಿ ಬೇಟ್ಸ್, ಸೋಫಿ ಡೆವೈನ್, ಕೇಟ್ ಪುಲ್ಫೋರ್ಡ್ ತಲಾ ಒಂದೊಂದು ವಿಕೆಟ್ ಕಿತ್ತಿದ್ದರು.

ಇದಕೂ ಮೊದಲು ನ್ಯೂಜಿಲೆಂಡ್ ಬ್ಯಾಟಿಂಗ್ ಮಾಡಿತ್ತು. ನಾಯಕಿ ಅಯ್ಮೀ ವಾಟ್ಕಿನ್ಸ್ ಅಮೋಘ ಪ್ರದರ್ಶನದ ಮೂಲಕ ತಂಡವನ್ನು ಬೃಹತ್ ಮೊತ್ತದತ್ತ ಸಾಗಿಸಿದ್ದರು. ಅವರು ಕೇವಲ 58 ಎಸೆತಗಳನ್ನಷ್ಟೇ ಎದುರಿಸಿ ಅಜೇಯ 89 ರನ್ನುಗಳ ಮೂಲಕ ಭಾರತೀಯ ವನಿತೆಯರ ಬೌಲಿಂಗ್ ಪುಡಿಗಟ್ಟಿದ್ದರು.

ಏಕಾಂಗಿಯಾಗಿ ಹೋರಾಡಿದ ವಾಟ್ಕಿನ್ಸ್ 10 ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳನ್ನು ಚಚ್ಚುವ ಮೂಲಕ ಮೈದಾನದಲ್ಲೆಲ್ಲಾ ಬೌಲರುಗಳು ಹರಿದಾಡುವಂತೆ ಮಾಡಿದ್ದರು. ಅವರು ಕೇವಲ 35 ಎಸೆತಗಳಿಂದ ಅರ್ಧಶತಕ ದಾಖಲಿಸಿ ತಂಡಕ್ಕೆ ಆಸರೆಯಾದರು.

ಬಹು ನಿರೀಕ್ಷೆಯಿಂದ ಕಣಕ್ಕಿಳಿದಿದ್ದ ಅಪಾಯಕಾರಿ ಬ್ಯಾಟ್ಸ್ ವುಮನ್‌ಗಳಾದ ಲೂಸಿ ದೂಲನ್ (3) ಮತ್ತು ಸೂಜಿ ಬೇಟ್ಸ್ (10)ರನ್ನು ಕ್ರಮವಾಗಿ ರುಮೇಲಿ ಧಾರ್ ಮತ್ತು ಅಮಿತಾ ಶರ್ಮಾ ಬಲಿ ಪಡೆಯುವ ಮೂಲಕ ಭಾರತೀಯ ಪಾಳಯದಲ್ಲಿ ಮಿಂಚು ಹರಿಸಿದ್ದರು.

ಮಧ್ಯಮ ಕ್ರಮಾಂಕವೂ ಹೆಚ್ಚು ಸಹಕಾರಿಯೆನಿಸಲಿಲ್ಲ. ಅಮಿ ಸತ್ತರ್ತ್‌ವೈಟ್ (10) ಮಿಥಾಲಿ ರಾಜ್‌ರಿಂದ ರನ್ನೌಟ್‌ಗೊಳಗಾದರೆ ನಿಕೋಲಾ ಬ್ರೌನೆ (5)ಯವರು ಪ್ರಿಯಾಂಕ ರಾಯ್‌ಗೆ ವಿಕೆಟ್ ಒಪ್ಪಿಸಿದರು. ಸಾರಾ ಮೆಕ್‌ಗ್ಲಾಸನ್ (4) ಕೂಡ ಅಮಿತಾ ಶರ್ಮಾರಿಗೆ ಎರಡನೇ ಬಲಿ.

ಒಂದು ಸಿಕ್ಸರ್ ಜತೆ 14 ರನ್ ದಾಖಲಿಸಿದ ಸೋಫಿ ಡೆವೈನ್ ಅಜೇಯರಾಗುಳಿದರು. ಒಟ್ಟಾರೆ ನ್ಯೂಜಿಲೆಂಡ್ 20 ಓವರುಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 145 ರನ್ ಪೇರಿಸಿತ್ತು.

ಭಾರತದ ಪರ ಅಮಿತಾ ಶರ್ಮಾ 21ಕ್ಕೆ ಎರಡು ವಿಕೆಟ್ ಕಬಳಿಸಿದ್ದರೆ ರುಮೇಲಿ ಧಾರ್ ಮತ್ತು ಪ್ರಿಯಾಂಕಾ ರಾಯ್ ತಲಾ ಒಂದೊಂದು ವಿಕೆಟ್ ಪಡೆದಿದ್ದರು.

Share this Story:

Follow Webdunia kannada