ಸತತ ಜಯಗಳ ಮೂಲಕ ಅಜೇಯ ತಂಡವಾಗಿ ಸೂಪರ್ ಎಂಟರಿಂದ ಹೊರಟಿರುವ ದಕ್ಷಿಣ ಆಫ್ರಿಕಾವು ಟ್ವೆಂಟಿ-20 ವಿಶ್ವಕಪ್ ಮೊದಲ ಸೆಮಿಫೈನಲ್‌ನಲ್ಲಿ ಪಾಕಿಸ್ತಾನವನ್ನೆದುರಿಸಲಿದೆ.
ಟೂರ್ನಮೆಂಟ್‌ವುದ್ದಕ್ಕೂ ಸೋಲೇ ಕಾಣದ ದಕ್ಷಿಣ ಆಫ್ರಿಕಾದಿಂದ ಆಲ್-ರೌಂಡ್ ಪ್ರದರ್ಶನ ಶ್ರೇಷ್ಠವಾಗಿಯೇ ಬಂದಿದೆ. ಸೂಪರ್ ಎಂಟರಲ್ಲೂ ವೆಸ್ಟ್‌ಇಂಡೀಸ್, ಇಂಗ್ಲೆಂಡ್ ಮತ್ತು ಹಾಲಿ ಚಾಂಪಿಯನ್ ಭಾರತದ ವಿರುದ್ಧ ಅವರು ಪಾರಮ್ಯ ಮೆರೆದಿದ್ದರು. ಹಾಗಾಗಿ ಇಂದಿನ ಪಂದ್ಯದಲ್ಲೂ ಗೆಲ್ಲುವ ನೆಚ್ಚಿನ ತಂಡವೆಂದು ಗುರುತಿಸಲಾಗುತ್ತಿದೆ.
ಸೂಪರ್ ಎಂಟರ ಕೊನೆಯ ಪಂದ್ಯದಲ್ಲಿ ಭಾರತವು ಹರಿಣಗಳನ್ನು 130ಕ್ಕೆ ನಿಯಂತ್ರಿಸಿದರೂ ಸಹ ಗೆಲ್ಲಲು ಸಾಧ್ಯವಾಗದೇ ಇರುವುದು ದಕ್ಷಿಣ ಆಫ್ರಿಕಾ ಸಾಮರ್ಥ್ಯಕ್ಕೆ ದೊರೆಯುವ ಮತ್ತೊಂದು ಸಾಕ್ಷಿ. ಈ ಪಂದ್ಯದಲ್ಲಿ ಭಾರತ 118 ರನ್ ಗಳಿಸಲಷ್ಟೇ ಶಕ್ತವಾಗಿತ್ತು.
ಆದರೂ ಇದುವರೆಗೆ ಯಾವುದೇ ವಿಶ್ವಕಪ್ ಗೆಲ್ಲದ ದಕ್ಷಿಣ ಆಫ್ರಿಕಾ ಲೀಗ್ ಹಂತಗಳಲ್ಲಿ ಮೆರೆದಾಡಿದರೂ ನಂತರ ಎಡವಿ ಬೀಳುವುದು ಸಾಮಾನ್ಯವಾಗಿರುವ ಕಾರಣ ಫಲಿತಾಂಶ ತಿರುವು ಮುರುವಾಗುವ ಸಾಧ್ಯತೆಯೂ ಇದೆ. ಹಾಗೊಂದು ವೇಳೆ ಹರಿಣಗಳು ಗೆದ್ದಲ್ಲಿ ಮೊದಲ ಬಾರಿ ಫೈನಲ್ ತಲುಪಿದಂತಾಗುತ್ತದೆ.
ಅತ್ತ ಎದುರಾಳಿ ಪಾಕಿಸ್ತಾನವು ಆರಂಭದಲ್ಲಿ ಸಪ್ಪೆಯೆನಿಸಿದ್ದರೂ ನಂತರ ಪುಟಿದೆದ್ದು ಗೆಲುವಿನ ಪ್ರದರ್ಶನಗಳನ್ನು ನೀಡುತ್ತಿದೆ. ಸಾಕಷ್ಟು ವಿವಾದಗಳಿಂದ ಮುಳುಗೇಳುತ್ತಿರುವ ತಂಡವೆಂಬ ಕುಖ್ಯಾತಿ ಪಡೆದರೂ ಸಹ ಇತ್ತೀಚೆಗಷ್ಟೇ ತಂಡಕ್ಕೆ ಮರು ಸೇರ್ಪಡೆಗೊಂಡಿರುವ ಅಬ್ದುಲ್ ರಜಾಕ್, ಉಮರ್ ಗುಲ್, ಮಿಸ್ಬಾ ಉಲ್ ಹಕ್ ಮುಂತಾದವರು ಗೆಲುವಿನ ದಡ ಹತ್ತಿಸಬಲ್ಲ ಸಾಮರ್ಥ್ಯವುಳ್ಳವರು.
ಜತೆಗೆ ಯೂನಿಸ್ ಖಾನ್, ಶೋಯಿಬ್ ಮಲಿಕ್, ಸೋಹೈಲ್ ತನ್ವೀರ್, ಶಾಹಿದ್ ಆಫ್ರಿದಿ ಮುಂತಾದ ಯಾವುದೇ ಕ್ಷಣದಲ್ಲಿ ಅಪಾಯಕಾರಿಯಾಗಬಲ್ಲ ಆಟಗಾರರಿದ್ದಾರೆ. ಹಾಗಾಗಿ ದಕ್ಷಿಣ ಆಫ್ರಿಕಾ ಯಾರನ್ನೂ ಹಗುರವಾಗಿ ಪರಿಗಣಿಸಿಲ್ಲ.
ಹಾಗಂತ ದಕ್ಷಿಣ ಆಫ್ರಿಕಾವೇನೂ ಕ್ಷುಲ್ಲಕ ಆಟಗಾರರೊಂದಿಗೆ ಇಲ್ಲಿಯವರೆಗೆ ತಲುಪಿಲ್ಲ. ಗ್ರೇಮ್ ಸ್ಮಿತ್ ಪಾಳಯದಲ್ಲಿ ಘಟಾನುಘಟಿಗಳೇ ಕಾಣಿಸುತ್ತಿದ್ದಾರೆ. ಜಾಕ್ವಾಸ್ ಕ್ಯಾಲಿಸ್, ಹರ್ಷೆಲ್ ಗಿಬ್ಸ್, ಅಬ್ರಹಾಂ ಡೇ ವಿಲ್ಲರ್ಸ್, ಜೋಹಾನ್ ಬೋಥಾ, ಆಲ್ಬೀ ಮೋರ್ಕೆಲ್, ವಾನ್ ಡೆರ್ ಮೆರ್ವೆ, ವಾಯ್ನೆ ಪಾರ್ನೆಲ್, ಡೇಲ್ ಸ್ಟೈನ್ ಹೆಸರುಗಳು ಈ ಹಿಂದೆ ದಕ್ಷಿಣ ಆಫ್ರಿಕಾಕ್ಕೆ ಒಂದಲ್ಲ ಒಂದು ಬಾರಿ ಗೆಲುವಿಗೆ ಕಾರಣವಾದುವು.
ಒಟ್ಟಾರೆ ತಂಡಗಳ ಸಾಮರ್ಥ್ಯವನ್ನು ಗಮನಿಸಿದಾಗ ದಕ್ಷಿಣ ಆಫ್ರಿಕಾವೇ ಗೆಲ್ಲುವ ಫೇವರಿಟ್.