Select Your Language

Notifications

webdunia
webdunia
webdunia
webdunia

ಶಾಹಿದ್ ಆಫ್ರಿದಿ ಈಗ ಪಾಕಿಸ್ತಾನದ ಅಮೂಲ್ಯ ಆಸ್ತಿ

ಶಾಹಿದ್ ಆಫ್ರಿದಿ
ನಾಟಿಂಗ್‌ಹ್ಯಾಮ್ , ಶುಕ್ರವಾರ, 19 ಜೂನ್ 2009 (12:48 IST)
ತನ್ನ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನ ಮುಗಿದೇ ಹೋಯಿತೆಂದುಕೊಂಡಿದ್ದ ಶಾಹಿದ್ ಆಫ್ರಿದಿ ಇದೀಗ ಪಾಕಿಸ್ತಾನ ತಂಡದ ಅಮೂಲ್ಯ ಆಸ್ತಿ. ಅವರ ಆಲ್-ರೌಂಡ್ ಪ್ರದರ್ಶನದ ನೆರವಿನಿಂದ ಪಾಕಿಸ್ತಾನ ಟ್ವೆಂಟಿ-20 ವಿಶ್ವಕಪ್ ಫೈನಲ್‌ಗೇರಲು ಈ ಬಾರಿಯೂ ಸಾಧ್ಯವಾಗಿದ್ದು, ಕ್ರಿಕೆಟ್ ಜಗತ್ತಿನಲ್ಲಿ ಮತ್ತೆ ಹುಚ್ಚೆಬ್ಬಿಸಿದ್ದಾರೆ.

ನಿನ್ನೆ ದಕ್ಷಿಣ ಆಫ್ರಿಕಾ ವಿರುದ್ಧ ಏಳು ವಿಕೆಟ್‌ಗಳ ಅಂತರದಿಂದ ಜಯ ಸಾಧಿಸಿದ ಪಾಕಿಸ್ತಾನಕ್ಕೆ ಪ್ರಮುಖ ಆಟ ನೀಡಿ ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಗೆದ್ದವರು ಶಾಹಿದ್ ಆಫ್ರಿದಿ. 51 ರನ್ ಸಿಡಿಸಿದ್ದಲ್ಲದೆ 16ಕ್ಕೆರಡು ಪ್ರಮುಖ ವಿಕೆಟ್‌ಗಳನ್ನೂ ಕಿತ್ತಿದ್ದರು. ಇದೇ ಕಾರಣದಿಂದ ಪಾಕಿಸ್ತಾನ ರೋಚಕ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿದೆ.
PTI

ಪಾಕಿಸ್ತಾನವು ಮೂರೇ ಓವರಿನಲ್ಲಿ 28ಕ್ಕೆ ಎರಡು ವಿಕೆಟ್ ಕಳೆದುಕೊಂಡಿದ್ದಾಗ ಅನಾಥರಕ್ಷಕನಾಗಿ ಬಂದಿದ್ದ ಆಫ್ರಿದಿ ಪಂದ್ಯದ ಗತಿಯನ್ನೇ ಬದಲಾಯಿಸಿದ್ದರು. ಆ ಮೂಲಕ ತನ್ನನ್ನು ವಿಶ್ವಕಪ್‌ಗೆ ಕಳುಹಿಸಿದ್ದ ಆಯ್ಕೆಗಾರರಿಗೆ ಅವರು ನ್ಯಾಯವೊದಗಿಸಿದ್ದಲ್ಲದೆ, ಅಭಿಮಾನಿಗಳ ಹೃದಯದಲ್ಲಿ ಭದ್ರವಾಗಿ ನೆಲೆಯೂರಿದ್ದಾರೆ.

ಕಳೆದ ಪಂದ್ಯವೂ ಆಫ್ರಿದಿಗೆ ಮತ್ತಷ್ಟು ವಿಶೇಷವಾಗಿ ಮೂಡಿ ಬಂದಿದೆ. ಅವರು ನಿನ್ನೆ ಗಳಿಸಿದ ಅರ್ಧಶತಕ ಕ್ರಿಕೆಟಿನ ಯಾವುದೇ ಪ್ರಕಾರದಲ್ಲಿ 18 ತಿಂಗಳ ನಂತರದ್ದು. ಮಧ್ಯಮ ಕ್ರಮಾಂಕವನ್ನು ಎತ್ತಿ ನಿಲ್ಲಿಸಿದರೂ ಬಹು ಹೊತ್ತು ಕ್ರೀಸಿನಲ್ಲಿ ಅವರಿಗೆ ನಿಲ್ಲಲಾಗದ್ದು ಮಾತ್ರ ಓಟಕ್ಕೆ ತಡೆಯಾಯಿತು.

ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಕೇವಲ 37 ಎಸೆತಗಳಿಂದ ಅಫ್ರಿದಿ ಶತಕ ಮಾಡಿದ ದಾಖಲೆಯನ್ನು ಇನ್ನೂ ಯಾರಿಗೂ ಅಳಿಸಲಾಗಿಲ್ಲ. ಟ್ವೆಂಟಿ-20 ವಿಶ್ವಕಪ್ ಉದ್ಘಾಟನಾ ಆವೃತ್ತಿಯಲ್ಲೂ ಅವರು ಅತೀ ಹೆಚ್ಚಿನ ಮೌಲ್ಯಯುತ ಆಟಗಾರ ಎಂಬ ಗರಿಮೆಯನ್ನು ಪಡೆದವರು. 18 ಎಸೆತಗಳಿಂದ ಅರ್ಧಶತಕ ಮಾಡಿದ ದಾಖಲೆ ಅತಿ ವೇಗದ್ದು ಎಂಬುದಕ್ಕಿಂತ ಕೇವಲ ಒಂದು ಎಸೆತವಷ್ಟೇ ಮುಂದಿದೆ. ಆಡಿರುವ 276 ಏಕದಿನ ಪಂದ್ಯಗಳಿಂದ 249 ಸಿಕ್ಸರುಗಳನ್ನು ಎತ್ತಿದ ಕೀರ್ತಿಯೂ ಅವರಿಗಿದೆ.

ಒಂದೇ ಒಂದು ಸಿಕ್ಸ್ ಬಾರಿಸದೆ ಆಫ್ರಿದಿ ದಾಖಲಿಸಿದ ಮೊದಲ ಅರ್ಧಶತಕವೆಂಬ ದಾಖಲೆಯೂ ಕಳೆದ ಪಂದ್ಯದಲ್ಲಿ ನಿರ್ಮಾಣವಾಯಿತು. 34 ಎಸೆತಗಳನ್ನೆದುರಿಸಿದ್ದ ಅವರು ಎಂಟು ಬೌಂಡರಿಗಳನ್ನಷ್ಟೇ ಎತ್ತಿದ್ದರು.

ಅದ್ಭುತ ಬ್ಯಾಟಿಂಗ್ ಮತ್ತು ಬೌಲಿಂಗ್ ಮೂಲಕ ಇದೀಗ ಮತ್ತೆ ಜೀವ ಪಡೆದುಕೊಂಡಿರುವ ಆಫ್ರಿದಿಯನ್ನು ಇನ್ನು ತಡೆಯುವುದು ಕಷ್ಟ ಎಂಬುದು ಕ್ರಿಕೆಟ್ ಪಂಡಿತರ ಅಭಿಪ್ರಾಯ. ಕಳೆದ ಬಾರಿಯ ಟ್ವೆಂಟಿ-20 ವಿಶ್ವಕಪ್‌ನಲ್ಲೂ ಫೈನಲ್ ಪ್ರವೇಶಿಸಿದ್ದ ಪಾಕಿಸ್ತಾನ ಈ ಸಲ ಕಪ್ ಗೆಲ್ಲುವ ವಿಶ್ವಾಸವನ್ನು ಹೊಂದಿದೆ. ಅದಕ್ಕೆ ಅಫ್ರಿದಿ ತಕ್ಕ ಸಾಥ್ ನೀಡಬಹುದೆಂದು ಅಂದಾಜಿಸಲಾಗಿದೆ.

Share this Story:

Follow Webdunia kannada