Select Your Language

Notifications

webdunia
webdunia
webdunia
webdunia

ಪಾಕಿಸ್ತಾನಕ್ಕೆ ರಜಾಕ್ ಪ್ರಮುಖ ಅಸ್ತ್ರ: ಇಜಾಜ್ ಅಹ್ಮದ್

ಇಜಾಜ್ ಅಹ್ಮದ್
ಕರಾಚಿ , ಗುರುವಾರ, 18 ಜೂನ್ 2009 (14:47 IST)
ಪ್ರಸಕ್ತ ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡ ಅಮೋಘ ಪ್ರದರ್ಶನದ ಮೂಲಕ ಸೆಮಿಫೈನಲ್ ತಲುಪಲು ಇತ್ತೀಚೆಗಷ್ಟೇ ರಾಷ್ಟ್ರೀಯ ತಂಡಕ್ಕೆ ಮತ್ತೆ ಸೇರಿಕೊಂಡಿದ್ದ ಆಲ್-ರೌಂಡರ್ ಅಬ್ದುಲ್ ರಜಾಕ್ ಕೂಡ ಕಾರಣರು ಎಂದು ಮಾಜಿ ಟೆಸ್ಟ್ ಆಟಗಾರ ಇಜಾಜ್ ಅಹ್ಮದ್ ಅಭಿಪ್ರಾಯಪಟ್ಟಿದ್ದಾರೆ.

ಬಂಡಾಯ ಇಂಡಿಯನ್ ಕ್ರಿಕೆಟ್ ಲೀಗ್ ಜತೆ ಸೇರಿಕೊಂಡಿದ್ದ ರಜಾಕ್ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡವನ್ನು ಮೊತ್ತ ಮೊದಲ ಬಾರಿಗೆ ಪ್ರತಿನಿಧಿಸಿದ್ದರು.

"ಪಾಕಿಸ್ತಾನವು ಸವಾಲನ್ನು ಸಮರ್ಥವಾಗಿ ಎದುರಿಸಲು ಅಗತ್ಯವಿದ್ದ ವೇಗವರ್ಧಕವಾಗಿ ರಜಾಕ್ ಪರಿಣಮಿಸಿದ್ದಾರೆ. ಅವರು ಪಂದ್ಯದ ಗತಿಯನ್ನೇ ಬದಲಿಸುವ ಶಕ್ತಿಯುಳ್ಳವರು. ಅವರು ಎದುರಾಳಿಗಳ ಯೋಜನೆಯನ್ನು ವಿಫಲಗೊಳಿಸಲಿದ್ದಾರೆ" ಎಂದು ಇಜಾಜ್ ತಿಳಿಸಿದ್ದಾರೆ.

ಇಜಾಜ್‌ರವರು ಫೀಲ್ಡಿಂಗ್ ಕೋಚ್ ಆಗಿ ಪ್ರಸಕ್ತ ನಡೆಯುತ್ತಿರುವ ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡವನ್ನು ಪ್ರತಿನಿಧಿಸಬೇಕಿತ್ತು. ಆದರೆ ವಂಚನೆ ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ ಅವರು ಸುಮಾರು ಎಂಟು ವಾರಗಳ ಕಾಲ ಬಂಧನದಲ್ಲಿದ್ದರು.

"ಟ್ವೆಂಟಿ-20 ವಿಶ್ವಕಪ್ ನನ್ನ ಸ್ಫೂರ್ತಿಯನ್ನು ಮತ್ತಷ್ಟು ಹೆಚ್ಚಿಸಿದೆ. ಅಲ್ಲದೆ ಪ್ರಶಸ್ತಿ ಗೆದ್ದುಕೊಳ್ಳುವ ಬಗ್ಗೆ ನನಗೆ ಸಂಪೂರ್ಣ ಭರವಸೆಯಿದೆ. ಸಾಮಾನ್ಯವಾಗಿ ದೊಡ್ಡ ಟೂರ್ನಮೆಂಟ್‌ಗಳಲ್ಲಿ ತಂಡ ತನ್ನ ಆರಂಭವನ್ನು ನಿಧಾನಕ್ಕೆ ಆರಂಭಿಸಿದರೂ ನಂತರ ಪುಟಿದೆದ್ದು ಕಪ್ ಗೆದ್ದುಕೊಳ್ಳುವುದು" ಎಂದಿದ್ದಾರೆ.

ಸೆಮಿಫೈನಲ್ ತಲುಪಿರುವ ಪಾಕಿಸ್ತಾನವು ಇಂದು ದಕ್ಷಿಣ ಆಫ್ರಿಕಾ ವಿರುದ್ಧ ಹೋರಾಡಲಿದೆ. ಹರಿಣಗಳನ್ನು ಮಣಿಸಿದಲ್ಲಿ ಪಾಕ್ ಫೈನಲ್ ತಲುಪಲಿದೆ.

ಟ್ವೆಂಟಿ-20 ಕ್ರಿಕೆಟ್ ಪ್ರಕಾರವು ಜನಪ್ರಿಯತೆ ಕಂಡುಕೊಳ್ಳಲು ಪ್ರಮುಖ ಕಾರಣ ಅದರ ವೇಗ ಮತ್ತು ಆಕ್ರಮಣಕಾರಿ ಪ್ರವೃತ್ತಿ ಎಂದು ತನ್ನ ದಿನಗಳಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡುತ್ತಿದ್ದ ಇಜಾಜ್ ತನ್ನ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

"ಸಾಮಾನ್ಯವಾಗಿ ಇಲ್ಲಿ ಕೊನೆಯ ಕ್ಷಣದವರೆಗೂ ಯಾರು ಪಂದ್ಯವನ್ನು ಗೆಲ್ಲುತ್ತಾರೆ ಎಂದು ತಿಳಿಯುವುದು ಕಷ್ಟ. ಅಲ್ಲದೆ ದುರ್ಬಲ ತಂಡಗಳೂ ಪ್ರಬಲ ಎದುರಾಳಿಗಳನ್ನು ಮಣಿಸುವ ಅವಕಾಶ ಹೊಂದಿರುತ್ತವೆ. ಇಂತಹ ವಿಚಾರಗಳಿಂದಾಗಿಯೇ ಟ್ವೆಂಟಿ-20 ಕುತೂಹಲಕಾರಿ ಆಟದ ಪ್ರಕಾರ. ವೈಯಕ್ತಿಕವಾಗಿ ನನಗೆ ಈ ಪ್ರಕಾರ ಇಷ್ಟ" ಎಂದರು.

Share this Story:

Follow Webdunia kannada