Select Your Language

Notifications

webdunia
webdunia
webdunia
webdunia

ಅಭಿಮಾನಿಗಳು ಆಟಗಾರರನ್ನು ಹುರಿದುಂಬಿಸಬೇಕು: ಗಂಗೂಲಿ

ಅಭಿಮಾನಿಗಳು ಆಟಗಾರರನ್ನು ಹುರಿದುಂಬಿಸಬೇಕು: ಗಂಗೂಲಿ
ನವದೆಹಲಿ , ಶನಿವಾರ, 20 ಜೂನ್ 2009 (17:36 IST)
ಟ್ವೆಂಟಿ-20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಪರಾಜಯಗೊಂಡಿರುವುದಕ್ಕೆ ಬಳಲಿಕೆ ಒಂದು ಕಾರಣವೇ ಅಲ್ಲ ಎಂದಿರುವ ಮಾಜಿ ನಾಯಕ ಸೌರವ್ ಗಂಗೂಲಿ, ಅಭಿಮಾನಿಗಳು ಟೀಕೆ ಮಾಡುವ ಬದಲು ಆಟಗಾರರನ್ನು ಬೆಂಬಲಿಸಬೇಕು ಎಂದು ಒತ್ತಾಯಿಸಿದ್ದಾರೆ.

ಬಳಲಿಕೆ ಇದಕ್ಕೆ ಕಾರಣವಾಗಿದೆ ಎಂದು ನನಗನ್ನಿಸುತ್ತಿಲ್ಲ ಎಂದಿರುವ ಅವರು, "ನನ್ನ ಪ್ರಕಾರ ಟೀಮ್ ಇಂಡಿಯಾದ ನಮ್ಮ ಹುಡುಗರನ್ನು ನಾವೆಲ್ಲರೂ ಬೆಂಬಲಿಸಬೇಕಾಗಿದೆ. ಅವರು ಒಂದೂವರೆ ವರ್ಷಗಳಲ್ಲಿ ಅದ್ಬುತವಾಗಿ ಆಡಿದವರು. ಕೇವಲ ಒಂದು ಟೂರ್ನಮೆಂಟ್‌ನಲ್ಲಿ ಮಾತ್ರ ಉತ್ತಮ ಪ್ರದರ್ಶನ ತೋರಿಸಲು ಸಾಧ್ಯವಾಗಿಲ್ಲ. ಆ ತಂಡದಲ್ಲಿ ಸಾಕಷ್ಟು ಪ್ರತಿಭೆ ಮತ್ತು ಸಾಮರ್ಥ್ಯವಿರುವುದರಿಂದ ಮುಂದಿನ ದಿನಗಳಲ್ಲಿ ಖಂಡಿತಾ ಉತ್ತಮ ಫಲಿತಾಂಶವನ್ನು ಮರುಕಳಿಸಲಿದ್ದಾರೆ. ಇದೊಂದು ಕೆಟ್ಟ ದಿನ ಮಾತ್ರ" ಎಂದರು.
PTI

ಹಾಗಾದರೆ ಪ್ರತಿಯೊಂದು ತಂಡವೂ ಒಳ್ಳೆಯ ಮತ್ತು ಕೆಟ್ಟ ಸಮಯಗಳನ್ನು ಎದುರಿಸುತ್ತದೆಯೇ ಎಂಬ ಪ್ರಶ್ನೆಗೆ, "ಇರಬಹುದು, ಅದೆಲ್ಲಾ ಸಾಮಾನ್ಯ. ಖಂಡಿತಾ ಅವರು ಅದರಿಂದ ಹೊರಗೆ ಬರಲಿದ್ದಾರೆ. ಮುಂದಿನ ದಿನಗಳಲ್ಲಿ ಶ್ರೇಷ್ಠ ಪ್ರದರ್ಶನ ಅವರಿಂದ ನಿರೀಕ್ಷಿಸಬಹುದಾಗಿದೆ" ಎಂದು ಒಂದು ಕಾಲದ ಟೀಮ್ ಇಂಡಿಯಾ ಯಶಸ್ವಿ ಕಪ್ತಾನ ತನ್ನ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

ಭಾರತ ತಂಡಕ್ಕೆ ಸ್ಫೋಟಕ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್‌ರ ಅಗತ್ಯ ಹೆಚ್ಚಿತ್ತು ಎಂದಿರುವ ದಾದಾ, ಅವರು ಶೀಘ್ರದಲ್ಲೇ ಭುಜ ನೋವಿನ ಗಾಯದಿಂದ ಸುಧಾರಿಸಿಕೊಳ್ಳಬೇಕಿದೆ ಎಂದಿದ್ದಾರೆ.

"ಗಾಯಗಳು ಕ್ರೀಡೆಯ ಭಾಗ ಮತ್ತು ಪ್ರಕ್ರಿಯೆ. ಸಾಕಷ್ಟು ಕ್ರಿಕೆಟ್ ಆಡುವ ಕಾರಣದಿಂದ ಹೀಗಾಗುವುದು ಸಾಮಾನ್ಯ. ಭಾರತಕ್ಕೆ ಅವರು ಅಮೂಲ್ಯವಾಗಿರುವ ಕಾರಣ ಅವರು ಶೀಘ್ರದಲ್ಲೇ ಗುಣಮುಖರಾಗುವ ಭರವಸೆಯಿದೆ" ಎಂದು ಟೀವಿ ವಾಹಿನಿಯೊಂದರ ಜತೆ ಮಾತನಾಡುತ್ತಾ ತಿಳಿಸಿದರು.

ಕ್ರಿಕೆಟ್ ಆಟಗಾರನಾಗಿದ್ದ ಗಂಗೂಲಿ ಈಗ ವೀಕ್ಷಕ ವಿವರಣೆಗಾರ. ಭಾನುವಾರ ರಾತ್ರಿ ನಡೆಯಲಿರುವ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಮುಖಾಮುಖಿಯಾಗಲಿರುವ ಶ್ರೀಲಂಕಾ ಮತ್ತು ಪಾಕಿಸ್ತಾನದಲ್ಲಿ ಅವರ ಬೆಂಬಲ ದ್ವೀಪರಾಷ್ಟ್ರಕ್ಕೆ.

"ಶ್ರೀಲಂಕಾ ಮತ್ತು ಪಾಕಿಸ್ತಾನಗಳಲ್ಲಿ ನನ್ನ ಬೆಂಬಲ ಲಂಕಾಕ್ಕೆ. ಆದರೆ ಯಾರು ಕೂಡಾ ಗೆಲ್ಲಬಹುದಾಗಿದೆ. ಇಲ್ಲಿ ಯಾವ ತಂಡ ಗೆಲ್ಲಬಹುದು ಎಂದು ಹೇಳುವುದು ಸಾಧ್ಯವಾಗದ ಮಾತು" ಎಂದರು.

Share this Story:

Follow Webdunia kannada