ಬೇಕಾಗುವ ಸಾಮಗ್ರಿ: 500 ಗ್ರಾಂ ಸೂಜಿ, 300 ಗ್ರಾಂ ಸಕ್ಕರೆ, 500 ಎಂಎಲ್ ಹಾಲು, ಆರು ಚಮಚ ತುಪ್ಪ, ಮುಕ್ಕಾಲು ಕಪ್ ಗೋಡಂಬಿ ಹಾಗೂ ಒಣದ್ರಾಕ್ಷಿ.
ಮಾಡುವ ವಿಧಾನ: ದೊಡ್ಡ ಪಾತ್ರೆಯಲ್ಲಿ ಹದ ಉರಿಯಲ್ಲಿ ತುಪ್ಪ ಬಿಸಿ ಮಾಡಿ ಗೋಡಂಬಿ ಹಾಗೂ ಒಣದ್ರಾಕ್ಷಿಯನ್ನು ಹುರಿಯಿರಿ. ಹೊಂಬಣ್ಣ ಬಂದ ತಕ್ಷಣ ಗೋಡಂಬಿ ಹಾಗೂ ಒಣದ್ರಾಕ್ಷಿಯನ್ನು ಹೊರತೆಗೆಯಿರಿ. ಅದೇ ತುಪ್ಪದಲ್ಲಿ ಸೂಜಿ ಹಾಕಿ ಪರಿಮಳ ಬರುವವೆರೆಗೆ ಕೆಲ ನಿಮಿಷ ಹುರಿಯಿರಿ. ಇದಕ್ಕೆ ಸಕ್ಕರೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಸ್ವಲ್ಪ ಸ್ವಲ್ಪವೇ ಹಾಲು ಹಾಕುತ್ತಾ ತಿರುವುತ್ತಾ ಬನ್ನಿ. ಮಿಶ್ರಣ ದಪ್ಪಗಾಗುತ್ತಾ ಬಂದ ಮೇಲೆ ಹುರಿದ ಗೋಡಂಬಿ, ಒಣದ್ರಾಕ್ಷಿ ಸೇರಿಸಿ. ಚೆನ್ನಾಗಿ ತಿರುವಿ ಒಲೆಯಿಂದ ಕೆಳಗಿಳಿಸಿ. ನಂತರ ಲಿಂಬೆಗಾತ್ರದ ಸಣ್ಣ ಉಂಡೆಗಳನ್ನಾಗಿ ಮಾಡಿ ಅವುಗಳನ್ನು ಮೆತ್ತಗೆ ಒತ್ತಿ. ಇದನ್ನು 30 ನಿಮಿಷಗಳವರೆಗೆ ಹಾಗೇ ಬಿಡಿ. ನಂತರ ತಿನ್ನಲು ಕೊಡಿ.