ಬೇಕಾಗುವ ಸಾಮಗ್ರಿ- ಅನನಾಸ್ ಹಣ್ಣಿನ ಚಿಕ್ಕ ಚಿಕ್ಕ ಹೋಳುಗಳು- ಕಾಲು ಬಟ್ಟಲು, ಕಾಯಿತುರಿ- ಅರ್ಧ ಬಟ್ಟಲು, ಬೆಲ್ಲ 1 ಬಟ್ಟಲು, ಇಡ್ಲಿ ರವೆ 1 ಬಟ್ಟಲು, ಚಿಟಿಕೆ ಉಪ್ಪು, ಚಿಟಿಕೆ ಏಲಕ್ಕಿ ಪುಡಿ, ತುಪ್ಪದಲ್ಲಿ ಹುರಿದ ಗೋಡಂಬಿ ಸ್ವಲ್ಪ.
ಮಾಡುವ ವಿಧಾನ- ರವೆಯನ್ನು ಚೆನ್ನಾಗಿ ತೊಳೆದು, ನೀರನ್ನೆಲ್ಲ ಬಸಿದು 2-3 ಗಂಟೆ ಕಾಲ ನೆನೆಯಲು ಬಿಡಬೇಕು. ಅನನಾಸ್ ಹೋಳುಗಳನ್ನು ಕುಡಿಯುವ ನೀರಿಗೆ ಹಾಕಿ 3-8 ನಿಮಿಷಗಳ ಕಾಲ ನೆನೆ ಹಾಕಿ ನಂತರ ನೀರನ್ನು ಬಸಿದು ತೆಗೆಯಬೇಕು. ಕಾಯಿತುರಿ ಹಾಗೂ ಬೆಲ್ಲವನ್ನು ಸೇರಿಸಿ ನೀರು ಸೋಕಿಸದೆ ನುಣ್ಣಗೆ ರುಬ್ಬಬೇಕು. ಈ ಮಿಶ್ರಣಕ್ಕೆ ಅನನಾಸು ಹೋಳು, ಉಪ್ಪು, ಏಲಕ್ಕಿ ನೆನೆದ ಇಡ್ಲಿರವೆ ಸೇರಿಸಿ ಇಡ್ಲಿ ಹಿಟ್ಟಿನ ಹದಕ್ಕೆ ಕಲಸಿ ಬಾಳೆ ಎಲೆಯಲ್ಲಿ ಮಡಚಿ ಉಗಿಯಲ್ಲಿ ಬೇಯಿಸಿ. ಇಡ್ಲಿ ತಟ್ಟೆಗೂ ತುಪ್ಪ ಸವರಿ ಮಿಶ್ರಣವನ್ನೂ ಹಾಕಿ ಇಡ್ಲಿ ತರಹ ಬೇಯಿಸಬಹುದು. ಈ ಅನನಾಸು ಸಿಹಿ ಕಡುಬಿಗೆ ತುಪ್ಪ ಸವರಿ ತಿನ್ನಲು ಬಲು ರುಚಿ.