ಬೇಕಾಗುವ ಸಾಮಾಗ್ರಿಗಳು
ಅಕ್ಕಿ ಹುಡಿ(ತರಿತರಿ ಇರಲಿ)- ಅರ್ಧ ಕೆಜಿ
ತೆಂಗಿನಕಾಯಿ-1/2(ತುರಿದಿಟ್ಟದ್ದು)
ನೀರು- 2 ಲೀಟರ್
ಹೆಸರು ಕಾಳು(ಪಯರ್)- 250 ಗ್ರಾಂ
ಮೆಣಸಿನ ಹುಡಿ- 2 ಚಮಚ
ಉಪ್ಪು
ಹಪ್ಪಳ- 4
ಬಾಳೆಹಣ್ಣು-1
ತೆಂಗಿನ ಎಣ್ಣೆ - ಹಪ್ಪಳ ಕರಿಯಲು
'ಪುಟ್ಟು' ಕೇರಳದ ಪ್ರಮುಖ ತಿಂಡಿಗಳಲ್ಲೊಂದು. ಇದನ್ನು ಮಾಡಬೇಕಾದರೆ ಪುಟ್ಟು ಪಾತ್ರೆ ಇರಲೇ ಬೇಕು. ಅಡಿಭಾಗದಲ್ಲಿ ಸಣ್ಣ ಕೊಡದಂತಿರುವ ಈ ಪಾತ್ರೆಯ ಮೇಲೆ ಕೊಳವೆಯನ್ನು ಹೋಲುವ ಇನ್ನೊಂದು ಪಾತ್ರೆಯನ್ನು ಇರಿಸಲಾಗುತ್ತದೆ. ಅಡಿಯಲ್ಲಿರುವ ಪಾತ್ರೆಯಲ್ಲಿ ಅರ್ಧಭಾಗದಷ್ಟು ನೀರು ತುಂಬಿಸಿರಬೇಕು ಹಾಗೂ ಕೊಳವೆಯಾಕಾರದ ಪಾತ್ರದಲ್ಲಿ ಗಟ್ಟಿಯಾಗಿ ಹಿಟ್ಟು ತುಂಬಿಸಬೇಕು. ಈ ಕೊಳವೆಯಾಕಾರದ ಪಾತ್ರೆಯನ್ನು ಕೆಳಗಿರುವ ನೀರಿನ ಪಾತ್ರೆಯ ಮೇಲಿರಿಸಲಾಗುತ್ತದೆ. ಅಡಿಭಾಗದಲ್ಲಿರುವ ನೀರಿನ ಪಾತ್ರೆಯಿಂದ ಹೊರಸೂಸುವ ಆವಿಗೆ ಮೇಲಿರುವ ಹಿಟ್ಟು ಬೆಂದು ಪುಟ್ಟು ಆಗುತ್ತದೆ.
ಪಾಕ ವಿಧಾನ
ಮೊದಲಿಗೆ ಅಕ್ಕಿ ಹುಡಿಗೆ ಹೊಂದಿಕೊಳ್ಳುವಂತೆ ಸ್ವಲ್ಪ ಉಪ್ಪು ನೀರು ಚಿಮುಕಿಸಿ ಚೆನ್ನಾಗಿ ಹದ ಬರುವಂತೆ ಮಾಡಿ. ಅಕ್ಕಿ ಹುಡಿಯು ನೀರಿನಲ್ಲಿ ಸ್ವಲ್ವ ಅದ್ದಿದಂತೆ ಇರಬೇಕು. ಒಂದು ತೆಂಗಿನ ಕಾಯಿಯನ್ನು ತುರಿದು ಪಕ್ಕಕ್ಕೆ ಇಟ್ಟು ಕೊಳ್ಳಿ. ಪುಟ್ಟು ಪಾತ್ರೆಯ ಕೊಳವೆಯಾಕಾರದ ಪಾತ್ರೆಯ ಒಳಗೆ ತೆಂಗಿನೆಣ್ಣೆಯನ್ನು ತೆಳುವಾಗಿ ಲೇಪಿಸಿ. ತದನಂತರ (ಪುಟ್ಟು ಪಾತ್ರೆಯಲ್ಲಿರುವ) ಜರಡಿಯಂತಿರುವ ಸಣ್ಣ ತಟ್ಟೆಯನ್ನು ಕೊಳವೆಯೊಳಗೆ ಹಾಕಿ. ಅನಂತರ ಒಂದು ಸಣ್ಣ ಕಪ್ ಅಕ್ಕಿ ಹುಡಿಯನ್ನು ಕೊಳವೆಗೆ ತುಂಬಿಸಿ. ಇದರ ಮೇಲೆ ಎರಡು ಚಮಚದಷ್ಟು ತೆಂಗಿನಕಾಯಿ ತುರಿಯನ್ನು ಹಾಕಿ.
ಹೀಗೆ ಅಕ್ಕಿ ಮತ್ತು ತೆಂಗಿನಕಾಯಿ ತುರಿಗಳನ್ನು ಒಂದರ ಮೇಲೆ ಇನ್ನೊಂದರಂತೆ ಹಾಕಿ ಗಟ್ಟಿಯಾಗಿ ಜಡಿದು ತುಂಬಿಸಿ. ಕೊಳವೆಪಾತ್ರೆಯಲ್ಲಿ ಹಿಟ್ಟು ತುಂಬಿಸಿದ ನಂತರ ಆವಿಯಲ್ಲಿ ಬೇಯಿಸಿ. ಕೊಳವೆಯಾಕಾರದ ಪಾತ್ರೆಯ ಮೇಲಿರುವ ಮುಚ್ಚಳದಿಂದ ಆವಿ ಹೊರ ಬಂದ ನಂತರ ಒಲೆಯಿಂದ ಕೆಳಗಿಳಿಸಿ.
ಬಳಿಕ ಕೊಳವೆಯ ಹಿಂಭಾಗದಲ್ಲಿರುವ ಮುಚ್ಚಳ ತೆಗೆದು ಅಗಲವಾದ ಪಾತ್ರೆಯಲ್ಲಿರಿಸಿ ಸಣ್ಣ ಕೋಲಿನಿಂದ ಮೃದುವಾಗಿ ಹಿಟ್ಟನ್ನು ಮುಂದಕ್ಕೆ ತಳ್ಳಿ. ಇದೀಗ ಕೊಳವೆಯಾಕಾರದ ಪುಟ್ಟು ರೆಡಿ.
ಪಯರ್ ಕರಿ
ಪುಟ್ಟು ಜೊತೆಗೆ ಪಯರ್ ಕರಿ ಬೇಕೇ ಬೇಕು. ಪಯರ್ ಕರಿ (ಹೆಸರು ಕಾಳು ಪದಾರ್ಥ)ಯನ್ನು ತಯಾರಿಸಲು ಮೊದಲು ಹೆಸರು ಕಾಳನ್ನು ನೀರಿನಲ್ಲಿ ನೆನೆಸಿಡಿ. ನಂತರ ಇದನ್ನು ಹದವಾದ ನೀರಿನೊಂದಿಗೆ ಬೇಯಿಸಿ. ಕಾಳು ಬೇಯುತ್ತಾ ಬರುವಾಗ ಉಪ್ಪು ಮತ್ತು ಮೆಣಸಿವ ಪುಡಿಯನ್ನು ಹಾಕಿ. ಇದಕ್ಕೆ ಕೆಂಪು ಮೆಣಸನ್ನು ಒಲೆಯಲ್ಲಿ ಸುಟ್ಟು ತುಂಡು ಮಾಡಿ ಹಾಕಲೂ ಬಹುದು. ಹೆಸರು ಕಾಳು ಚೆನ್ನಾಗಿ ಬೆಂದು ಅಂಟು ಬರುವಂತಾಗುವಾಗ ಒಲೆಯಿಂದ ಕೆಳಗಿಳಿಸಿ.
ತೆಂಗಿನ ಎಣ್ಣೆಯಯಲ್ಲಿ ಹಪ್ಪಳಗಳನ್ನು ಕರಿದಿಡಿ. ಪುಟ್ಟು ಪಯರ್ ಅನ್ನು ಹುರಿದ ಹಪ್ಪಳ ಮತ್ತು ಬಾಳೆಹಣ್ಣಿನ ಜತೆಗೆ ಸವಿಯಿರಿ.