ಭಾರತದ ಹೆಮ್ಮೆಯ ಕ್ರೀಡಾಪಟು ಸಾನಿಯಾ ಮಿರ್ಜಾ ಮತ್ತು ಮಾರ್ಟಿನಾ ಹಿಂಗಿಸ್ ಜೋಡಿ ತಮ್ಮ ಗೆಲುವಿನ ನಾಗಾಲೋಟವನ್ನು ಮುಂದುವರಿಸಿದೆ. ಇದೀಗ, ವುಹಾನ್ ಟೆನಿಸ್ ಓಪನ್ ಪಂದ್ಯಾವಳಿಯ ಮಹಿಳಾ ಡಬಲ್ಸ್‌ನಲ್ಲಿ ಸಾನಿಯಾ-ಹಿಂಗಿಸ್ ಜೋಡಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಅಗ್ರಶ್ರೇಯಾಂಕಿತ ಇಂಡೋ-ಸ್ವಿಸ್ ಜೋಡಿ, ಫೈನಲ್ ಪಂದ್ಯದಲ್ಲಿ ತಮ್ಮ ಎದುರಾಳಿ ರೋಮೋನಿಯಾದ ಐರಿನಾ- ಕ್ಯಾಮೆಲಿಯಾ ಬೆಗು ಜೋಡಿಯನ್ನು 6-2, 6-3 ಸೆಟ್‌ಗಳ ಅಂತರದಿಂದ ಸೋಲಿಸಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
ಪಂದ್ಯಾವಳಿಯ ಮೊದಲ ಸುತ್ತಿನಲ್ಲಿ ಬೈ ಪಡೆದ ಸಾನಿಯಾ- ಮಾರ್ಟಿನಾ ಜೋಡಿ, ಎರಡನೇ ಸುತ್ತು, ಕ್ವಾರ್ಟರ್‌ಫೈನಲ್ ಮತ್ತು ಸೆಮಿಫೈನಲ್‌ನಲ್ಲಿ ಸುಲಭವಾಗಿ ಜಯಗಳಿಸುವಲ್ಲಿ ಯಶಸ್ವಿಯಾಗಿದ್ದರು.
ವುಹಾನ್ ಓಪನ್ ಪಂದ್ಯಾವಳಿಯ ಪ್ರಶಸ್ತಿಯೊಂದಿಗೆ ಸಾನಿಯಾ- ಮಾರ್ಟಿನಾ ಜೋಡಿ ಏಳು ಡಬ್ಲ್ಯುಟಿಎ ಪ್ರಶಸ್ತಿಗಳನ್ನು ಪಡೆದಂತಾಗುತ್ತದೆ. ಇಂಡಿಯನ್ ವೆಲ್ಸ್, ಮಿಯಾಮಿ, ಚಾರ್ಲ್ಸಟೋನ್, ವಿಂಬಲ್ಡನ್, ಯುಎಸ್ ಓಪನ್, ಗುವಾಂಗ್‌ಚೌ ಮತ್ತು ವುಹಾನ್ ಓಪನ್ ಪಂದ್ಯಾವಳಿಗಳಲ್ಲಿ ಜಯಭೇರಿ ಬಾರಿಸಿದ್ದಾರೆ.
ಇದೀಗ, ಚೀನಾದ ಬೀಜಿಂಗ್‌ನಲ್ಲಿ ನಡೆಯಲಿರುವ ಚೀನಾ ಓಪನ್ ಪಂದ್ಯಾವಳಿಯಲ್ಲಿ ಸಾನಿಯಾ ಮಿರ್ಜಾ ಮತ್ತು ಮಾರ್ಟಿನಾ ಹಿಂಗಿಸ್ ಜೋಡಿ ಮತ್ತೆ ಗೆಲುವಿನ ನಾಗಾಲೋಟ ಮುಂದುವರಿಸಲಿದ್ದಾರೆಯೇ ಎನ್ನುವುದನ್ನು ಕಾದು ನೋಡಬೇಕಾಗಿದೆ.