ನವದೆಹಲಿ: ಡೇವಿಸ್ ಕಪ್ ಎನ್ನುವುದು ಟೆನಿಸ್ ವಲಯದಲ್ಲಿ ಪ್ರತಿಷ್ಠಿತ ಟೂರ್ನಿ. ಡೇವಿಸ್ ಕಪ್ ಎಂದಾಕ್ಷಣ ಲಿಯಾಂಡರ್ ಪೇಸ್ ಹೆಸರೇ ನೆನಪಾಗುವುದು. ಅವರು ಯಾವ ಟೂರ್ನಿಯನ್ನು ಬಿಟ್ಟರೂ ಡೇವಿಸ್ ಕಪ್ ನಲ್ಲಿ ಆಡುವ ಅವಕಾಶವನ್ನು ಮಾತ್ರ ಕಳೆದುಕೊಳ್ಳುವುದಿಲ್ಲ. ಅಂತಹ ಹಿರಿಯ ಟೆನಿಸಿಗ ಇರುವ ತಂಡಕ್ಕೆ ಮಹೇಶ್ ಭೂಪತಿ ನಾಯಕ.
ಇದುವರೆಗೆ ಭಾರತ ಡೇವಿಸ್ ಕಪ್ ತಂಡಕ್ಕೆ ಹಿರಿಯ ಟೆನಿಸಿಗ ಆನಂದ್ ಅಮೃತ್ ರಾಜ್ ನಾಯಕರಾಗಿದ್ದರು. ಆದರೆ ಇದೀಗ ಅವರಿಗೆ ಕೈಕೊಟ್ಟು ಮಹೇಶ್ ಭೂಪತಿಯನ್ನು ಭಾರತೀಯ ಟೆನಿಸ್ ಫೆಡರೇಷನ್ ನಾಯಕನಾಗಿ ಮಾಡಿದೆ. ಭೂಪತಿ ಮತ್ತು ಪೇಸ್ ಸಂಬಂಧ ಅಷ್ಟೇನೂ ಚೆನ್ನಾಗಿಲ್ಲ ಎಂದು ಹಲವು ಬಾರಿ ಸಾಬೀತುಗೊಂಡಿದೆ. ಇದೀಗ ಅವರಿಗೆ ನಾಯಕತ್ವ ಸಿಕ್ಕಿದ್ದು,ಕುತೂಹಲ ಮೂಡಿಸಿದೆ.
ಮುಂದಿನ ವರ್ಷ ಫೆಬ್ರವರಿಯಲ್ಲಿ ನ್ಯೂಜಿಲೆಂಡ್ ನಲ್ಲಿ ನಡೆಯಲಿರುವ ಡೇವಿಸ್ ಕಪ್ ಅಮೃತ್ ರಾಜ್ ಗೆ ವಿದಾಯದ ಕೂಟವಾಗಲಿದೆ. ನಂತರ ಮಹೇಶ್ ಭೂಪತಿ ಅಧಿಕೃತವಾಗಿ ತಂಡದ ನಾಯಕರಾಗಲಿದ್ದಾರೆ. ಭಾರತೀಯ ಟೆನಿಸ್ ಫೆಡರೇಷನ್ ಘೋಷಿಸಿದ ತಂಡದಲ್ಲಿ ಲಿಯಾಂಡರ್ ಪೇಸ್, ರಾಂಕುಮಾರ್ ರಮಾನಾಥನ್, ಯೂಕಿ ಬಾಂಭ್ರಿ, ಸಾಕೇತ್ ಮೈನೇನಿ ಮುಂತಾದವರಿದ್ದಾರೆ.
ಯಾರಿಗೂ ತಮ್ಮ ಸ್ಥಾನ ಬಿಟ್ಟುಕೊಡಲು ಇಷ್ಟವಿರುವುದಿಲ್ಲ. ಆದರೆ ಎಲ್ಲರಿಗೂ ಅವಕಾಶ ಸಿಗಬೇಕು ಎಂದು ಭೂಪತಿಯನ್ನು ಆಯ್ಕೆ ಮಾಡುತ್ತಿದ್ದೇವೆ ಎಂದು ಫೆಡರೇಷನ್ ಹೇಳಿದೆ. ಆದರೆ ಈ ಜವಾಬ್ದಾರಿಗೆ ಭೂಪತಿಗೆ ಎಷ್ಟು ಸಂಭಾವನೆ ನೀಡಬೇಕಿದೆ ಎನ್ನುವ ವಿಷಯವನ್ನು ಮಾತ್ರ ಫೆಡರೇಷನ್ ಬಹಿರಂಗಪಡಿಸಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ