ಭಾರತದ ಗೋಲ್ ಕೀಪರ್ ಶ್ರೀಜೇಶ್ ಅವರ ನಿರಾಶಾದಾಯಕ ಪ್ರದರ್ಶನದಿಂದ ಭಾರತ ಹಾಕಿ ಚಾಂಪಿಯನ್ಸ್ ಟ್ರೋಫಿಯ ರೌಂಡ್ ರಾಬಿನ್ ಪಂದ್ಯದಲ್ಲಿ ಬೆಲ್ಜಿಯಂ ವಿರುದ್ಧ 1-2ರಿಂದ ಸೋಲಪ್ಪಿದೆ. ಲಂಡನ್‌ನಲ್ಲಿ ಸೋಮವಾರ ಲೀ ವ್ಯಾಲಿ ಹಾಕಿ ಕೇಂದ್ರದಲ್ಲಿ ನಡೆದ ಪಂದ್ಯದಲ್ಲಿ ಬೆಲ್ಜಿಯನ್ ಆಟಗಾರರಾದ ಅಲೆಕ್ಸಾಂಡರ್ ಹೆಂಡ್ರಿಕ್ ಮತ್ತು ಜೆರೊಮ್ ಟ್ರುಯೆನ್ಸ್ ಶ್ರೀಜೇಶ್ ಕಣ್ತಪ್ಪಿಸಿ ಗೋಲು ಹಾಕಿದರು.
ಡೇವಿಂದರ್ ವಾಲ್ಮಿಕಿ 30ನೇ ನಿಮಿಷದಲ್ಲಿ ಏಕೈಕ ಗೋಲನ್ನು ಹಾಕಿದರು. ಈ ಸೋಲಿನಿಂದ ಭಾರತ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿದ್ದು ಮೂರು ಪಂದ್ಯಗಳಿಂದ 4 ಪಾಯಿಂಟ್ ಗಳಿಸಿದೆ.
ಬೆಲ್ಜಿಯಂ ಈ ಜಯದಿಂದ ಐದನೇ ಸ್ಥಾನಕ್ಕೆ ಜಿಗಿದಿದ್ದು, ದಕ್ಷಿಣ ಕೊರಿಯಾ ಮತ್ತು ಜರ್ಮನಿ 5 ಮತ್ತು 6 ನೇ ಸ್ಥಾನದಲ್ಲಿವೆ. ಭಾರತ ಮಂಗಳವಾರ ದಕ್ಷಿಣ ಕೊರಿಯಾವನ್ನು ಎದುರಿಸುತ್ತಿದೆ.
ಬೆಲ್ಜಿಯಂ ತನ್ನ ನಾಲ್ಕನೇ ಪೆನಾಲ್ಟಿ ಕಾರ್ನರ್‌ರನ್ನು 25ನೇ ನಿಮಿಷದಲ್ಲಿ ಗೋಲಾಗಿಸಿತು. ಶ್ರೀಜೇಶ್ ಕಾಲಿನಡಿ ಚೆಂಡು ತೂರಿ ಗೋಲುಪಟ್ಟಿಗೆ ಬಡಿಯಿತು. ಭಾರತದ ಪರ 5 ನಿಮಿಷಗಳ ನಂತರ ದೇವಿಂದರ್ ಗೋಲನ್ನು ಗಳಿಸಿ ಸ್ಕೋರನ್ನು ಸಮಗೊಳಿಸಿದರು.
ಎರಡೂ ತಂಡಗಳು ಮುನ್ನಡೆ ಗಳಿಸಲು ಪ್ರಯತ್ನಿಸಿದವು. 44 ನೇ ನಿಮಿಷದಲ್ಲಿ ಶ್ರೀಜೇಶ್ ಇನ್ನೊಂದು ತಪ್ಪಿನಿಂದ ಬೆಲ್ಜಿಯನ್ನರು ಮುನ್ನಡೆ ಗಳಿಸಿದರು. ಗೋಗ್‌ನಾರ್ಡ್ ಬಲಮೂಲೆಯಿಂದ ನೀಡಿದ ಪಾಸನ್ನು ಹಿರಿಯ ಆಟಗಾರ ಟ್ರುಯೆನ್ಸ್ ಗೋಲಿನತ್ತ ಬಾರಿಸಿದ್ದು ಶ್ರೀಜೇಶ್ ಕಾಲಿನಡಿ ತೂರಿ ಗೋಲುಪಟ್ಟಿಗೆ ಹೊಕ್ಕಿದ್ದರಿಂದ ಬೆಲ್ಜಿಯಂ 2-1ರಿಂದ ಮುನ್ನಡೆ ಗಳಿಸಿತು.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ