ಹ್ಯಾಂಗ್ ಝೂ: 19 ನೇ ಏಷ್ಯನ್ ಗೇಮ್ಸ್ ನಲ್ಲಿ ಇಂದು ಬೆಳಗ್ಗೆಯೇ ಭಾರತ ಶುಭಾರಂಭ ಮಾಡಿದೆ. 10 ಮೀ. ಏರ್ ಪಿಸ್ತೂಲ್ ಮಹಿಳೆಯರ ವೈಯಕ್ತಿಕ ವಿಭಾಗದಲ್ಲಿ ಭಾರತ ಚಿನ್ನ ಮತ್ತು ಬೆಳ್ಳಿ ಪದಕ ಎರಡನ್ನೂ ಗೆದ್ದುಕೊಂಡಿದೆ.
ಈ ಈವೆಂಟ್ ನಲ್ಲಿ ಭಾರತದ ಪಲಕ್ ಚಿನ್ನದ ಪದಕ ಗೆದ್ದುಕೊಂಡರೆ ಭಾರತದವರೇ ಆದ ಮತ್ತೊಬ್ಬ ತಾರೆ ಇಶಾ ಸಿಂಗ್ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಕಂಚಿನ ಪದಕ ಪಾಕಿಸ್ತಾನದ ತಲತ್ ಕಿಶ್ಮಲಾ ಪಾಲಾಗಿದೆ.
ಶೂಟಿಂಗ್ ನಲ್ಲಿ ಇಂದು ಭಾರತ ಮತ್ತೊಂದು ಚಿನ್ನ ಸಂಪಾದಿಸಿದೆ. ಪುರುಷರ 50 ಮೀ. ರೈಫಲ್ ಟೀಂ ಈವೆಂಟ್ ನಲ್ಲಿ ಭಾರತದ ಐಶ್ವರ್ಯ್ ಪ್ರತಾಪ್ ಸಿಂಗ್ ತೋಮರ್ ಮತ್ತು ಸ್ವಪ್ನಿಲ್ ಸುರೇಶ್ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಇದರೊಂದಿಗೆ ಶೂಟಿಂಗ್ ನಲ್ಲಿ 15 ಪದಕ ಗೆದ್ದುಕೊಂಡಂತಾಗಿದೆ. ಇದು ಏಷ್ಯನ್ ಗೇಮ್ಸ್ ನಲ್ಲೇ ಭಾರತದ ದಾಖಲೆಯಾಗಿದೆ. ಇನ್ನು, ಪುರುಷರ ಟೆನಿಸ್ ಡಬಲ್ ಪಂದ್ಯದಲ್ಲಿ ಭಾರತದ ರಾಮ್ ಕುಮಾರ್ ರಾಮನಾಥನ್-ಸಾಕೇತ್ ಜೋಡಿ ರಜತ ಪದಕ ಗೆದ್ದುಕೊಂಡಿದ್ದಾರೆ.
ಇಂದು ಭಾರತದ ಮಹಿಳಾ ಹಾಕಿ ತಂಡ, ಟೆನಿಸ್ ಮತ್ತು ಸ್ಕ್ಯಾಶ್ ತಾರೆಯರು ಪಂದ್ಯವಾಡಲಿದ್ದು, ಮತ್ತಷ್ಟು ಪದಕ ಗೆದ್ದು ಇತಿಹಾಸ ನಿರ್ಮಿಸುವ ನಿರೀಕ್ಷೆಯಿದೆ.