ಪ್ರಸಕ್ತ ಮಾರುಕಟ್ಟೆ ಪರಿಸ್ಥಿತಿಗಳನ್ನು ಗಮನಿಸಿದರೆ, ಭಾರತೀಯ ಈಕ್ವಿಟಿ ಮಾರುಕಟ್ಟೆಗಳಲ್ಲಿ ಯಾವುದೇ ರ‌್ಯಾಲಿಗಳ ಪ್ರಶ್ನೆಯೇ ಇಲ್ಲ. ಮಾರುಕಟ್ಟೆಯಲ್ಲಿ ಯಾವುದೇ ಖರೀದಿ ಇರಲಾರದು. ಹೂಡಿಕೆದಾರರ ಭಾವನೆಗಳು ಕುಸಿದಿವೆ. ತತ್ಪರಿಣಾಮ ಮಾರುಕಟ್ಟೆಯಲ್ಲಿ ಯಾವುದೇ ಹೆಚ್ಚುವರಿ ಚಟುವಟಿಕೆ ಕಾಣಿಸುವುದಿಲ್ಲ.
ನಾವು ಬಹುತೇಕ ಜನವರಿ ಮತ್ತು ಮಾರ್ಚ್ ತಿಂಗಳ ಕನಿಷ್ಠ ಮಟ್ಟಕ್ಕೆ ಬಂದು ನಿಂತಿದ್ದೇವೆ. ಮಾರುಕಟ್ಟೆಯಲ್ಲಿ ಹೊಸ ಖರೀದಿ ನಡೆಯುತ್ತಿಲ್ಲ. ಹೊಸತಾಗಿ ಹೂಡಿಕೆ ಮಾಡಲು ಯಾರು ಕೂಡ ಇಚ್ಛಿಸುತ್ತಿಲ್ಲ. ಎಫ್ಐಐಗಳು ಕೂಡ ನಿರಂತರವಾಗಿ ಮಾರಾಟದ ಭರಾಟೆಯಲ್ಲಿವೆ.
ಯಾವುದೇ ಚೈತನ್ಯ ಕಾಣಿಸುತ್ತಿಲ್ಲ. ಕಚ್ಚಾತೈಲ ಮತ್ತು ಪೆಟ್ರೋಲಿಯಂ ಬೆಲೆಗಳು ಏರಿಕೆಯಾಗುವುದರೊಂದಿಗೆ ಹಣದುಬ್ಬರ ಮತ್ತಷ್ಟು ಏರುವುದು ಖಚಿತ. ಎರಡು ವಾರಗಳಲ್ಲೇ ಅದು ಶೇ.9.5ರವರೆಗೂ ಏರಿಕೆಯಾಗಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ. ಇದುವೇ ನೈಜ ಬಡ್ಡಿ ದರಗಳನ್ನು ಋಣಾತ್ಮಕವಾಗಿಸುತ್ತವೆ. ಬಡ್ಡಿದರಗಳು ಏರುವ ಮತ್ತು ಸಿಆರ್ಆರ್ ಕೂಡ ಏರುವ ನಿರೀಕ್ಷೆ ಇರುವ ಕಾರಣ, ಕಂಪನಿಗಳು ಈ ವರ್ಷ ತಮ್ಮ ಗುರಿ ಮುಟ್ಟುವುದು ಸಾಧ್ಯವಾಗಲಾರವು.
ಕಳೆದ ಕೆಲವು ವಾರಗಳಲ್ಲಿ, ಭಾರತದಲ್ಲಿ ಮಾತ್ರವೇ ಅಲ್ಲ, ಏಷ್ಯಾ ಮತ್ತು ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲೂ ತೈಲ ಬೆಲೆ ಏರಿಕೆಯ ಪ್ರಕ್ರಿಯೆ ನಡೆಯುತ್ತಲೇ ಇದೆ. ವ್ಯವಸ್ಥೆಯಲ್ಲಿ ಕಡಿಮೆ ಬೇಡಿಕೆ ಉಂಟಾಗುತ್ತದೆ ಮತ್ತು ಬೇಡಿಕೆ-ಪೂರೈಕೆ ಪರಸ್ಪರ ತಿಕ್ಕಾಟ ಏರ್ಪಡಬಹುದು. ಕಚ್ಚಾತೈಲ ಬೆಲೆಯು ಬ್ಯಾರೆಲ್‌ಗೆ 100 ಡಾಲರ್‌ಗಿಂತ ಕಡಿಮೆ ಇಳಿಯದ ಹೊರತು, ಮಾರುಕಟ್ಟೆಯಲ್ಲಿ ಯಾವುದೇ ರೀತಿಯ ಹಿತಕರ ಅನುಭವ ಇರುವುದು ಸಾಧ್ಯವಾಗದು.
ತಾಂತ್ರಿಕ ಕೋನ: ಕಳೆದ ಕೆಲವು ದಿನಗಳಲ್ಲಿ ಎಲ್ಲ ಬ್ಯೂಚಿಪ್ ಮತ್ತು ಪ್ರಧಾನ ಸ್ಟಾಕ್‌ಗಳು ಚಾರ್ಟ್‌ನಲ್ಲಿ ಕುಸಿತವನ್ನೇ ತೋರಿಸಿವೆ ಮತ್ತು ಅವುಗಳಲ್ಲಿ ಕೆಲವಂತೂ ಮಾರ್ಚ್ ಹಾಗೂ ಜನವರಿಯ ಕನಿಷ್ಠ ದಾಖಲೆಯನ್ನೂ ಮುರಿದಿವೆ. ಇತರ ಎಲ್ಲಾ ಸ್ಟಾಕ್‌ಗಳೂ ದುರ್ಬಲವಾಗಿರುವಂತೆ ತೋರುತ್ತಿದ್ದು, ಚಾರ್ಟ್‌ಗಳಲ್ಲಿ ಆಸಕ್ತಿದಾಯಕವಾದುದೇನೂ ಕಂಡುಬರುತ್ತಿಲ್ಲ. ನಿಫ್ಟಿಯು ಮಾರ್ಚ್ ಮತ್ತು ಜನವರಿಯ ಕನಿಷ್ಠ ಮಟ್ಟ 4450ರ ಆಸುಪಾಸಿನಲ್ಲೇ ಇದೆ. ಅಂದರೆ ಈ ಮಟ್ಟದಿಂದ ಸುಮಾರು 100-150 ಪಾಯಿಂಟ್ ಮಾತ್ರವೇ ದೂರದಲ್ಲಿದೆ. ಪ್ರಸಕ್ತ ಸ್ಥಿತಿಗತಿ ಮತ್ತು ಮಾರುಕಟ್ಟೆಯ ದೌರ್ಬಲ್ಯ ಪರಿಗಣಿಸಿದರೆ, ಸದ್ಯದಲ್ಲೇ ಅದು ಮತ್ತಷ್ಟು ಕುಸಿತವಾಗಲೂಬಹುದು.
ಪ್ರಸಕ್ತ ಸ್ಥಿತಿಗತಿಯನ್ನು ಗಮನಿಸಿದರೆ, ಮಾರುಕಟ್ಟೆಯು ಹೂಡಿಕೆದಾರರಿಗೆ ಆರೋಗ್ಯಕರವಾಗಿಲ್ಲ ಎಂದಷ್ಟೇ ಹೇಳಬಹುದು.