ಮಾರುಕಟ್ಟೆಯ ಮಂದ ಪ್ರವೃತ್ತಿಯು ಮುಂದುವರಿಯಲಿದೆ ಎಂಬ ಜಾಗತಿಕ ಹೂಡಿಕಾ ಬ್ಯಾಂಕುಗಳ ಮುನ್ಸೂಚನೆಯ ಮೇರೆಗೆ ಮಾರಾಟ ಖರೀದಿ ಹೆಚ್ಚಳ ಉಂಟಾದ ಪರಿಣಾಮವಾಗಿ, ಮುಂಬಯಿ ಮಾರುಕಟ್ಟೆಯ ಸಂವೇದಿ ಸೂಚ್ಯಂಕವು 278 ಅಂಕಗಳಷ್ಟು ಕುಸಿತದಲ್ಲಿ ತನ್ನ ವಹಿವಾಟನ್ನು ಅಂತ್ಯಗೊಳಿಸಿದೆ.
ಆರಂಭಿಕ ವಹಿವಾಟಿನಲ್ಲೂ ಕುಸಿತ ಕಂಡಿದ್ದ ಶೇರುಪೇಟೆಯು 277.97 ಅಂಕಗಳಷ್ಟು ಇಳಿಕೆಗೊಂಡು 14,293.32 ಅಂಕಗಳಿಗೆ ತಲುಪಿದ್ದು, ಕಳೆದ ವರ್ಷ ಆಗಸ್ಟ್ 24ರಂದು ಶೇರುಪೇಟೆಯು ಈ ಮಟ್ಟದ ಇಳಿಕೆಯನ್ನು ಕಂಡಿತ್ತು.
ರಾಷ್ಟ್ರೀಯ ಶೇರು ವಿನಿಮಯ ಕೇಂದ್ರ ನಿಫ್ಟಿಯ ಶೇರು ಸೂಚ್ಯಂಕವು 81.15ರಷ್ಟು ಇಳಿಕೆಗೊಂಡಿದ್ದು, 4,266 ಅಂಕಗಳಿಗೆ ತಲುಪಿದೆ.
ಪ್ರಬಲ ಶೇರುಗಳಾಗ ರಿಲಾಯನಸ್ಸ್ ಇಂಡಸ್ಟ್ಪೀಸ್ ತೀವ್ರ ಮಟ್ಟದ ಕುಸಿತ ಕಂಡಿದ್ದು, ಲಾರ್ನಸ್ ಆಂಡ್ ಟರ್ಬೋ ಕೂಡಾ ಇದಕ್ಕೆ ಸಾತ್ ನೀಡಿದೆ.
ಮಾರುಕಟ್ಟೆಯ ಮೇಲೆ ಕರಿನೆರಳು ವ್ಯಾಪಿಸಿದೆ. ದಿನವಿಡೀ ನಿರಂತರ ಮಾರಾಟದ ಒತ್ತಡದಿಂದಾಗಿ ಸತತ ನಾಲ್ಕನೇ ದಿನವೂ ಮಾರುಕಟ್ಟೆ ತೀವ್ರ ಕುಸಿತ ಕಾಣುವಂತಾಯಿತು. ಹಣದುಬ್ಬರವು 13 ವರ್ಷಗಳಷ್ಟು ಹಿಂದಿನ ಮಟ್ಟಕ್ಕೆ ಮೇಲೇರಿರುವುದರೊಂದಿಗೆ ಭಾರತೀಯ ರಿಸರ್ವ್ ಬ್ಯಾಂಕ್ ನಿಯಮಾವಳಿ ಬಿಗಿಗೊಳಿಸುವ ಸಾಧ್ಯತೆಗಳು ಮತ್ತು ರಾಜಕೀಯ ಅನಿಶ್ಚಿತತೆಯು ಸೋಮವಾರ ಮಾರುಕಟ್ಟೆ ಮೇಲೆ ವ್ಯತಿರಿಕ್ತ ಪರಿಣಾಮವನ್ನೇ ಬೀರಿತು.
ಬೇಡಿಕೆಯನ್ನು ಹೆಚ್ಚುಗೊಳಿಸಿ ಸೂಕ್ತವಾಗಿ ನಿರ್ವಹಿಸುವ ನಿಟ್ಟಿನಲ್ಲಿ ಆರ್‌ಬಿಐ ತನ್ನ ಪಾತ್ರ ನಿರ್ವಹಿಸಲಿದೆ ಎಂದು ಆರ್‌ಬಿಐ ಗವರ್ನರ್ ವೈ.ವಿ.ರೆಡ್ಡಿ ಅವರು ಸೋಮವಾರ ಪ್ರಕಟಿಸಿದ್ದಾರೆ. ಕೇಂದ್ರೀಯ ಬ್ಯಾಂಕು ಈ ಕುರಿತ ಸಮಸ್ಯೆಗಳು ಮತ್ತು ಪರಿಹಾರಗಳ ಬಗ್ಗೆ ಸಮಗ್ರ ಪರಿಶೀಲನೆಯಲ್ಲಿ ತೊಡಗಿದೆ. ಆದರೆ ಪ್ರಗತಿಯ ಮೇಲೆ ಹಣದುಬ್ಬರ ಯಾವುದೇ ಪರಿಣಾಮ ಬೀರದು ಎಂದಿದ್ದಾರೆ ವೈ.ವಿ.ರೆಡ್ಡಿ.
ಮಂಗಳವಾರದ ಮಾರುಕಟ್ಟೆ: ಮಂಗಳವಾರ ನಿಫ್ಟಿಯು 15-20 ಅಂಶ ಋಣಾತ್ಮಕವಾಗಿಯೇ ತೆರೆದುಕೊಳ್ಳುವ ಸಾಧ್ಯತೆಗಳಿದ್ದು, 1245-4250 ರ ಆಸುಪಾಸಿನಲ್ಲಿ ಆರಂಭವಾಗಬಹುದು. ನಿಫ್ಟಿಯು 4280 ದಾಟಲು ಸಾಧ್ಯವಾಗದಿದ್ದರೆ, ದಿನವಿಡೀ ಮಾರಾಟದ ಒತ್ತಡ ಹೆಚ್ಚಬಹುದು. ನಿಫ್ಟಿಯು ಅದಕ್ಕಿಂತ ಮೇಲೇರಿದರೆ, ಖರೀದಿಯ ಆಸಕ್ತಿ ಹೆಚ್ಚುವ ಸಾಧ್ಯತೆಗಳಿದ್ದು, ನಿಫ್ಟಿಯು 4300-4330ರ ವರೆಗೂ ಬರಬಹುದು.
ಮಂಗಳವಾರ ಐಡಿಯಾ, ಆರ್‌ಕಾಂ, ಎಸ್‌ಬಿಐನತ್ತ ನೋಟ ಹರಿಸಬಹುದು.