Webdunia - Bharat's app for daily news and videos

Install App

ರಾಜ್ಯಕಂಡ ಮಹಾಮಳೆ ವಿಪತ್ತು ಮತ್ತು ರಾಜಕೀಯ ಬಿಕ್ಕಟ್ಟು!

Webdunia
ಮಂಗಳವಾರ, 22 ಡಿಸೆಂಬರ್ 2009 (19:36 IST)
NRB
ಕಳೆದ ಒಂದು ಶತಮಾನದಲ್ಲಿಯೇ ಕಂಡರಿಯದಂತಹ ಮಹಾಮಳೆ ಆರ್ಭಟಿಸುವ ಮೂಲಕ ಉತ್ತರಕರ್ನಾಟಕ ತತ್ತರಿಸಿ ಹೋಗುವ ಮೂಲಕ ಜನಸಾಮಾನ್ಯರ ಬದುಕು ಅತಂತ್ರವಾಗಿ ತುರ್ತು ಪರಿಹಾರಕ್ಕಾಗಿ ಅಂಗಲಾಚುತ್ತಿದ್ದರೆ, ಆಡಳಿತಾರೂಢ ಬಿಜೆಪಿ ಪಕ್ಷದ ಶಾಸಕರು ತಮ್ಮ ಕರ್ತವ್ಯವನ್ನೇ ಮರೆತು ಸ್ವಾರ್ಥಕ್ಕಾಗಿ ರೆಡ್ಡಿ ಸಹೋದರರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧವೇ ಬಂಡಾಯದ ಕಹಳೆ ಮೊಳಗಿಸಿ ರಾಜ್ಯಸರ್ಕಾರವನ್ನೇ ಬೀಳಿಸುವ ಹುನ್ನಾರ ನಡೆಸಿದ್ದು. ಇನ್ನುಳಿದಂತೆ ಲೋಕಾಯುಕ್ತ ಭೇಟೆ, ಗಾನಕೋಗಿಲೆ ಗಂಗೂಬಾಯಿ ಹಾನಗಲ್ ವಿಧಿವಶರಾಗಿದ್ದು 2009ರ ರಾಜ್ಯದ ಪ್ರಮುಖ ಘಟಾನಾವಳಿಯಾಗಿದೆ.

ಉತ್ತರಕರ್ನಾಟಕ ಜನರ ಬದುಕಿಗೆ ಕೊಳ್ಳಿ ಇಟ್ಟ ಮಹಾಮಳೆ: ಈ ಬಾರಿ ರಾಜ್ಯದಲ್ಲಿ ಸುರಿದ ಮಳೆ ತಮಿಳುನಾಡಿನಲ್ಲಿ ಸಂಭವಿಸಿದ ಸುನಾಮಿಗಿಂತಲೂ ಭೀಕರವಾದದ್ದು ಎಂದು ವಿಶ್ಲೇಷಿಸಲಾಗುತ್ತಿದೆ. ವರುಣನ ಆರ್ಭಟದಿಂದಾಗಿ 1.8ಕೋಟಿ ಜನ ತೊಂದರೆಗೆ ಒಳಗಾಗಿದ್ದಾರೆ. 2ಲಕ್ಷ ಕೋಳಿ ಮತ್ತು ಜಾನುವಾರ ಬಲಿ, 2ಲಕ್ಷ ಮನೆ ನಾಶ, 25ಲಕ್ಷ ಹೆಕ್ಟೇರ್ ಬೆಳೆ ನಾಶ. 200ಕ್ಕೂ ಅಧಿಕ ಮಂದಿ ಸಾವು. ಒಟ್ಟಾರೆ ಬೆಳಗಾವಿ, ಬಾಗಲಕೋಟೆ, ಗದಗ, ಬಳ್ಳಾರಿ, ರಾಯಚೂರು, ಸೇರಿದಂತೆ ಉತ್ತರ ಕರ್ನಾಟಕ ಭಾಗದ ಜನರು ಕಣ್ಣೀರಿನಲ್ಲಿಯೇ ಕೈ ತೊಳೆಯುಂತಾಗಿದೆ. ತುತ್ತು ಕೂಳಿಗೂ ಒದ್ದಾಡುವ ಸ್ಥಿತಿ ಆ ಭಾಗದ ಜನತೆಯದ್ದು. ಪ್ರವಾಹ ಪೀಡಿತ ಜನರ ಪುನರ್ವಸತಿಗಾಗಿ ರಾಜ್ಯಸರ್ಕಾರ ಸಾರ್ವಜನಿಕರಿಂದ ಒಂದೂವರೆ ಸಾವಿರ ಕೋಟಿ ರೂಪಾಯಿಯಷ್ಟು ಹಣ ಸಂಗ್ರಹಿಸಿದೆ. ಕೇಂದ್ರದಿಂದ 500ಕೋಟಿ ರೂಪಾಯಿ ಬಿಡುಗಡೆಯಾಗಿದೆ. ಆದರೆ ನೆರೆ ಸಂತ್ರಸ್ತರ ಮಾತ್ರ ಭಗ್ನಾವಶೇಷಗಳಲ್ಲಿಯೇ ಕಾಲ ಕಳೆಯುಂತಾಗಿದೆ.

NRB
ಸ್ವಾರ್ಥಕ್ಕಾಗಿ ಸರ್ಕಾರವನ್ನೇ ಇಕ್ಕಟ್ಟಿಗೆ ಸಿಲುಕಿಸಿದ ರೆಡ್ಡಿ ಬ್ರದರ್ಸ್: ಒಂದೆಡೆ ವರುಣನ ಮುನಿಸಿನಿಂದ ಜನ ಕಂಗಾಲಾಗಿದ್ದರೆ, ಮತ್ತೊಂದೆಡೆ ಅದಿರು ಸಾಗಣೆ ಲಾರಿಗಳಿಗೆ ರಾಜ್ಯಸರ್ಕಾರ ಶುಲ್ಕ ವಿಧಿಸುವ ನಿರ್ಧಾರ ಸಹಿಸಿಕೊಳ್ಳಲು ಸಿದ್ದರಿರದ ಬಳ್ಳಾರಿ ಗಣಿಧಣಿಗಳು ಸ್ವಾರ್ಥಕ್ಕಾಗಿ ಉತ್ತರ ಕರ್ನಾಟಕದ ಅಭಿವೃದ್ಧಿ ಹೆಸರಿನಲ್ಲಿ ಸರ್ಕಾರವನ್ನೇ ಇಕ್ಕಟ್ಟಿಗೆ ಸಿಲುಕಿಸಿದರು.

ಉತ್ತರ ಕರ್ನಾಟಕ ಅಭಿವೃದ್ದಿಗೆ ನಾವು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದರೆ ಮುಖ್ಯಮಂತ್ರಿಗಳು ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಆರೋಪಿಸಿ, ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಆಗಲೇಬೇಕು ಎಂದು ಒತ್ತಾಯಿಸಿ 70ಕ್ಕೂ ಅಧಿಕ ಶಾಸಕರನ್ನು ರಾಜ್ಯದ ವಿವಿಧ ರೆಸಾರ್ಟ್‌ಗಳಲ್ಲಿ ಇಟ್ಟು ಬ್ಲ್ಯಾಕ್‌ಮೇಲ್ ತಂತ್ರಕ್ಕೆ ಇಳಿಯುವ ಮೂಲಕ ಪ್ರಸ್ತುತ ರಾಜಕಾರಣ ಜನರಲ್ಲಿಯೇ ವಾಕರಿಕೆ ಹುಟ್ಟಿಸುವಂತೆ ಮಾಡಿತ್ತು.

ಭಿನ್ನಮತ ಶಮನಕ್ಕೆ ತಾಯಿ ಸುಷ್ಮಾ ನೇತೃತ್ವ: ಅಂತೂ ಬಿಜೆಪಿ ಮನೆಯಲ್ಲಿ ಕಾಣಿಸಿಕೊಂಡ ಭಿನ್ನಮತ ಶಮನಕ್ಕೆ ಹೈಕಮಾಂಡ್ ವರಿಷ್ಠರು ಉದ್ಯಾನನಗರಿಗೆ ಆಗಮಿಸಿ ಬಹಳಷ್ಟು ಕಸರತ್ತು ನಡೆಸಿದರಾದರು ಕೂಡ ಅದು ಯಾವುದೇ ಪರಿಣಾಮ ಬೀರದಿದ್ದಾಗ.ವಿವಾದದ ಚೆಂಡು ಹೈಕಮಾಂಡ್ ಅಂಗಳಕ್ಕೆ ಬಿದ್ದಿತ್ತು. ನವದೆಹಲಿಯಲ್ಲಿಯೂ ಪಕ್ಷದ ವರಿಷ್ಠರಾದ ರಾಜನಾಥ್ ಸಿಂಗ್, ವೆಂಕಯ್ಯನಾಯ್ಡು, ಅರುಣ್ ಜೇಟ್ಲಿ, ಸುಷ್ಮಾ ಸೇರಿದಂತೆ ಹಲವು ಮುಖಂಡರು ಸಂಧಾನ ನಡೆಸಿದರು ಸಫಲವಾಗಿಲ್ಲ. ಕೊನೆಗೆ ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಮನೆಯಲ್ಲಿ ಗುಪ್ತ ಸಂಧಾನ ನಡೆಯುವ ಮೂಲಕ ಜನಾರ್ದನ ರೆಡ್ಡಿ ಬಂಡಾಯದ ಗುಂಪು ಸದ್ದಿಲ್ಲದೆ ನಗರಕ್ಕೆ ಆಗಮಿಸಿತ್ತು. ಅದರ ಫಲಿತಾಂಶ ಎಂಬಂತೆ ಗ್ರಾಮೀಣಾಭಿವೃದ್ಧಿ ಸಚಿವೆ ಶೋಭಾ ಕರಂದ್ಲಾಜೆ ತಲೆದಂಡ. ಸಿಎಂ ಆಪ್ತ ಕಾರ್ಯದರ್ಶಿ ವಿ.ಪಿ.ಬಳಿಗಾರ್ ಎತ್ತಂಗಡಿ. ಒಟ್ಟಾರೆ ರೆಡ್ಡಿ ಬ್ರದರ್ಸ್‌ಗೆ 'ತಾಯಿ'ಯಂತಿರುವ ಸುಷ್ಮಾ ಅವರು ವಿವಾದ ಬಗೆಹರಿಕೆಯಲ್ಲಿ ಕಿಂಗ್ ಮೇಕರ್ ಆಗಿ ಹೊರಹೊಮ್ಮಿದ್ದರು.

ಖಳನಾಯಕರಾದ ರೆಡ್ಡಿ ಬ್ರದರ್ಸ್: ಗಣಿ ಮತ್ತು ಅರಣ್ಯ ಉತ್ಪನ್ನ ಸಾಗಿಸುವ ಪ್ರತಿ ಲಾರಿಗೆ 500ರಿಂದ 1ಸಾವಿರ ರೂಪಾಯಿ ಶುಲ್ಕ ವಿಧಿಸುವ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡಿತ್ತು. ಈ ನಿರ್ಧಾರವೇ ಗಣಿಧಣಿಗಳ(ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ, ಕಂದಾಯ ಸಚಿವ ಕರುಣಾಕರ ರೆಡ್ಡಿ) ಕೆಂಗಣ್ಣಿಗೆ ಗುರಿಯಾಗಿ ರಾಜ್ಯ ರಾಜಕಾರಣದಲ್ಲಿ ಭಿನ್ನಮತ ಸ್ಫೋಟಿಸಲು ಕಾರಣವಾದ ಪ್ರಮುಖವಾದ ಅಂಶ. ಒಂದೆಡೆ ಪ್ರವಾಹದಿಂದ ಜನ ಕಂಗಾಲಾಗಿದ್ದರೂ ಬಂಡಾಯದ ಬಾವುಟ ಹಾರಿಸಿ ರೆಸಾರ್ಟ್ ರಾಜಕಾರಣ ನಡೆಸಿ, ತಮ್ಮದು ಉತ್ತರ ಕರ್ನಾಟಕ ಅಭಿವೃದ್ಧಿಗಾಗಿ ಹೋರಾಟ ಎಂದು ಬಣ್ಣ ಹಚ್ಚಿ ಗೋಸುಂಬೆಯಂತೆ ವರ್ತಿಸಿದ್ದರು. ಅಲ್ಲದೇ ರಾಜ್ಯದ ವಿವಾದ ರಾಷ್ಟ್ರ ಮಟ್ಟದಲ್ಲಿಯೇ ತೀವ್ರ ಚರ್ಚೆಗೀಡಾಗುವಂತೆ ಮಾಡಿದ ರೆಡ್ಡಿ ಬ್ರದರ್ಸ್ ಖಳನಾಯಕರಾಗಿ ಬಿಂಬಿತರಾದರು.

NRB
ತಿರುವಳ್ಳುವರ್ ಪ್ರತಿಮೆ ಸ್ಥಾಪನೆ: ಸತತ ಹದಿನೆಂಟು ವರ್ಷಗಳ ವಿವಾದದ ಬಳಿಕ ತಮಿಳು ಕವಿ, ದಾರ್ಶನಿಕ ತಿರುವಳ್ಳುವರ್ ಪ್ರತಿಮೆಯನ್ನು ಆಗಸ್ಟ್ 9ರಂದು ಉದ್ಯಾನಗರಿಯ ಹಲಸೂರಿನಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕರುಣಾನಿಧಿ ರಿಮೋಟ್ ಮೂಲಕ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಿದರು. ರಾಜಧಾನಿಯಲ್ಲಿ ತಿರುವಳ್ಳುವರ್ ಪ್ರತಿಮೆ ಸ್ಥಾಪನೆ ವಿರೋಧಿಸಿ ಕನ್ನಡ ಪರ ಸಂಘಟನೆಗಳು ಆರಂಭದಿಂದಲೂ ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದವು. ಆದರೆ ಅವೆಲ್ಲ ವಿರೋಧದ ನಡುವೆಯೇ ಮುಖ್ಯಮಂತ್ರಿ ಯಡಿಯೂರಪ್ಪ ಪ್ರತಿಮೆ ಸ್ಥಾಪನೆಗೆ ಮುಂದಾಗಿ ಹಲವು ವರ್ಷಗಳ ವಿವಾದಕ್ಕೆ ಅಂತ್ಯ ಹಾಡಿದ್ದರು.

NRB
ಸಂಗೀತದಲ್ಲಿ ಲೀನವಾದ ಗಾಯನಗಂಗೆ ಗಂಗೂಬಾಯಿ: ಹಿಂದೂಸ್ತಾನ ಶಾಸ್ತ್ರೀಯ ಸಂಗೀತದ ದಿಗ್ಗಜೆ, ಪದ್ಮಭೂಷಣ ಡಾ.ಗಂಗೂಬಾಯಿ ಹಾನಗಲ್(96)ಅವರು ಹುಬ್ಬಳ್ಳಿಯ ಲೈಫ್‌ಲೈನ್ ಆಸ್ಪತ್ರೆಯಲ್ಲಿ ಜುಲೈ 21ರಂದು ಬೆಳಿಗ್ಗೆ ವಿಧಿವಶರಾದರು. ಕಿರಾಣಾ ಘರಾಣದಲ್ಲಿ ಹೆಸರುವಾಸಿಯಾದ ಗಂಗೂಬಾಯಿ ಅವರು ಹಿಂದೂಸ್ತಾನಿ ಸಂಗೀತದ ಅಧ್ವರ್ಯು ಆಗಿದ್ದರು. ಗಾನವಿದುಷಿ ಗಂಗೂಬಾಯಿ ಹಾನಗಲ್ ಅವರ ಅಂತ್ಯಕ್ರಿಯೆಯನ್ನು ಜು.22ರಂದು ಸಕಲ ಸರ್ಕಾರಿ ಗೌರವಾದರಗಳೊಂದಿಗೆ ಹುಬ್ಬಳ್ಳಿ ನೃಪತುಂಗ ಬೆಟ್ಟದ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಗುರುಕುಲದಲ್ಲಿ ನಡೆಸಲಾಯಿತು.

ರಾಜ್ಯದ ನೂತನ ರಾಜ್ಯಪಾಲರಾಗಿ ಭಾರದ್ವಾಜ್: ರಾಜ್ಯದ ನೂತನ ರಾಜ್ಯಪಾಲರಾಗಿ ಕೇಂದ್ರ ಮಾಜಿ ಸಚಿವ ಎಚ್.ಆರ್.ಭಾರದ್ವಾಜ್ ಅವರು ಜೂನ್ 29ರಂದು 16ನೇ ರಾಜ್ಯಪಾಲರಾಗಿ ಪ್ರಮಾಣವಚನ ಸ್ವೀಕರಿಸಿದ್ದರು.

ಚೆನ್ನೈಯಲ್ಲಿ ಸರ್ವಜ್ಞ ಪ್ರತಿಮೆ ಅನಾವರಣ: ಸಂತ ಕವಿ ಸರ್ವಜ್ಞ ಪ್ರತಿಮೆ ಚೆನ್ನೈನ ಆಯನಾವರಂನಲ್ಲಿ ಆಗಸ್ಟ್ 13ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಅನಾವರಣಗೊಳಿಸಿದ್ದರು.

NRB
ಎಚ್‌1ಎನ್‌1 ಮಹಾಮಾರಿ: ಜಾಗತಿಕವಾಗಿ ಯಮಸ್ವರೂಪಿಯಾಗಿ ಕಾಣಿಸಿಕೊಂಡಿದ್ದ ಎಚ್‌1ಎನ್‌1 ಸೋಂಕು ಮಹಾಮಾರಿ ಕರ್ನಾಟಕದಲ್ಲಿಯೂ ಅಟ್ಟಹಾಸಗೈಯುವ ಮೂಲಕ ಸುಮಾರು ನೂರು ಮಂದಿ ಬಲಿಯಾಗಿದ್ದರು. ರಾಜ್ಯದಲ್ಲಿ ಹಂದಿಜ್ವರದಿಂದ ಜನ ಸಾವನ್ನಪ್ಪುತ್ತಿದ್ದರೂ ಕೂಡ ಆರೋಗ್ಯ ಸಚಿವ ಶ್ರೀರಾಮುಲು ಬೇಜವಾಬ್ದಾರಿ ವರ್ತನೆ ಸಾಕಷ್ಟು ವಿವಾದ ಹುಟ್ಟುಹಾಕಿತ್ತು.

ಉಪಚುನಾವಣೆ-ತಿರಸ್ಕೃತಗೊಂಡ ಆಪರೇಶನ್ ಕಮಲ: ರಾಜ್ಯದ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಈ ಬಾರಿ ರಾಜ್ಯದ ಮತದಾರರು ಆಪರೇಶನ್ ಕಮಲ ತಿರಸ್ಕರಿಸಿದ್ದು ಪ್ರಮುಖವಾಗಿತ್ತು. ಐದು ಕ್ಷೇತ್ರಗಳಲ್ಲಿ ಎರಡು ಬಿಜೆಪಿ, ಎರಡು ಜೆಡಿಎಸ್ ಪಾಲಾಗಿದ್ದರೆ, ಕಾಂಗ್ರೆಸ್ 1ಸ್ಥಾನ ಗೆಲ್ಲುವ ಮೂಲಕ ತೀವ್ರ ಮುಖಭಂಗ ಅನುಭವಿಸಿತ್ತು. ಅಲ್ಲದೇ ಗೆಲುವಿನ ಕುದುರೆ ಎಂದೇ ಬಿಂಬಿತವಾಗಿದ್ದ ಸೋಮಣ್ಣ ಸೋಲು ಬಿಜೆಪಿಗೆ ಅನಿರೀಕ್ಷಿತ ಆಘಾತ ತಂದಿತ್ತು.

ರಾಜ್ಯಕ್ಕೆ ಒಲಿದ ಮಂತ್ರಿ ಪಟ್ಟ: ಏಪ್ರಿಲ್ ತಿಂಗಳಲ್ಲಿ ರಾಜ್ಯದಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ವೀರಪ್ಪ ಮೊಯಿಲಿ, ಧರಂಸಿಂಗ್, ಕೆ.ಎಚ್.ಮುನಿಯಪ್ಪ, ಮಲ್ಲಿಕಾರ್ಜುನ ಖರ್ಗೆ ಗೆಲುವಿನ ಬಾವುಟ ಹಾರಿಸಿದ್ದರು. ಈ ಬಾರಿ ಅದೃಷ್ಟ ಎಂಬಂತೆ ಕೇಂದ್ರ ಸರ್ಕಾರ ಎಸ್.ಎಂ.ಕೃಷ್ಣ ಅವರನ್ನು ವಿದೇಶಾಂಗ ಖಾತೆ ಸಚಿವರನ್ನಾಗಿ, ವೀರಪ್ಪ ಮೊಯಿಲಿಗೆ ಕಾನೂನು ಸಚಿವ, ಖರ್ಗೆಗೆ ಕಾರ್ಮಿಕ ಖಾತೆ ಹಾಗೂ ಕೆ.ಎಚ್.ಮುನಿಯಪ್ಪಗೆ ರೈಲ್ವೆ ಖಾತೆ ರಾಜ್ಯ ಸಚಿವರನ್ನಾಗಿ ಮಾಡಿತ್ತು. ಈ ಚುನಾವಣೆಯಲ್ಲಿ ಘಟಾನುಘಟಿಗಳಾದ ಜನಾರ್ದನ ಪೂಜಾರಿ, ಎಸ್.ಬಂಗಾರಪ್ಪ, ಅಂಬರೀಶ್ ಸೋಲಿನ ರುಚಿ ಉಂಡಿದ್ದರು.

ಇನ್ನುಳಿದಂತೆ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಆಗ್ರಹ, ಭ್ರಷ್ಟರ ವಿರುದ್ಧ ಮುಂದುವರಿದ ಲೋಕಾಯುಕ್ತ ಭೇಟೆ, ಇಸ್ಕಾನ್‌ನಿಂದ ನ್ಯಾಯಮೂರ್ತಿಗಳಿಗೆ ಬ್ಲ್ಯಾಕ್‌ಮೇಲ್ ಪತ್ರ, ಅಕ್ಷಯಪಾತ್ರೆ ಯೋಜನೆ ಹಗರಣ, ಚರ್ಚ್ ದಾಳಿ, 18ಯುವತಿಯರನ್ನು ಕೊಂದ ಪಾತಕಿ ಆನಂದ್ ಸೆರೆ, ಬೆಂಗಳೂರು ಸ್ಫೋಟದ ಮಾಸ್ಟರ್ ಮೈಂಡ್ ಆಗಿರುವ ನಜೀರ್ ಬಂಧನ, ಕೈಗಾ ಅಣು ವಿದ್ಯುತ್ ಸ್ಥಾವರದ ವಾಟರ್ ಕೂಲರ್‌ನಲ್ಲಿ ಅಣು ವಿಕಿರಣ ಸೋರಿಕೆ ಪ್ರಕರಣ ಸೇರಿದಂತೆ ಹಲವು ಪ್ರಮುಖ ಘಟನೆಗಳು ನಡೆದಿವೆ.

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

Show comments