ಈ ಬಾರಿ ಪ್ರತಿಷ್ಠಿತ ಚಾಂಪಿಯನ್ಸ್ ಟ್ರೋಫಿ ಮತ್ತು ಟ್ವೆಂಟಿ-20 ವಿಶ್ವಕಪ್‌ಗಳಲ್ಲಿ ಹೀನಾಯ ಪ್ರದರ್ಶನ ನೀಡಿದ್ದು ಟೀಮ್ ಇಂಡಿಯಾದ ಬಿಳಿ ಹಾಳೆಯಲ್ಲಿ ಎದ್ದು ಕಾಣುವ ಎರಡು ಕಪ್ಪುಚುಕ್ಕೆಗಳು. ಉಳಿದಂತೆ ಶ್ರೀಲಂಕಾ, ನ್ಯೂಜಿಲೆಂಡ್, ವೆಸ್ಟ್‌ಇಂಡೀಸ್ ವಿರುದ್ಧ ವಿದೇಶಿ ಸರಣಿಗಳಲ್ಲಿ ಜಯ ಸಾಧಿಸಿದ್ದು ಹೆಗ್ಗಳಿಕೆಯಾದರೆ, ವರ್ಷಾಂತ್ಯದ ಟೆಸ್ಟ್ ಸರಣಿಯಲ್ಲಿ ಸಿಂಹಳೀಯರನ್ನು ಮಣಿಸಿ ನಂ.1 ಪಟ್ಟ ಪಡೆದುಕೊಂಡದ್ದು ಹಿರಿಮೆಯೊಳಗೊಂದು ಗರಿಮೆ.
2009 ರಲ್ಲಿ ಭಾರತ ತಾಯ್ನೆಲದಲ್ಲಿ, ವಿದೇಶದಲ್ಲಿ ಆಡಿದ ಸರಣಿಗಳು ಹಾಗೂ ಪ್ರಮುಖ ಟೂರ್ನಮೆಂಟ್‌ಗಳಲ್ಲಿ ಕಂಡ ಸೋಲು-ಗೆಲುವುಗಳನ್ನು ಇಲ್ಲಿಮೆಲುಕು ಹಾಕುವ ಪ್ರಯತ್ನ ಮಾಡಲಾಗಿದೆ.
PTI
ಶ್ರೀಲಂಕಾ ಪ್ರವಾಸ.. 2008 ರ ನವೆಂಬರ್ ತಿಂಗಳಲ್ಲಿ ಮುಂಬೈ ಉಗ್ರರ ದಾಳಿಯ ಹಿನ್ನಲೆಯಲ್ಲಿ ರದ್ದಾದ ಪಾಕಿಸ್ತಾನ ಪ್ರವಾಸಕ್ಕೆ ಭಾರತ ಪ್ರಾಯಶ್ಚಿತ ಕಂಡುಕೊಂಡದ್ದು ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ.
ಜನವರಿ 28ರಿಂದ ಫೆಬ್ರವರಿ 10ರವರೆಗಿನ ಸರಣಿಗಾಗಿ ದ್ವೀಪರಾಷ್ಟ್ರಕ್ಕೆ ತುರ್ತು ಪ್ರವಾಸ ಹೊರಟ ಭಾರತ ಐದು ಏಕದಿನ ಪಂದ್ಯಗಳನ್ನಾಡಿ ನಾಲ್ಕನ್ನು ಗೆದ್ದಕೊಂಡಿತ್ತು. ಅಲ್ಲದೆ ಇದ್ದ ಏಕೈಕ ಟ್ವಿಂಟಿಯನ್ನೂ ವಶಪಡಿಸಿಕೊಂಡು ತವರಿಗೆ ವಾಪಸಾಗಿತ್ತು.
ನ್ಯೂಜಿಲೆಂಡ್ ಪ್ರವಾಸ... ಈ ಹೊತ್ತಿಗೆ ಆತ್ಮವಿಶ್ವಾಸದಿಂದ ತುಂಬಿ ತುಳುಕುತ್ತಿದ್ದ ಭಾರತ ಕ್ರಿಕೆಟ್ ತಂಡವು ಕಿವೀಸರ ನಾಡಿನಲ್ಲೂ ಮಿಂಚು ಹರಿಸಿತ್ತು. ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು 1-0 ಅಂತರದಿಂದ ಗೆದ್ದುಕೊಳ್ಳುವ ಮೂಲಕ 41 ವರ್ಷಗಳ ನಂತರ ನ್ಯೂಜಿಲೆಂಡ್‌ನಲ್ಲಿ ಸರಣಿ ಗೆದ್ದ ಇತಿಹಾಸ ನಿರ್ಮಿಸಿ ಬೀಗಿತು.
1968 ರಲ್ಲಿ ಮನ್ಸೂರ್ ಆಲಿ ಖಾನ್ ಪಟೌಡಿ ನಾಯಕರಾಗಿದ್ದಾಗ ನ್ಯೂಜಿಲೆಂಡ್ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದ ಬಳಿಕ ಭಾರತಕ್ಕೆ ಅದೇ ಸಾಧನೆಯನ್ನು ಪುನರಾವರ್ತನೆ ಮಾಡಲು ಸಾಧ್ಯವಾಗಿರಲಿಲ್ಲ. ಇದರಿಂದಾಗಿ ಧೋನಿ ಪಡೆಗೆ ಭಾರೀ ಪ್ರಶಂಸೆಯನ್ನು ಕ್ರೀಡಾಭಿಮಾನಿಗಳು ಸುರಿಸಿದ್ದರು.
ಪೆಬ್ರವರಿ 25ರಿಂದ ಏಪ್ರಿಲ್ 7ರವರೆಗಿನ ಈ ಪ್ರವಾಸದ ಆರಂಭದಲ್ಲಿ ನಡೆದ ಎರಡೂ ಟ್ವೆಂಟಿ-20ಗಳನ್ನು ಭಾರತ ಕಳೆದುಕೊಂಡರೂ ಬಳಿಕ ನಡೆದ ಐದು ಏಕದಿನ ಪಂದ್ಯಗಳ ಸರಣಿಯನ್ನು 3-1ರಿಂದ ಗೆದ್ದುಕೊಂಡು ಸಮಾಧಾನಪಟ್ಟುಕೊಂಡಿತ್ತು.
ಇದರೊಂದಿಗೆ ನ್ಯೂಜಿಲೆಂಡ್ ವಿರುದ್ಧ ಅವರದೇ ನೆಲದಲ್ಲಿ ಏಕದಿನ ಮತ್ತು ಟೆಸ್ಟ್ ಸರಣಿಯನ್ನು ಒಂದೇ ಪ್ರವಾಸದ ಸಂದರ್ಭದಲ್ಲಿ ಗೆದ್ದ ಮೊತ್ತ ಮೊದಲ ಭಾರತೀಯ ತಂಡವೆಂಬ ಕೀರ್ತಿಯೂ ಧೋನಿ ಪಾಳಯಕ್ಕೆ ದಕ್ಕಿತ್ತು.
PTI
ಮಗುಚಿದ ಚಾಂಪಿಯನ್ನರು... ಐಪಿಎಲ್‌ನಲ್ಲಿ ಬಸವಳಿದು ಇಂಗ್ಲೆಂಡ್ ಪ್ರಯಾಣ ಬೆಳೆಸಿದ್ದ ಹಾಲಿ ಚಾಂಪಿಯನ್ ಭಾರತ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಎಲ್ಲವನ್ನೂ ಕಳೆದುಕೊಂಡು ವಾಪಸಾದದ್ದು ಈ ಬಾರಿ ಅಭಿಮಾನಿಗಳ ತೀರಾ ನಿರಾಸೆಗೆ ಕಾರಣವಾಯಿತು. ಸೆಹ್ವಾಗ್ ಗಾಯಾಳುವಾಗಿ ವಿಶ್ವಕಪ್ ಆರಂಭಕ್ಕೂ ಮೊದಲು ತವರಿಗೆ ಮರಳಿದ್ದು ಭಾರತಕ್ಕೆ ಸಿಕ್ಕಿದ ಮೊದಲ ಹೊಡೆತ.
ಜೂನ್ 6ರಿಂದ 21ರವರೆಗೆ ಆಂಗ್ಲರ ನಾಡಿನಲ್ಲಿನ ಕ್ರಿಕೆಟ್ ಹಬ್ಬದ ಗುಂಪು ಹಂತದಲ್ಲಿ ಆಡಿದ ಭಾರತ ಎರಡು ಪಂದ್ಯಗಳಲ್ಲಿ ದುರ್ಬಲ ಐರ್ಲೆಂಡ್ ಮತ್ತು ಬಾಂಗ್ಲಾದೇಶಗಳ ವಿರುದ್ಧ ಜಯಗಳಿಸಿತ್ತು. ಆದರೆ ಸೂಪರ್ ಎಂಟರ ಮೂರೂ ಪಂದ್ಯಗಳಲ್ಲಿ ಶೂನ್ಯ ಸಂಪಾದಿಸಿ ಹೀನಾಯವಾಗಿ ಹೊರ ಬಿತ್ತು. ಇಲ್ಲಿ ಪಾಕಿಸ್ತಾನ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದು ಈಗ ಇತಿಹಾಸ.
ಉದ್ಘಾಟನಾ ಆವೃತ್ತಿಯನ್ನು ಗೆದ್ದುಕೊಂಡಿದ್ದಾಗ ಎತ್ತಿ ಆಡಿಸಿದ್ದ ಅಭಿಮಾನಿಗಳು ಭಾರತದ ಹೀನಾಯ ಸೋಲನ್ನು ಸಹಿಸದೆ ತಮ್ಮ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ತವರಿನಲ್ಲೇ ಪ್ರತಿಕೃತಿ ದಹಿಸಿದ ಮೇಲೆ ಕ್ರೀಡಾಭಿಮಾನಿಗಳ ಕ್ಷಮೆಯನ್ನೂ ಧೋನಿ ಕೋರಬೇಕಾಯಿತು.
ವೆಸ್ಟ್‌ಇಂಡೀಸ್ ಪ್ರವಾಸ... ಟ್ವೆಂಟಿ-20 ವಿಶ್ವಕಪ್ ಸೋಲಿನೊಂದಿಗೆ ಕಂಗಾಲಾಗಿದ್ದ ಭಾರತ ಬೆನ್ನಿಗೆ (ಜೂನ್ 26-ಜುಲೈ 5) ವೆಸ್ಟ್‌ಇಂಡೀಸ್ ನಾಲ್ಕು ಪಂದ್ಯಗಳ ಏಕದಿನ ಸರಣಿಯನ್ನು 2-1ರಿಂದ ವಶಪಡಿಸಿಕೊಂಡು ನೋವಿಗೆ ಒಂದಿಷ್ಟು ಸಮಾಧಾನ ತಂದುಕೊಂಡಿತು.
ತವರಿಗೆ ಮರಳುವಾಗ ಆಟಗಾರರಲ್ಲಿ ಕೊಂಚ ಆತ್ಮವಿಶ್ವಾಸ ಇದರಿಂದಾಗಿ ಹೆಚ್ಚಿತ್ತು. ಆಶಿಶ್ ನೆಹ್ರಾ ಮರು ಜೀವ ಪಡೆದುಕೊಂಡದ್ದು ಕೂಡ ಇದೇ ಸರಣಿಯಲ್ಲಿ. ಧೋನಿ ಮತ್ತು ಯುವರಾಜ್ ಈ ಸರಣಿಯಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು.
ಭಾರತ ಕೆರೆಬಿಯನ್ ನೆಲದಲ್ಲಿ ಎರಡನೇ ಬಾರಿ ಸರಣಿ ವಶಪಡಿಸಿಕೊಂಡ ಹೆಮ್ಮೆ ಧೋನಿ ಪಡೆಗಿಲ್ಲಿ ಲಭಿಸಿತ್ತು. ಈ ಮೊದಲು ಸೌರವ್ ಗಂಗೂಲಿ ನೇತೃತ್ವದಲ್ಲಿ ಭಾರತ 2002ರಲ್ಲಿ ವಿಂಡೀಸ್ ಸರಣಿ ಗೆದ್ದುಕೊಂಡಿತ್ತು.
ಈ ಸರಣಿ ಗೆಲ್ಲುವುದರೊಂದಿಗೆ ಸತತ ಐದು ಏಕದಿನ ಸರಣಿಗಳಲ್ಲಿ ವಿಜಯಿಯೆನಿಸಿಕೊಂಡಿತ್ತು ಟೀಮ್ ಇಂಡಿಯಾ.
PTI
ತ್ರಿಕೋನ ಸರಣಿಯೂ ವಶ... ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವ ಅವಕಾಶವನ್ನು ಪಡೆದಿದ್ದ ಭಾರತವು ಶ್ರೀಲಂಕಾದಲ್ಲಿ ನಡೆದ ಕಾಂಪ್ಯಾಕ್ ತ್ರಿಕೋನ ಏಕದಿನ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿತ್ತು.
ಸೆಪ್ಟೆಂಬರ್ 8ರಿಂದ 14ರವರೆಗೆ ನಡೆದ ತನ್ನ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಗೆಲುವು ಸಾಧಿಸಿತ್ತು. ಎರಡನೇ ಪಂದ್ಯದಲ್ಲಿ ಲಂಕಾ ವಿರುದ್ಧ ಸೋಲುಂಡರೂ ಫೈನಲ್‌ನಲ್ಲಿ ದ್ವೀಪರಾಷ್ಟ್ರವನ್ನು ಮಣಿಸಿ ಟ್ರೋಫಿ ಎತ್ತಿತ್ತು.
ಜಹೀರ್ ಮತ್ತು ಸೆಹ್ವಾಗ್ ಗಾಯಾಳುಗಳಾಗಿದ್ದ ಕಾರಣ ತ್ರಿಕೋನ ಸರಣಿ ಮತ್ತು ಚಾಂಪಿಯನ್ಸ್ ಟ್ರೋಫಿ ತಂಡಕ್ಕೆ ರಾಹುಲ್ ದ್ರಾವಿಡ್ ಆಯ್ಕೆಯಾಗಿದ್ದರು. ಆ ಮೂಲಕ ಎರಡು ವರ್ಷಗಳ ಬಳಿಕ ಮತ್ತೆ ಏಕದಿನ ಪಂದ್ಯವನ್ನಾಡುವ ಅವಕಾಶವನ್ನು ಬೆಂಗಳೂರಿಗ ಪಡೆದುಕೊಂಡರೂ ಅದು ಬಹುಕಾಲ ಮುಂದುವರಿಯಲಿಲ್ಲ.
ಚಾಂಪಿಯನ್ಸ್ ಟ್ರೋಫಿ- ಮತ್ತದೇ ಹಳೆ ಕಥೆ... ಸೆಪ್ಟೆಂಬರ್ 22ರಿಂದ ಅಕ್ಟೋಬರ್ 5ರವರೆಗೆ ದಕ್ಷಿಣ ಆಫ್ರಿಕಾದಲ್ಲಿ ನಡೆದ ಪ್ರತಿಷ್ಠಿತ ಚಾಂಪಿಯನ್ಸ್ ಟ್ರೋಫಿಯಲ್ಲಿ ಈ ಬಾರಿ ಕೂಡ ಭಾರತಕ್ಕೆ ಹೆಚ್ಚಿನ ಸಾಧನೆ ಮೆರೆಯಲಾಗದೆ ಬರಿಗೈಯಲ್ಲಿ ವಾಪಸಾಯಿತು.
ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಬೃಹತ್ ಅಂತರದ ಸೋಲುಂಡ ಭಾರತ ಗುಂಪು ಹಂತದಿಂದಲೇ ಹೊರ ಬಿದ್ದಿತ್ತು. ಆಸ್ಟ್ರೇಲಿಯಾ ಚಾಂಪಿಯನ್‌ಶಿಪ್ ಪಡೆದ ಈ ಟೂರ್ನಮೆಂಟ್‌ನಲ್ಲಿ ಭಾರತದ ಅಗ್ರ ದಾಂಡಿಗರು ವೈಫಲ್ಯ ಕಂಡಿದ್ದರು.
ಸೆಹ್ವಾಗ್, ಯುವರಾಜ್ ಮತ್ತು ವೇಗಿ ಜಹೀರ್ ಖಾನ್ ಅನುಪಸ್ಥಿತಿಯೂ ಭಾರತಕ್ಕೆ ಪ್ರಮುಖ ಹಿನ್ನಡೆಯಾಗಿತ್ತು. ಎರಡು ವರ್ಷಗಳ ನಂತರ ಏಕದಿನ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದ ದ್ರಾವಿಡ್, ಇದರ ಬಳಿಕ ಆಡುವ ಅವಕಾಶವನ್ನು ಪಡೆಯಲೇ ಇಲ್ಲ.
PTI
ಆಸ್ಟ್ರೇಲಿಯಾ ಸರಣಿಯಲ್ಲಿ ಮುಖಭಂಗ... ಬಹು ನಿರೀಕ್ಷೆ ಹುಟ್ಟಿಸಿದ್ದ ಈ ಬಾರಿಯ ಆಸ್ಟ್ರೇಲಿಯಾ ವಿರುದ್ಧದ ಏಳು ಪಂದ್ಯಗಳ ಏಕದಿನ ಸರಣಿಯನ್ನು ಭಾರತ ತಾಯ್ನೆಲದಲ್ಲಿ 4-2ರಿಂದ ಸೋತಿತು.
ಅಕ್ಟೋಬರ್ 25ರಿಂದ ನವೆಂಬರ್ 11ರವರೆಗೆ ನಡೆದ ಈ ಸರಣಿಯಲ್ಲಿ ಆಸ್ಟ್ರೇಲಿಯಾ ಪ್ರಮುಖ ಆಟಗಾರರನ್ನು ಗಾಯಾಳುಗಳಾಗಿದ್ದ ಕಾರಣ ತವರಿನಲ್ಲೇ ಬಿಟ್ಟು ಬಂದಿತ್ತು. ಭಾರತಕ್ಕೆ ಬಂದ ನಂತರವೂ ಕಾಂಗರೂಗಳ ಗಾಯಾಳು ಸಮಸ್ಯೆ ಮುಂದುವರಿಯಿತು. ಆದರೂ ತಾವು ಚಾಂಪಿಯನ್ನರು ಎಂಬುದನ್ನು ಭಾರತಕ್ಕೆ ಪ್ರತೀ ಪಂದ್ಯದಲ್ಲೂ ನೆನಪಿಸಿದ್ದು ವಿಶೇಷವಾಗಿತ್ತು.
ಬ್ಯಾಟಿಂಗ್ ವಿಭಾಗದಲ್ಲಿ ಸೆಹ್ವಾಗ್ ಮತ್ತು ಗೌತಮ್ ಗಂಭೀರ್, ಬೌಲಿಂಗ್‌ನಲ್ಲಿ ಇಶಾಂತ್ ಶರ್ಮಾ ಮತ್ತು ಹರಭಜನ್ ಸಿಂಗ್ ಸಂಪೂರ್ಣ ವಿಫಲರಾಗಿದ್ದರು. ಧೋನಿ ಮತ್ತು ಸಚಿನ್ ಸರಣಿಯುದ್ದಕ್ಕೂ ಅತ್ಯುತ್ತಮ ಪ್ರದರ್ಶನ ನೀಡಿದರೂ ತವರಿನ ಸರಣಿಯನ್ನು ವಶಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ವರ್ಷಾಂತ್ಯದ ಕೊನೆಯ ಸರಣಿ... ಆಸೀಸ್ ಸರಣಿಯಲ್ಲಿ ಜಜ್ಜಿಸಿಕೊಂಡ ಭಾರತಕ್ಕೆ ಲಂಕಾ ವಿರುದ್ಧದ ಟೆಸ್ಟ್ ಸರಣಿ ಟಾನಿಕ್ ಸಿಕ್ಕಂತಾಗಿದೆ. ಮೂರು ಟೆಸ್ಟ್ ಪಂದ್ಯಗಳ ಸರಣಿಯನ್ನು 2-0 ಅಂತರದಿಂದ ಜಯಿಸಿದ ಭಾರತ ಮೊತ್ತ ಮೊದಲ ಬಾರಿ ನಂ.1 ಪಟ್ಟಕ್ಕೇರಿದ ಸಾಧನೆಯನ್ನೂ ಮಾಡಿತು.
ಸೆಹ್ವಾಗ್, ದ್ರಾವಿಡ್, ಗಂಭೀರ್, ಸಚಿನ್, ಧೋನಿ ಹೀಗೆ ಪ್ರತಿಯೊಬ್ಬರೂ ಈ ಸರಣಿಯಲ್ಲಿ ಮಿಂಚಿದ್ದರು. ಮೊದಲ ಟೆಸ್ಟ್‌ನಲ್ಲಿ ಪ್ರವಾಸಿ ಲಂಕಾ ಬೃಹತ್ ಮೊತ್ತ ಪೇರಿಸಿದ ಹೊರತಾಗಿಯೂ ಭಾರತ ಸೋಲನ್ನು ತಪ್ಪಿಸಿಕೊಂಡರೆ, ಎರಡನೇ ಮತ್ತು ಮೂರನೇ ಟೆಸ್ಟನ್ನು ಆತಿಥೇಯರು ಗೆದ್ದುಕೊಂಡರು. ಸೆಹ್ವಾಗ್ ಅಂತೂ ದ್ವಿಶತಕ ಪೂರೈಸಿ ಲಂಕಾ ಬೌಲರುಗಳ ಬೆಂಡೆತ್ತಿದ್ದರು.
ಆ ಮೂಲಕ ಲಂಕಾಕ್ಕೆ ಭಾರತದಲ್ಲಿ ಟೆಸ್ಟ್ ಸರಣಿ ಗೆಲ್ಲುವ ಕನಸು ಈ ಬಾರಿಯೂ ಈಡೇರದಂತೆ ಮಾಡುವಲ್ಲಿ ಧೋನಿ ಪಾಳಯ ಯಶಸ್ವಿಯಾಯಿತು.
ಬಳಿಕ ನಡೆದ ಎರಡು ಟ್ವೆಂಟಿ-20 ಪಂದ್ಯಗಳ ಸರಣಿಯು 1-1ರಲ್ಲಿ ಡ್ರಾಗೊಂಡರೆ, ಐದು ಪಂದ್ಯಗಳ ಏಕದಿನ ಸರಣಿಯನ್ನು ಭಾರತ 3-1ರ ಅಂತರದಿಂದ ಗೆದ್ದುಕೊಂಡಿತು. ಕೊನೆಯ ಪಂದ್ಯ ಕಳಪೆ ಪಿಚ್ ಕಾರಣದಿಂದಾಗಿ ರದ್ದುಗೊಂಡಿತ್ತು.