Webdunia - Bharat's app for daily news and videos

Install App

ಟಾಟಾದ ಸಣ್ಣಕಾರಿನ ದೊಡ್ಡ ಕನಸು

Webdunia
ರಾಜೇಶ್ ಪಾಟೀಲ್
ನ್ಯಾನೋ ಕಾರೆಂಬ ಪುಟ್ಟ ಕಾರಿನ ಪರಿಕಲ್ಪನೆ ಅತಿ ದೊಡ್ಡ ಉದ್ಯಮಿ ರತನ್ ಟಾಟಾ ಅವರ ಕನಸಿನ ಕೂಸು. ಆದರೆ, ಮಧ್ಯಮ ವರ್ಗದವರ ಆಶಾಕಿರಣವಾಗಿ ಹೊರಹೊಮ್ಮಿದ್ದ ನ್ಯಾನೋ ಕಾರು ರಸ್ತೆಗಿಳಿಯಲು ಉಂಟಾಗಿರುವ ಅಡೆತಡೆಗಳು ಹಲವಾರು.
PTI

ಅಕ್ಟೋಬರ್ 11 ರಂದು ಟಾಟಾ ಮೋಟಾರ್ಸ್ ಮುಖ್ಯಸ್ಥ ರತನ್ ಟಾಟಾ ಕೇವಲ ಒಂದು ಲಕ್ಷ ರೂಪಾಯಿಗಳಿಗೆ ಕಾರು ನೀಡುವುದಾಗಿ ಘೋಷಿಸಿದಾಗ ಭಾರತ ಸೇರಿದಂತೆ ಜಗತ್ತೇ ಅಚ್ಚರಿಯಿಂದ ಬೆಚ್ಚಿತ್ತು. ಕನಸಿನಲ್ಲೂ ಒಂದು ಲಕ್ಷ ರೂಪಾಯಿ ದರದ ಕಾರು ನೀಡಲು ಸಾಧ್ಯವಿಲ್ಲ ಎಂದು ಜಾಗತಿಕ ವಾಹನೋದ್ಯಮ ಟಾಟಾಗೆ ಸವಾಲೆಸೆಯಿತು.

ಸವಾಲನ್ನು ಸ್ವಿಕರಿಸಿದ ಟಾಟಾ ಒಂದು ಲಕ್ಷ ರೂಪಾಯಿ ವೆಚ್ಚದಲ್ಲಿ ನ್ಯಾನೋ ಮಾಡೆಲ್ ಕಾರನ್ನು ಪ್ರದರ್ಶನದಲ್ಲಿ ಬಿಡುಗಡೆಗೊಳಿಸಿದಾಗ ಬೆರಗಿನಿಂದ ನೋಡಿದ ಜಗತ್ತು, ರತನ್ ಟಾಟಾ ಅವರನ್ನು ಹಾಡಿ ಹೊಗಳಿತು. ಪಶ್ಚಿಮ ಬಂಗಾಳವು ವಿಶೇಷ ಆರ್ಥಿಕವಲಯ ಯೋಜನೆಯಡಿ ಸಿಂಗೂರಿನಲ್ಲಿ ಕಾರು ತಯಾರಿಕಾ ಘಟಕಕ್ಕಾಗಿ 800 ಎಕರೆ ಭೂಮಿಯನ್ನು ನೀಡಿತು.

ಸಮರೋಪಾದಿಯಲ್ಲಿ ಘಟಕದ ಕಾರ್ಯವನ್ನು ಟಾಟಾ ಸಂಸ್ಥೆ ಆರಂಭಿಸಿತು. ಆದರೆ, ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷ ಧರಣಿ ಕುಳಿತಿತು. ಘಟಕಕ್ಕಾಗಿ ಕೃಷಿ ಭೂಮಿಯನ್ನು ವಶಪಡಿಸಿಕೊಂಡಿರುವ ಸರಕಾರ ಸೂಕ್ತ ಪರಿಹಾರ ನೀಡಿಲ್ಲ ಎಂದು ಆರೋಪಿಸಿದ ತೃಣಮೂಲ ಕಾಂಗ್ರೆಸ್ ಭೂಮಿಯನ್ನು ಮರಳಿಸುವಂತೆ ಒತ್ತಡ ತಂದಿದ್ದಲ್ಲದೇ ಭಾರಿ ಪ್ರಮಾಣದ ಪ್ರತಿಭಟನೆಯನ್ನು ಆರಂಭಿಸಿತು. ನ್ಯಾನೋ ಕಾರ್ಖಾನೆಯ ಮುಂದೆ ನಡೆಸಿದ ಪ್ರತಿಭಟನಾ ಹಿಂಸಾಚಾರವು ಹಲವಾರು ಜೀವ ಬಲಿತೆಗೆದುಕೊಂಡಿದ್ದು, ಹಲವು ಆತಂಕಗಳನ್ನು ಸೃಷ್ಟಿಸಿತು.

ಪಶ್ಚಿಮ ಬಂಗಾಳ ಸರಕಾರ ಹಾಗೂ ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕಿ ಮಮತಾ ಬ್ಯಾನರ್ಜಿ ನಡುವೆ ಹಲವು ಸುತ್ತಿನ ಮಾತುಕತೆಗಳು ನಡೆದರೂ ಯಾವುದೇ ಪ್ರಯೋಜನವಾಗಲಿಲ್ಲ. ತೃಣ ಮೂಲ ಕಾಂಗ್ರೆಸ್ ನೇತೃತ್ವದ ಭೂಮಿ ಉಚ್ಚಡ್ ಪ್ರತಿರೋಧ್ ಸಮಿತಿ ರಚನೆಯಾಯಿತು. ಆಡಳಿತಾರೂಢ ಕಮ್ಯೂನಿಸ್ಟ್ ಕಾರ್ಯಕರ್ತರು ಮತ್ತು ಭೂಮಿ ಉಚ್ಚಡ್ ಸಮಿತಿಯ ನಡುವೆ ಅಕ್ಷರಶಃ ಕದನವೇ ನಡೆದು ಹೋಯಿತು. ಕೊಲೆ, ಅತ್ಯಾಚಾರ, ಅನಾಚಾರಗಳು ನಡೆದವು. ತತ್ಪರಿಣಾಮ ನ್ಯಾನೋ ಘಟಕದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ತೃಣಮೂಲ ಪಕ್ಷದ ಕಾರ್ಯಕರ್ತರಿಂದ ಬೆದರಿಕೆ, ಹಲ್ಲೆ , ನಿರ್ಬಂಧ ವಿಧಿಸುವಂತಹ ಘಟನೆಗಳು ರತನ್ ಟಾಟಾ ಮನವನ್ನು ವಿಚಲಿತಗೊಳಿಸಿದವು.

ಸಿಂಗೂರಿನಲ್ಲಿರುವ ಟಾಟಾ ಮೋಟಾರ್ಸ್‌ನ ನ್ಯಾನೋ ಸ್ಥಾವರದ ಪ್ರವೇಶವನ್ನು ತೃಣಮೂಲ ಕಾಂಗ್ರೆಸ್ ಪ್ರತಿಭಟನಾಕಾರರು ನಿರ್ಬಂಧಿಸಿ, ನ್ಯಾನೋ ಸ್ಥಾವರದ ಸುತ್ತಲಿನ ಪ್ರದೇಶವನ್ನು ಮಮತಾ ಬ್ಯಾನರ್ಜಿ ಬೆಂಬಲಿಗರು ಸುತ್ತುವರಿದು ನ್ಯಾನೋ ನೌಕರರನ್ನು ಘಟಕದೊಳಗೆ ಪ್ರವೇಶಿಸಲು ಅಡ್ಡಿಯಾದರು. ಹಿಂಸಾಚಾರಕ್ಕೆ ಬೆದರಿದ ನ್ಯಾನೋ ನೌಕರರು ಘಟಕದಿಂದ ದೂರ ಉಳಿದರು.

ಟಾಟಾ ನ್ಯಾನೋ ಕಾರು ಯೋಜನೆಗಾಗಿ ಸ್ವಾಧೀನಪಡಿಸಿಕೊಂಡಿರುವ 400 ಎಕರೆ ಜಮೀನನ್ನು ರೈತರಿಗೆ ಹಿಂತಿರುಗಿಸಲು ಸಾಧ್ಯವಿಲ್ಲದಿದ್ದರೆ, ನ್ಯಾನೋ ಯೋಜನೆ ಸಿಂಗೂರಿನಿಂದ ತೆರಳಲಿ ಎಂದು ತೃಣಮೂಲ ಕಾಂಗ್ರೆಸ್ ನಾಯಕಿ, ಬೆಂಕಿಚೆಂಡು ಮಮತಾ ಬ್ಯಾನರ್ಜಿ ಒತ್ತಡದ ತಂತ್ರ ಅನುಸರಿಸಿದರು.

"400 ಎಕರೆ ಜಮೀನನ್ನು ಹಿಂತಿರುಗಿಸಲು ಸಾಧ್ಯವಿಲ್ಲ. ಒಂದು ವೇಳೆ ಅದನ್ನು ಹಿಂತಿರುಗಿಸಿದಲ್ಲಿ, ಟಾಟಾ ಮೋಟಾರ್ಸ್ ಯೋಜನೆಯು ಸ್ಥಗಿತಗೊಳ್ಳುತ್ತದೆ. ಹಾಗಾಗುವುದು ನನಗೆ ಇಷ್ಟವಿಲ್ಲ" ಎಂಬುದಾಗಿ ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ಮಮತಾ ಹೇಳಿಕೆಗೆ ಪಟ್ಟುಹಿಡಿದರು.

ಇದಕ್ಕೆ ಜಗ್ಗದ ಮಮತಾ, ನ್ಯಾನೋ ಕಾರು ಪ್ರಾರಂಭಗೊಳ್ಳಬೇಕು ಮತ್ತು ಕೃಷಿ ಭೂಮಿ ಉಳಿಯಬೇಕು ಇಲ್ಲವಾದಲ್ಲಿ, ನ್ಯಾನೋ ಸ್ಥಗಿತಗೊಳ್ಳಬೇಕು ಮತ್ತು ಕೃಷಿ ಭೂಮಿ ಉಳಿಯಬೇಕು ಎಂದು ಮಮತಾ ಹಠಹಿಡಿದು ಧರಣಿ ಕುಳಿತರು.

ರೈತರ ಬೆಂಬಲ
ಪ್ರತಿಭಟನೆ ಹಾಗೂ ಹಿಂಸಾಚಾರ ನಿರಂತರವಾಗಿ ಮುಂದುವರಿದರೆ ನ್ಯಾನೊ ಕಾರು ಉತ್ಪಾದಕ ಘಟಕವನ್ನು ಸ್ಥಳಾಂತರಿಸುವುದಾಗಿ ರತನ್ ಟಾಟಾ ಹೇಳಿಕೆ ನೀಡಿದ ನಂತರ ರೈತರು ನ್ಯಾನೋ ಘಟಕವನ್ನು ಸ್ಥಳಾಂತರಿಸುವುದು ಬೇಡ ಎಂದು ಕೋರಿದರು.
PTI

ಕೃಷಿ ಜಮಿನ್ ರಕ್ಷಾ ಸಮಿತಿಯ ಕಾರ್ಯಕರ್ತರು ನ್ಯಾನೊ ಕಾರು ಘಟಕಕ್ಕೆ ಬೆಂಬಲ ಸೂಚಿಸಿದರು. ಘಟಕ ಕಾರ್ಯಾರಂಭ ಮಾಡಿದಲ್ಲಿ ನಮ್ಮ ಸ್ಥಿತಿಗತಿ ಸುಧಾರಿಸುತ್ತದೆ. ಟಾಟಾ ಮೋಟಾರ್ಸ್ ನಿರ್ಗಮಿಸಿದಲ್ಲಿ ಜನತೆಗೆ ನಷ್ಟ ಎಂದು ರೈತ ಮುಖಂಡರು ಹೇಳಿಕೆ ನೀಡಿದರು.

ಮಮತಾ ಗಡವು
ಸೆಪ್ಟೆಂಬರ್ 22 ರಂದು ಸಿಂಗೂರ್‌‌ನ ಟಾಟಾ ನ್ಯಾನೋ ಘಟಕಕ್ಕಾಗಿ ವಶಪಡಿಸಿಕೊಂಡ ಭೂಮಿಯಲ್ಲಿ 400ಎಕರೆ ಭೂಮಿಯನ್ನು ಸೆಪ್ಟೆಂಬರ್ 7ರ ಒಪ್ಪಂದದಂತೆ ರೈತರಿಗೆ ವಾಪಸು ನೀಡಲು ತೃಣಮೂಲ ಕಾಂಗ್ರೆಸ್ ವರಿಷ್ಠೆ ಮಮತಾ ಬ್ಯಾನರ್ಜಿ ಪಶ್ಚಿಮಬಂಗಾಳ ಸರ್ಕಾರಕ್ಕೆ 7ದಿನಗಳ ಅಂತಿಮ ಗಡುವು ನೀಡಿ ಗಡುವಿನೊಳಗೆ ಭೂಮಿಯನ್ನು ಮರಳಿಸದಿದ್ದಲ್ಲಿ ಹೋರಾಟವನ್ನು ಮುಂದುವರಿಸುವುದಾಗಿ ರತನ್ ಟಾಟಾ ಹಾಗೂ ಪಶ್ಚಿಮ ಬಂಗಾಳ ಸರಕಾರಕ್ಕೆ ಎಚ್ಚರಿಕೆ ನೀಡಿದರು.

ಸಿಂಗೂರ್‌ಗೆ ಟಾಟಾ
ಪ್ರತಿದಿನ ನಡೆಯುತ್ತಿರುವ ಹಿಂಸಾಚಾರ ಪ್ರತಿಭಟನೆಗಳಿಂದ ಬೇಸತ್ತ ರತನ್ ಟಾಟಾ ಅಕ್ಟೋಬರ್ 4 ರಂದು 1500 ಕೋಟಿ ವೆಚ್ಚದ ನ್ಯಾನೋ ಘಟಕವನ್ನು ಬೇರೆ ರಾಜ್ಯಕ್ಕೆ ಸ್ಥಳಾಂತರಿಸುವುದಾಗಿ ಘೋಷಿಸಿದರು.

ಟಾಟಾ ಮೋಟಾರ್ಸ್ ಮುಖ್ಯಸ್ಥ ರತನ್ ಟಾಟಾ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಬುದ್ದದೇವ್ ಭಟ್ಟಾಚಾರ್ಜಿ ಅವರ ಮಧ್ಯೆ ನಡೆದ ಮಾತುಕತೆ ವಿಫಲವಾದ ನಂತರ ಕಂಪೆನಿಯ ಉದ್ಯೋಗಿಗಳ ಭದ್ರತೆಗಾಗಿ ಸಿಂಗೂರ್‌ನಿಂದ ನ್ಯಾನೊ ಘಟಕವನ್ನು ಸ್ಥಳಾಂತರಿಸುವ ನಿರ್ಧಾರ ತೆಗೆದುಕೊಂಡಿರುವುದಾಗಿ ಎಂದು ರತನ್ ಟಾಟಾ ಹೇಳಿದರು.

ಟಾಟಾ ಮೋಟಾರ್ಸ್‌ನ ನ್ಯಾನೋ ಸಿಂಗೂರಿಗೆ 'ಟಾಟಾ' ಹೇಳಿರುವ ಸುದ್ದಿ ತಿಳಿದು ಆಕ್ರೋಶಗೊಂಡ, ಸಣ್ಣ ಕಾರು ತಯಾರಿಕಾ ಯೋಜನೆಗಾಗಿ ಇಷ್ಟಪಟ್ಟು ಜಮೀನು ಮಾರಾಟ ಮಾಡಿದ ರೈತರು, ದುರ್ಗಾಪುರ ಎಕ್ಸ್‌ಪ್ರೆಸ್‌ವೇಯಲ್ಲಿ ರಸ್ತೆ ತಡೆ ನಡೆಸುವುದರೊಂದಿಗೆ ಸಿಂಗೂರಿನಲ್ಲಿ 12 ಗಂಟೆಗಳ ಬಂದ್ ಆರಂಭಿಸಿ ರೈಲು ತಡೆ, ರಸ್ತೆ ತಡೆ ಪ್ರತಿಭಟನೆಗಳನ್ನು ಹಮ್ಮಿಕೊಂಡರು.

ಜಮೀನು ಮಾರಾಟ ಮಾಡಿರುವ ರೈತರೀಗ, ನಾವೀಗ ಜಮೀನನ್ನೂ, ಜೀವನಾಂಶವಾದ ಉದ್ಯೋಗವನ್ನೂ ಕಳೆದುಕೊಳ್ಳುತ್ತಿದ್ದೇವೆ ಎಂದು ಹತಾಶೆ ವ್ಯಕ್ತಪಡಿಸಿದರು. ನ್ಯಾನೋ ಯೋಜನೆ ಪಶ್ಚಿಮ ಬಂಗಾಳದಿಂದಲೇ ಹೊರ ಹೊರಟಾಗ, ಟಾಟಾ ಕಾರು ಸ್ಥಾವರದಲ್ಲಿ ಉದ್ಯೋಗ ಪಡೆದಿದ್ದ ಉದ್ಯೋಗಿಗಳು ನಿರಾಶೆಯ ರೋಧನಗೈದರು.

ನ್ಯಾನೋವನ್ನು ಸಿಂಗೂರಿನಿಂದ ಹಿಂತೆಗೆಯುವ ನಿರ್ಧಾಕ ಹೊರಬೀಳುತ್ತಿರುವಂತೆ ವಿವಿಧ ರಾಜ್ಯಗಳು ಟಾಟಾಗೆ ತಮ್ಮ ರಾಜ್ಯದಲ್ಲಿ ಸ್ಥಾವರ ಸ್ಥಾಪಿಸುವಂತೆ ಆಹ್ವಾನ ನೀಡಿದವು. ಇದರನ್ವಯ ಗುಜರಾತ್ ಮತ್ತು ಕರ್ನಾಟಕದಲ್ಲಿ ನ್ಯಾನೊ ಕಾರು ಘಟಕವನ್ನು ಸ್ಥಳಾಂತರಗೊಳಿಸಲು ನಿರ್ಧರಿಸಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ್ ಮೋದಿಯವರೊಂದಿಗೆ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಟಾಟಾ ಮೋಟಾರ್ಸ್ ಅಧಿಕಾರಿಗಳು ಮಾತುಕತೆ ನಡೆಸಿ ಸ್ಥಳಾವಕಾಶ ಕಲ್ಪಿಸುವಂತೆ ಕೋರಿದರು.

ಸಿಂಗೂರಿಗೆ ಟಾಟಾ ಹೇಳಿರುವ ರತನ್ ಟಾಟಾ ಕಂಪೆನಿಗೆ ಕರ್ನಾಟಕ ರತ್ನಗಂಬಳಿ ಹಾಸುವ ಮೂಲಕ ಆಹ್ವಾನ ನೀಡಿದ ನಂತರ ಟಾಟಾ ಅಧಿಕಾರಿಗಳು ಕರ್ನಾಟಕದ ವಿವಿಧೆಡೆ ಸ್ಥಳ ಪರಿಶೀಲನೆ ನಡೆಸಿದರು. ಹುಬ್ಬಳ್ಳಿ ಹಾಗೂ ಧಾರವಾಡ ಸಮೀಪ ಘಟಕ ಸ್ಥಾಪಿಸಲು ಸರ್ಕಾರ ನೀಡಿರುವ ನೀಲನಕ್ಷೆಗಳನ್ನು ಪಡೆದುಕೊಂಡಿತು.

ಅಕ್ಟೋಬರ್ 7 ರಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರ್ ಮೋದಿಯವರನ್ನು ಭೇಟಿ ಮಾಡಿದ ಟಾಟಾ ಮೋಟಾರ್ಸ್‌ನ ಅಧಿಕಾರಿಗಳು ವಡೋದರಾ ಬಳಿಯಿರುವ ಚರೋಡಿಯ ಸನ್ನದ್ ಬಳಿ ಭೂಮಿ ನೀಡುವಂತೆ ಕೋರಿದರು.

ಟಾಟಾ ನ್ಯಾನೋ ಕಾರು ಘಟಕ ಸ್ಥಾಪನೆಗಾಗಿ ಗುಜರಾತ್ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ 1050 ಎಕರೆ ಭೂಮಿಯನ್ನು ನೀಡಲು ಒಪ್ಪಿಗೆ ಸೂಚಿಸಿ, ಸರ್ಕಾರ ಅಧಿಕೃತವಾಗಿ ಭೂಮಿಯನ್ನು ಟಾಟಾಗೆ ಹಸ್ತಾಂತರಿಸಲು ಸಿದ್ಧವಿರುವುದಾಗಿ ತಿಳಿಸಿತು.

ಟಾಟಾ ಮೋಟಾರ್ಸ್ ಸಂಸ್ಥೆ ರತನ್ ಟಾಟಾ ಅವರ 61ನೇ ಜನ್ಮ ದಿನದಂದು ಟಾಟಾ ಇಂಡಿಕಾ ಕಾರನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿತ್ತು. ಒಂದು ದಶಕದ ನಂತರ ಮತ್ತೆ ರತನ್ ಟಾಟಾ 71ನೇ ಜನ್ಮದಿನ ಅಂಗವಾಗಿ 'ನ್ಯಾನೋ' ಕಾರು ಮಾರುಕಟ್ಟೆಗೆ ಬರುತ್ತಿರುವುದು ಇತಿಹಾಸ ಮರುಕಳಿಸಿದಂತಾಗಿದೆ ಎಂದು ಟಾಟಾ ಮೋಟಾರ್ಸ್ ಸಂಸ್ಥೆ ಪ್ರಕಟಿಸಿತು.

ಟಾಟಾ ಮೋಟಾರ್ಸ್ ಮುಖ್ಯಸ್ಥ ರತನ್ ಟಾಟಾ, ಡಿಸೆಂಬರ್ 28ರಂದು ತಮ್ಮ 71ನೆ ಹುಟ್ಟುಹಬ್ಬದ ಆಚರಿಸಿಕೊಳ್ಳುತ್ತಿರುವುದರಿಂದ ಬಹುನಿರೀಕ್ಷೆಯ ಜಗತ್ತಿನ ಅತಿ ಕಡಿಮೆ ದರದ ನ್ಯಾನೋ ಕಾರು ಜಾಗತಿಕ ಮಾರುಕಟ್ಟೆಯಲ್ಲಿ ಹೊಸ ಅಲೆಯೊಂದನ್ನು ಸೃಷ್ಟಿಸಿ ಮಧ್ಯಮ ವರ್ಗದವರ ಕಾರುಕೊಳ್ಳುವ ಕನಸು ಶೀಘ್ರದಲ್ಲಿ ನನಸಾಗಲಿದೆ.

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

Show comments