Select Your Language

Notifications

webdunia
webdunia
webdunia
webdunia

ರಾಜಪಥದಲ್ಲಿ ಪ್ರಜಾರಾಜ್ಯದ ವೈಭವದರ್ಶನ

ರಾಜಪಥದಲ್ಲಿ ಪ್ರಜಾರಾಜ್ಯದ ವೈಭವದರ್ಶನ
ಅವಿನಾಶ್ ಬಿ.
PTI
1857ರ ಮೊದಲ ಸ್ವಾತಂತ್ರ್ಯ ಸಂಗ್ರಾಮದ 150ನೇ ವರ್ಷಾಚರಣೆ ಸಂದರ್ಭದಲ್ಲಿ ದೇಶವು 58ನೇ ಗಣರಾಜ್ಯೋತ್ಸವದ ಸಡಗರದಲ್ಲಿದೆ. ಹಿಂದಿನದನ್ನು ನೆನಪಿಸಿಕೊಳ್ಳುತ್ತಾ, ಹಿರಿಯರನ್ನು ಸ್ಮರಿಸುತ್ತಾ, ಭವಿತವ್ಯದ ಬಗ್ಗೆ ಯೋಜನೆ ರೂಪಿಸುವ, ಘೋಷಿಸುವ ಕಾರ್ಯಕ್ರಮ ಸ್ವಾತಂತ್ರ್ಯ ದಿನಾಚರಣೆ ಆದರೆ, ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ಭಾಷಣದ ಅಬ್ಬರವಿಲ್ಲ. ಭವಿಷ್ಯದ ಯೋಜನೆಗಳನ್ನು, ಕನಸುಗಳನ್ನು ನನಸಾಗಿಸುವ, ದೃಶ್ಯರೂಪಕ್ಕಿಳಿಸುವ ಕಾಯಕಕ್ಕೆ ಸೀಮಿತವಾದ ಈ ಸಡಗರದಲ್ಲಿ ಮಾತಿಗಿಲ್ಲ ಮಣೆ, ಕಾಯಕಕ್ಕಷ್ಟೇ ಮನ್ನಣೆ.

1950ರ ಜನವರಿ 26ಕ್ಕೆ ದೇಶದಲ್ಲಿ ವಿಶಿಷ್ಟ ಸ್ಥಾನ. ಯಾಕೆಂದರೆ ಬ್ರಿಟಿಷರ ದಾಸ್ಯದ ಕೊಂಡಿ ಕಳಚಿದ ಬಳಿಕ ನಮ್ಮವರೇ ರೂಪಿಸಿದ ಸಂವಿಧಾನವನ್ನು ಅಧಿಕೃತವಾಗಿ ಜಾರಿಗೊಳಿಸಿದ, 'ನಮ್ಮದು ಸಾರ್ವಭೌಮ ರಾಷ್ಟ್ರ' ಎಂದು ಇಡೀ ವಿಶ್ವಕ್ಕೆ ಎದೆತಟ್ಟಿ ಹೇಳಿದ ಐತಿಹಾಸಿಕ ದಿನವದು. 'ಭಾರತೀಯ ಗಣರಾಜ್ಯ'ವಾಗಿ ಗುರುತಿಸಲ್ಪಟ್ಟ ಕ್ಷಣವದು. ದೇಶದ ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದ ಮಹಾತ್ಮ ಗಾಂಧಿ ಮತ್ತು ಇತರ ಸ್ವಾತಂತ್ರ್ಯ ಹೋರಾಟಗಾರರು ಕಂಡ ಕನಸು ಸಾಕಾರಗೊಂಡದ್ದೂ ಅದೇ ದಿನ. ಭಾರತವು ಒಂದು ಸಂವಿಧಾನದ ದಾರಿದೀಪದೊಂದಿಗೆ ಸಾರ್ವಭೌಮ ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ ಉದಯವಾದ ದಿನವೂ ಇದೇ.

ಇದು ನಮ್ಮ ಪ್ರಾದೇಶಿಕ ಅನನ್ಯತೆಗಳೆಲ್ಲವೂ ಒಂದಾಗಿ ರಾಷ್ಟ್ರೀಯ ಐಕ್ಯಭಾವವಾಗುವ ಮತ್ತು ಅದನ್ನು ಪ್ರಕಟೀಕರಿಸುವ ಸುದಿನ. ಇಲ್ಲಿ ಜಾತಿ, ರಾಜ್ಯ, ಭಾಷೆ, ಪ್ರದೇಶ, ಪಂಥ, ಜನಾಂಗ... ಯಾವುದೂ ಗಣ್ಯವಾಗುವುದಿಲ್ಲ. ಭಾರತೀಯತೆಗೆ ಮತ್ತು ಕೇವಲ ಭಾರತೀಯತೆಗೆ, ವಿವಿಧತೆಯಿದ್ದರೂ ಏಕತೆಗೆ ಅಗ್ರಸ್ಥಾನ.

1947ರ ಆಗಸ್ಟ್ 15ರ ಆ ಮಧ್ಯರಾತ್ರಿಯಂದು ಕೈಗೊಂಡ ಪಣವನ್ನು ಸಾಕಾರಗೊಳಿಸಿದ ದಿನವಾಗಿ ಪರಿಗಣಿತವಾಗುತ್ತದೆ ಗಣರಾಜ್ಯ ದಿನ. ಇದು ಭವಿತವ್ಯದ ದೃಷ್ಟಿಕೋನದ, ನಾವು 'ಹೀಗೆಯೇ ಇರಬೇಕು' ಅಂತ ಕನಸು ಕಾಣುವ, ಹೊಣೆಗಾರಿಕೆಗಳನ್ನು ಒಪ್ಪಿಕೊಳ್ಳುವ ಮತ್ತು ಸಾಧನೆಗಳನ್ನು ಅವಲೋಕಿಸುತ್ತಾ, ನೀಡಿದ ಭರವಸೆಗಳನ್ನು ಈಡೇರಿಸುವ ಹೊಣೆಯನ್ನು ನೆನಪಿಸುತ್ತದೆ.

ಭಾರತವನ್ನು ಸತ್ಪಥದಲ್ಲಿ ಮುನ್ನಡೆಸುತ್ತಿರುವ ಸಂವಿಧಾನವನ್ನು ರೂಪಿಸಿದ ಮಹಾನ್ ನೇತಾರ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಾಧನೆಯ ಶಿಖರಗಳು ಇಲ್ಲಿ ಸದಾ ಸ್ಮರಣೀಯ. ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರವೇ ಈ ದೇಶವನ್ನು ಮುನ್ನಡೆಸಲು ಆರಂಭಿಸಿದ್ದು ಗಣರಾಜ್ಯೋತ್ಸವ ದಿನದಂದು.

ರಾಜಪಥದಲ್ಲಿ ರಾಜನಡಿಗೆ:
webdunia
PTI
ಇದು ಒಂದು ರೀತಿಯಲ್ಲಿ ಪ್ರಜೆಗಳ ದಿನಾಚರಣೆ. ಆಚರಣೆಗಳು ಆರಂಭವಾಗುವುದು ದೇಶಕ್ಕಾಗಿ ಹುತಾತ್ಮರಾದ ಮಹಾನ್ ಚೇತನಗಳನ್ನು ನೆನಪಿಸಿಕೊಳ್ಳುವ ಮೂಲಕ. ಆ ಬಳಿಕ ರಾಷ್ಟ್ರಪತಿಗಳು ದೇಶರಕ್ಷಣೆಗೆ ಅಪಾರ ಶೌರ್ಯ ಪ್ರದರ್ಶಿಸಿದ ಸೇನಾ ಬಲಗಳ ಮಹಾನ್ ಯೋಧರನ್ನು ಮತ್ತು ವಿಭಿನ್ನ ಕ್ಷೇತ್ರಗಳಲ್ಲಿ ಅದ್ಭುತ ಸಾಧನೆಗೈದ ನಾಗರಿಕರನ್ನು ಗೌರವಿಸಲಾಗುತ್ತದೆ.

ರಾಜಧಾನಿಯ ರಾಜಪಥದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ದಿನಗಳನ್ನು ನೆನಪಿಸುವ, ದೇಶದ ಸಾಂಸ್ಕೃತಿಕ ಕಲಾ ವೈಭವವನ್ನು ಪರಿಚಯಿಸುವ, ರಾಷ್ಟ್ರದ ಸಾರ್ವಭೌಮತೆಯ ಪ್ರತೀಕವಾದ ಸಶಸ್ತ್ರ ಸೇನಾಪಡೆಗಳ ಅತ್ಯಾಧುನಿಕ ಅಸ್ತ್ರಗಳನ್ನು ಲೋಕಮುಖಕ್ಕೆ ತೋರಿಸುವ ಸದಾ ಆಕರ್ಷಣೀಯವಾದ ರಾಜಮೆರವಣಿಗೆ ನಡೆಯುತ್ತದೆ.

ಈ ಬಾರಿಯ ಗಣರಾಜ್ಯೋತ್ಸವ ಆಚರಣೆಯ ಮುಖ್ಯ ಅತಿಥಿ ಫ್ರೆಂಚ್ ಅಧ್ಯಕ್ಷ ನಿಕೊಲಸ್ ಸರ್ಕೋಜಿ. ಪಂಜಾಬಿನಲ್ಲಿ ಭಗತ್ ಸಿಂಗ್ ಶತಮಾನೋತ್ಸವ ಆಚರಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಆ ರಾಜ್ಯದಿಂದ ಈ ಬಾರಿಯ ಸ್ತಬ್ಧಚಿತ್ರವು ಭಗತ್ ಸಿಂಗ್ ಮೇಲೆ ಕೇಂದ್ರೀಕೃತವಾಗಿರುತ್ತದೆ. ವಿವಿಧ ರಾಜ್ಯಗಳ ಜಾನಪದ ಕಲಾತಂಡಗಳು ತಮ್ಮ ತಮ್ಮ ರಾಜ್ಯದ ಕಲಾ ಶ್ರೀಮಂತಿಕೆಯನ್ನು ಪ್ರದರ್ಶಿಸುತ್ತಾ, ರಾಜಬೀದಿಯಲ್ಲಿ ನೃತ್ಯ ಪ್ರದರ್ಶಿಸುವುದನ್ನು ನೋಡುವುದೇ ಕಣ್ಣಿಗೆ ಹಬ್ಬ. ವಿವಿಧ ಸಚಿವಾಲಯಗಳು ತಮ್ಮ ತಮ್ಮ ಸಚಿವಾಲಯಗಳ ಯೋಜನೆಗಳನ್ನು ಪ್ರಚುರಪಡಿಸುತ್ತವೆ.

ರಾಜಘಾಟ್‌ನಿಂದ ವಿಜಯಪಥದುದ್ದಕ್ಕೂ ವೈಭವೋಪೇತ ಮೆರವಣಿಗೆ ಸಾಗುತ್ತದೆ. ಸೇನೆಗಳ ವಿವಿಧ ರೆಜಿಮೆಂಟ್‌ಗಳು ಆಕರ್ಷಕ ಪಥ ಸಂಚಲನ ನಡೆಸಿ ದೇಶರಕ್ಷಣೆಯ ಹೆಮ್ಮೆಯ ಕೈಂಕರ್ಯದ ಧೀಶಕ್ತಿ ಪ್ರಚುರಪಡಿಸುತ್ತವೆ. ದೇಶದ ವಿವಿಧೆಡೆಯಿಂದ ಆಯ್ಕೆಯಾಗುವ ಎನ್‌ಸಿಸಿ ಕೆಡೆಟ್‌ಗಳು ಈ ಪಥ ಸಂಚಲನದಲ್ಲಿ ಭಾಗವಹಿಸುವುದೊಂದು ಗೌರವ ಎಂದು ಭಾವಿಸುತ್ತಾರೆ.

ಈ ಪಥ ಸಂಚಲನ ಮುಗಿದ ಬಳಿಕ ವಿವಿಧ ರಾಜ್ಯಗಳ ಕಲಾ ಶ್ರೀಮಂತಿಕೆ ಬಿಂಬಿಸುವ ಟ್ಯಾಬ್ಲೋಗಳು ಹಿಂಬಾಲಿಸುತ್ತವೆ. ಈ ಚಲಿಸುವ ಸ್ತಬ್ಧಚಿತ್ರಗಳು ವಿಭಿನ್ನ ದೃಶ್ಯಾವಳಿಗಳನ್ನು ಹೊಂದಿದ್ದು, ನೋಡುಗರ ಕಣ್ಮನ ಸೆಳೆಯುತ್ತವೆ. ಪ್ರತಿಯೊಂದು ಸ್ತಬ್ಧಚಿತ್ರವೂ ದೇಶದ ಸಮೃದ್ಧ ಸಂಸ್ಕೃತಿಯ ಪರಿಚಯ ಮಾಡಿಕೊಡುತ್ತದೆ. ಒಟ್ಟಿನಲ್ಲಿ ದೇಶವು ನಂಬಿದ "ವಿವಿಧತೆಯಲ್ಲಿ ಏಕತೆ" ಎಂಬ ಧ್ಯೇಯ ವಾಕ್ಯ ಇಲ್ಲಿ ಸಾಕಾರಗೊಳ್ಳುತ್ತದೆ.

ಈ ದಿನಗಳಲ್ಲಿ ಪ್ರಜಾಪ್ರಭುತ್ವದ ಪರಿಕಲ್ಪನೆ ಎಲ್ಲೋ ಒಂದು ಕಡೆ ದಾರಿ ತಪ್ಪಿದಂತೆ ಕಾಣಿಸುತ್ತಿರುವುದು ಸಹಜ. ಪ್ರಜೆಗಳಾಗಿದ್ದುಕೊಂಡು ಪ್ರಭುಗಳಾದವರು ಆರ್ಥಿಕವಾಗಿ ಶ್ರೀಮಂತರಾಗುತ್ತಾರೆ, ಹೃದಯ ಶ್ರೀಮಂತಿಕೆ ಕಳೆದುಕೊಳ್ಳುತ್ತಿದ್ದಾರೆ. ಹಾಗಾಗಬಾರದು. ಅದೇ ಪ್ರಜೆಗಳನ್ನು ನೋಡಿ... ಹೃದಯ ಶ್ರೀಮಂತಿಕೆ ಅವರಲ್ಲಿ ಮೇರೆ ಮೀರುವಷ್ಟಿದೆ. ಆದರೆ ಸೀಮಿತ ವರ್ಗದ ಸೊತ್ತಾಗುತ್ತಿರುವ ಆರ್ಥಿಕ ಶ್ರೀಮಂತಿಕೆ ಪ್ರಜೆಗಳಿಗೂ ತಲುಪಬೇಕಾಗಿದೆ.

ಪ್ರಜಾಪ್ರಭುತ್ವದ ಧ್ಯೇಯ ಸಾಕಾರಗೊಳ್ಳಲಿ. ದೇಶವು ಸತ್ಪಥದಲ್ಲಿ ಮುನ್ನಡೆಯಲಿ.

Share this Story:

Follow Webdunia kannada